ದ್ರೌಪದಿ ಮುರ್ಮು ದಾಖಲೆ ಮತಗಳಿಂದ ಗೆಲ್ಲಲಿದ್ದಾರೆ; ಸಿ. ಟಿ. ರವಿ
ಬೆಂಗಳೂರು, ಜುಲೈ, 18: ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ದಾಖಲೆ ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, "ಸಮರ್ಥನೆ ಮಾಡಿದ ಪಕ್ಷಗಳ ಬಲವನ್ನು ಗಮನಿಸಿದರೆ ಶೇಕಡಾ 70ಕ್ಕೂ ಹೆಚ್ಚು ಮತಗಳು ಸಿಗುವ ನಿರೀಕ್ಷೆ ಇದೆ. ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ಒಬ್ಬ ಆದಿವಾಸಿ ಮಹಿಳೆಗೆ ರಾಷ್ಟ್ರಪತಿಯಾಗುವ ಅವಕಾಶ ಲಭಿಸುತ್ತದೆ ಎಂಬ ನಂಬಿಕೆ ಇದೆ" ಎಂದರು.
ದೇಶದಲ್ಲಿ ರಾಷ್ಟ್ರಪತಿ ಚುನಾವಣೆಗೆ ಮತದಾನ ಆರಂಭವಾಗಿದ್ದು, ಹಲವು ನಾಯಕರು ತಮ್ಮ ಅಭ್ಯರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ. ಇಷ್ಟು ದಿನ ಅಭ್ಯರ್ಥಿಗಳನ್ನ ಗೆಲ್ಲಿಸಲು ತೆರೆಮರೆಯಲ್ಲಿ ಕಸರತ್ತುಗಳನ್ನು ನಡೆಸಿದ್ದು, ಇಂದು ಚುನಾವಣಾ ಕಣ ರಂಗೇರಿದೆ. ಕೆಲವರು ತಮ್ಮ ಅಭ್ಯರ್ಥಿಗಳ ಭವಿಷ್ಯವನ್ನು ನುಡಿದಿದ್ದಾರೆ. ಅದೇ ರೀತಿ ಸಿ. ಟಿ. ರವಿ ಅವರು ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಭವಿಷ್ಯವನ್ನು ಹೇಳಿದ್ದಾರೆ.

ಆದಿವಾಸಿ ಮಹಿಳೆ ಅಭ್ಯರ್ಥಿಯನ್ನು ಇತರ ಎಲ್ಲ ಪಕ್ಷಗಳು ಸ್ವಾಗತಿಸಿ ಬೆಂಬಲಿಸುವ ನಿರೀಕ್ಷೆ ನಮ್ಮದಾಗಿತ್ತು. ಆದರೆ ಹಾಗಾಗದೆ ಇರುವುದು ದುರ್ಧೈವದ ಸಂಗತಿ. ಕೆಲವು ರಾಜಕೀಯ ಪಕ್ಷಗಳು ಬಿಜೆಪಿಯನ್ನು ವಿರೋಧಿಸಬೇಕೆಂಬ ಭರದಲ್ಲಿ ರಾಷ್ಟ್ರವನ್ನು, ಆದಿವಾಸಿ ಮಹಿಳೆಯ ಉಮೇದಾರಿಕೆಯನ್ನು ವಿರೋಧಿಸಿ ಅವರ ಸಾಮರ್ಥ್ಯದ ಬಗ್ಗೆ ಅಪನಂಬಿಕೆಯ ಮಾತನಾಡಿದರು ಎಂದರು.
ಒಬ್ಬ ಆದಿವಾಸಿ ಮಹಿಳೆಗೆ ಕಲಿಯಲು ಸೌಲಭ್ಯಗಳೇ ಇರಲಿಲ್ಲ. ಅದರಲ್ಲೂ ಆಕೆ ಶಿಕ್ಷಣವನ್ನು ಮೈಗೂಡಿಸಿಕೊಂಡು ಸರ್ಕಾರಿ ನೌಕರಿ, ಉಪನ್ಯಾಸಕಿ, ಕಾರ್ಪೊರೇಟರ್, ಶಾಸಕಿ, ಒಡಿಶಾ ಸರ್ಕಾರದಲ್ಲಿ ಸಚಿವೆಯಾಗಿ ಹಲವು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಹಾಗೂ ಜಾರ್ಖಂಡ್ ರಾಜ್ಯದ ರಾಜ್ಯಪಾಲೆಯಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ವಿವರಿಸಿದರು.
