Karnataka Election: ನಾಮಪತ್ರ ತಿರಸ್ಕಾರ ಭೀತಿ- ಒಂದೇ ಕುಟುಂಬದಿಂದ ಇಬ್ಬರ ಉಮೇದುವಾರಿಕೆ, ಎಲ್ಲಿ, ಯಾರು ತಿಳಿಯಿರಿ
ಬೆಂಗಳೂರು, ಏಪ್ರಿಲ್ 21: ತಾಂತ್ರಿಕ ಅಥವಾ ಕಾನೂನು ಕಾರಣಗಳಿಂದ ನಾಮಪತ್ರ ತಿರಸ್ಕೃತಗೊಳ್ಳಬಹುದು ಎಂಬ ಭೀತಿ ಹಿರಿಯ ನಾಯಕರಿಗೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಿರಿಯ ನಾಯಕರ ಕುಟುಂಬ ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮೂವರು ಕಾಂಗ್ರೆಸ್ ನಾಯಕರು ಮತ್ತು ಒಬ್ಬ ಬಿಜೆಪಿ ಸಚಿವರ ಕುಟುಂಬ ಸದಸ್ಯರು ಒಂದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಗುರುವಾರ ನಾಮಪತ್ರ ಸಲ್ಲಿಕೆಗೆ ಕೆಲವೇ ಗಂಟೆಗಳ ಮೊದಲು, ಕರ್ನಾಟಕದ ಏಕೈಕ ಕಾಂಗ್ರೆಸ್ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಅವರು ತಮ್ಮ ಸಹೋದರ ಮತ್ತು ಸಿಎಂ ಆಕಾಂಕ್ಷಿ ಡಿಕೆ ಶಿವಕುಮಾರ್ ಸ್ಪರ್ಧಿಸಿರುವ ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.

ಸುರೇಶ್ ಮತ್ತು ಶಿವಕುಮಾರ್ ಒಬ್ಬರೇ ಅಲ್ಲ. ಕಾಂಗ್ರೆಸ್‌ನ ಮಾಜಿ ಸಚಿವರಾದ ಕೆಜೆ ಜಾರ್ಜ್ ಮತ್ತು ಸತೀಶ್ ಜಾರಕಿಹೊಳಿ ಅವರು ತಮ್ಮ ಕುಟುಂಬದ ಸದಸ್ಯರೊಬ್ಬರನ್ನು ಆಯಾ ಸ್ಥಾನಗಳಿಂದ ಉಮೇದುವಾರಿಕೆ ಮಾಡಿದ್ದಾರೆ. ಜಾರ್ಜ್ ಪುತ್ರ ರಾಣಾ ಬೆಂಗಳೂರಿನ ಸರ್ವಜ್ಞನಗರದಲ್ಲಿ ನಾಮಪತ್ರ ಸಲ್ಲಿಸಿದ್ದರೆ, ಜಾರಕಿಹೊಳಿ ಪುತ್ರಿ ಬೆಳಗಾವಿ ಜಿಲ್ಲೆಯ ಯಮಕನಮರಡಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಸಚಿವ ಕೆ.ಗೋಪಾಲಯ್ಯ ಅವರ ಪತ್ನಿ ಹೇಮಲತಾ ಕೂಡ ತಮ್ಮ ಪತಿ ಕ್ಷೇತ್ರವಾದ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಿಂದ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಸುರೇಶ್ ಅವರು ತಮ್ಮ ಪತ್ರಗಳನ್ನು 'ಮುನ್ನೆಚ್ಚರಿಕೆ ಕ್ರಮ'ವಾಗಿ ಸಲ್ಲಿಸಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. 'ಅವರು (ಬಿಜೆಪಿ) ರಾಹುಲ್ ಗಾಂಧಿಯನ್ನು ಬಿಡಲಿಲ್ಲ. ಅವರು ನನ್ನನ್ನು ಬಿಡುತ್ತಾರೆಯೇ? ಆದರೆ ನಾನು ಅವರಿಗೆ ಎಂದಿಗೂ ಶರಣಾಗುವುದಿಲ್ಲ ಎಂದು ಏಪ್ರಿಲ್ 17 ರಂದು ನಾಮಪತ್ರ ಸಲ್ಲಿಸಿರುವ ಶಿವಕುಮಾರ್ ಮಂಡ್ಯದಲ್ಲಿ ನಡೆದ ಸಭೆಯೊಂದರಲ್ಲಿ ಹೇಳಿದ್ದಾರೆ. ಅವರ ಸಹೋದರನ ಉಮೇದುವಾರಿಕೆ ಕಾಂಗ್ರೆಸ್‌ನ ಬ್ಯಾಕ್-ಅಪ್ ಯೋಜನೆಯ ಭಾಗವಾಗಿದೆ, ಏಕೆಂದರೆ ಅವರು ಬಿಜೆಪಿಯ ಕೆಲವು ಪಿತೂರಿಯನ್ನು ಶಂಕಿಸಿದ್ದಾರೆ' ಎಂದು ಅವರು ತಿಳಿಸಿದ್ದಾರೆ.

