ಗೃಹ ಸಚಿವರ ಕಚೇರಿಯಲ್ಲೇ ಮೊಬೈಲ್ ಕಳ್ಳತನ!
ಬೆಂಗಳೂರು, ನವೆಂಬರ್ 13 : ಅಚ್ಚರಿಯಾದರೂ ಇದು ಸತ್ಯ. ರಾಜ್ಯದ ಗೃಹ ಸಚಿವರ ಕಚೇರಿಯಲ್ಲಿಯೇ ಮೊಬೈಲ್ ಕಳ್ಳತನವಾಗಿದೆ. ಗೃಹ ಸಚಿವ ಪರಮೇಶ್ವರ ಅವರ ಕಚೇರಿಗೆ ಪೂಜೆ ಮಾಡಲು ಬಂದ ಅರ್ಚಕರ ಮೊಬೈಲ್ ನಾಪತ್ತೆಯಾಗಿದೆ.
ಶುಕ್ರವಾರ ವಿಕಾಸಸೌಧದಲ್ಲಿ ಡಾ.ಜಿ.ಪರಮೇಶ್ವರ ಅವರ ನೂತನ ಕಚೇರಿ ಪ್ರವೇಶವಿತ್ತು. ಕಚೇರಿಗೆ ಪೂಜೆ ಮಾಡಲೆಂದು ಗಂಗಾನಗರದ ಆಂಜನೇಯ ದೇವಾಲಯದ ಅರ್ಚಕ ಕೃಷ್ಣಮೂರ್ತಿ ಅವರು ಆಗಮಿಸಿದ್ದರು. ಅವರ ಮೊಬೈಲ್ ಕಚೇರಿಯಲ್ಲಿಯೇ ಕಳುವಾಗಿದೆ. [ಪರಮೇಶ್ವರ ಪರಿಚಯ ಓದಿ]

ಸ್ವತಃ ಗೃಹ ಸಚಿವ ಪರಮೇಶ್ವರ ಅವರೇ ಈ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಅರ್ಚಕ ಕೃಷ್ಣಮೂರ್ತಿ ಅವರು ಕಚೇರಿ ಪೂಜೆ ನೆರವೇರಿಸಿ ಎಲ್ಲರಿಗೂ ಮಂಗಳಾರತಿ ನೀಡುವಾಗ ಮೊಬೈಲ್ ಅವರ ಬಳಿ ಇತ್ತು. ಮಂಗಳಾರತಿ ನೀಡಿ ತಿರುಗುವಷ್ಟರಲ್ಲಿ ಮೊಬೈಲ್ ನಾಪತ್ತೆಯಾಗಿದೆ. ಕಳುವಾದ ವಿಚಾರ ತಿಳಿಯುತ್ತಿದ್ದಂತೆ ಅಲ್ಲಿದ್ದ ಪೊಲೀಸರು ತಪಾಸಣೆ ನಡೆಸಿದರು. ಆದರೆ, ಮೊಬೈಲ್ ಮಾತ್ರ ಪತ್ತೆಯಾಗಲಿಲ್ಲ. [ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿಯನ್ನೂ ತೋಡುತ್ತಿಲ್ಲ ಸರಕಾರ]
ಅಕ್ಟೋಬರ್ 28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವರು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಕೆಪಿಸಿಸಿ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಡಾ.ಜಿ.ಪರಮೇಶ್ವರ ಅವರು ಅಂದು ಸಂಪುಟ ಸೇರಿದ್ದು, ಅವರಿಗೆ ಗೃಹ ಖಾತೆ ಹೊಣೆ ನೀಡಲಾಗಿದೆ.












Click it and Unblock the Notifications