ದ್ರೌಪದಿ ಮುರ್ಮು ಅವರನ್ನು ರಬ್ಬರ್ ಸ್ಟಾಂಪ್ ಎಂದು ಕರೆದಿರುವುದು ಆದಿವಾಸಿ ಜನಾಂಗದ ಬಗ್ಗೆ ಅವರಿಗೆ ಇರುವ ಅಸಡ್ಡೆಯ ಭಾವನೆಯನ್ನು ತೋರಿಸುತ್ತದೆ. ಕಾಂಗ್ರೆಸ್, ಆರ್‌ಜೆಡಿ ಸೇರಿದಂತೆ ಹಾಗೆ ಕರೆದವರು ರಾಷ್ಟ್ರದ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಬಿಜೆಪಿ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ನಮಗೆ ಮೊದಲನೇ ಬಾರಿ ರಾಷ್ಟ್ರಪತಿ ಆಯ್ಕೆಯ ಅವಕಾಶ ಸಿಕ್ಕಾಗ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಗೌರವಾನ್ವಿತ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದೆವು. ಅವರು ಜನರ ಹೃದಯವನ್ನು ಗೆದ್ದಿದ್ದರು. ಎರಡನೇ ಬಾರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದಲಿತ ವರ್ಗದ ಗೌರವಾನ್ವಿತರಾದ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಿದ್ದೇವೆ. ಅವರು ಕೂಡ ಕಳಂಕರಹಿತ ಉತ್ತಮ ಆಡಳಿತ ಕೊಟ್ಟಿದ್ದಾರೆ. ಮೂರನೇ ಬಾರಿ ಅವಕಾಶ ಲಭಿಸಿದಾಗ ಆದಿವಾಸಿ ಮಹಿಳೆಗೆ ಅವಕಾಶ ಕೊಟ್ಟು ಹೊಸ ದಾಖಲೆ ಬರೆದಿದ್ದೇವೆ ಎಂದು ತಿಳಿಸಿದರು.
ಸಾಮಾಜಿಕ ನ್ಯಾಯದ ಮುಖವಾಡ ಹಾಕಿದ ರಾಜಕೀಯ ಪಕ್ಷಗಳು ಆದಿವಾಸಿ ಮಹಿಳೆಯ ಉಮೇದುವಾರಿಕೆಯನ್ನು ವಿರೋಧಿಸುವ ಮೂಲಕ ಹಾಗೂ ಅವರನ್ನು ರಬ್ಬರ್ ಸ್ಟಾಂಪ್ ಎಂದು ಅಪಮಾನಿಸಿದರು. ಸಿದ್ದರಾಮಯ್ಯನವರೇ ನಿಮ್ಮ ಅಹಿಂದ ಟ್ರಂಪ್ ಕಾರ್ಡ್ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ನಾನು ಯಾವತ್ತೂ ದಲಿತರು, ಹಿಂದುಳಿದವರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರ ಪರ ಎನ್ನುತ್ತಿದ್ದಿರಲ್ಲವೇ? ಬದ್ಧತೆ ಇದ್ದರೆ ನೀವು ಆದಿವಾಸಿ ಮಹಿಳೆ ಮುರ್ಮು ಅವರ ಬೆಂಬಲಕ್ಕೆ ನಿಲ್ಲಬೇಕಾಗಿತ್ತು. ಸಿದ್ದರಾಮಯ್ಯನವರ ಮುಖವಾಡ ಕಳಚಿಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮಗೆ ಬದ್ಧತೆ ಇಲ್ಲದೆ ಇರುವುದು ಈ ಉಮೇದುವಾರಿಕೆಯಿಂದ ವ್ಯಕ್ತವಾಗಿದೆ ಎಂದು ಟೀಕಿಸಿದರು.












Click it and Unblock the Notifications