'ಕಾಂಗ್ರೆಸ್ ತೊರೆದು ಬಿಜೆಪಿ ಸೇರಬೇಕೆಂದು ಅವರು ಬಯಸಿದ್ದರು. ಡಿಕೆಶಿ ಅವರು ಒತ್ತಡಕ್ಕೆ ಮಣಿಯಲು ನಿರಾಕರಿಸಿದ್ದರಿಂದ ಬಿಜೆಪಿಯು ನನ್ನ ಸಹೋದರನಿಗೆ ವರ್ಷಗಳಿಂದ ಕಿರುಕುಳ ನೀಡುತ್ತಿದೆ. ಈಗ, ಶಿವಕುಮಾರ್ ಅವರ ನಾಮಪತ್ರ ತಿರಸ್ಕೃತವಾಗುವುದನ್ನು ಖಾತ್ರಿಪಡಿಸುವ ಮೂಲಕ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯನ್ನು ಕಡಿಮೆ ಮಾಡಲು ಅವರು ಪಿತೂರಿ ನಡೆಸುತ್ತಿದ್ದಾರೆಂದು ನಾವು ಗ್ರಹಿಸಬಹುದು. ಹೀಗಾಗಿ ನಾನು ಬ್ಯಾಕ್‌ಅಪ್ ಆಗಿ ನಾಮಪತ್ರ ಸಲ್ಲಿಸಿದ್ದೇನೆ' ಎಂದು ಸುರೇಶ್ ಹೇಳಿದ್ದಾರೆ.
ಪಕ್ಷವು ಸುರೇಶ್‌ಗೆ ಹೆಚ್ಚುವರಿ ಬಿ-ಫಾರಂ ನೀಡಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ತಮ್ಮ ಸಹೋದರನ ನಾಮಪತ್ರ ತಿರಸ್ಕೃತಗೊಂಡರೆ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ವಿಫಲವಾದಲ್ಲಿ ಈ ಬಿ-ಫಾರ್ಮ್ ಅನ್ನು ಪರಿಗಣಿಸುವಂತೆ ಸುರೇಶ್ ಅವರು ಚುನಾವಣಾಧಿಕಾರಿಗೆ ತಿಳಿಸಿದ್ದಾರೆ.
ಅಭ್ಯರ್ಥಿಗಳು ಭರ್ತಿ ಮಾಡಬೇಕಾದ ನಾಮಪತ್ರಗಳಿಗೆ ಕೆಲವು ಹೊಸ ಸೇರ್ಪಡೆಗಳಿವೆ. ಅಪರಾಧ ಪ್ರಕರಣಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಅಭ್ಯರ್ಥಿಗಳು ನೀಡಬೇಕಿದೆ. ಇದು ಕೆಲವು ಸಂಕೀರ್ಣತೆಯನ್ನು ಒಳಗೊಂಡಿದೆ ಎಂದು ಕರ್ನಾಟಕ ಕಾಂಗ್ರೆಸ್ ಕಾನೂನು ಕೋಶದ ವಕೀಲ ದಿವಾಕರ್ ಎನ್ ಹೇಳಿದ್ದಾರೆ.
'ಆಕಾಂಕ್ಷಿಗಳು ಬುಕ್ ಆಗಿರುವ ಪ್ರಕರಣಗಳನ್ನು ಉಲ್ಲೇಖಿಸಬೇಕಿದೆ. ದಿನಾಂಕಗಳ ಜೊತೆಗೆ ಆರೋಪಗಳನ್ನು ಸಲ್ಲಿಸಲಾಗಿದೆಯೇ ಎಂದು ನಮೂದಿಸಬೇಕಿದೆ. ಇದಕ್ಕೆ ಯಾವುದೇ ಮೇಲ್ಮನವಿಗಳನ್ನು ಸಲ್ಲಿಸಿದ್ದರೆ ಅದನ್ನು ಕಡ್ಡಾಯವಾಗಿ ನಮೂದಿಸಬೇಕಿದೆ' ಎಂದು ದಿವಾಕರ್ ಹೇಳಿದ್ದಾರೆ. ಅಭ್ಯರ್ಥಿಗಳು ತಮ್ಮ ಎಲ್ಲಾ ( ಸ್ಥಳೀಯ ಹಾಗೂ ಕಡಲಾಚೆಯ ) ಆಸ್ತಿಗಳನ್ನು ಘೋಷಿಸಬೇಕು ಎಂದು ಅವರು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಕುರಿತು ಪಕ್ಷವು ಹತ್ತು ದಿನಗಳ ಕಾಲ ತರಬೇತಿ ನೀಡಿದೆ. ನಾಮಪತ್ರ ಪರಿಶೀಲನೆ ಹಂತದಲ್ಲಿಯೇ ತಮ್ಮ ವಿರುದ್ಧ ಷಡ್ಯಂತ್ರ ನಡೆಯುವ ಭೀತಿ ಕಾಂಗ್ರೆಸ್ ನಾಯಕರಿಗೆ ಎದುರಾಗಿರುವುದು ಕಂಡುಬಂದಿದೆ.












Click it and Unblock the Notifications