CM Siddaramaiah: ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದು ತಪ್ಪಲ್ಲ: ಬಿಜೆಪಿ ನಾಯಕನಿಂದಲೇ ಬಹುಪರಾಕ್
ಮೈಸೂರಿನ ರಸ್ತೆಯೊಂದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಇಡುವ ವಿಚಾರಕ್ಕೆ ರಾಜಕೀಯದಲ್ಲಿ ಪರ ವಿರೋಧದ ಮಾತುಗಳು ಕೇಳಿಬರುತ್ತಿವೆ. ಇದೀಗ ಬಿಜೆಪಿ ನಾಯಕನೇ ಖುದ್ದಾಗಿ ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ. ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಟ್ಟರೆ ತಪ್ಪೇನು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಈ ರೀತಿ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು 40 ವರ್ಷದಿಂದ ವಿಧಾನಸಭೆಗೆ ಹೋಗಿದ್ದಾರೆ. ಹಾಗಾಗಿ ಅವರ ಹೆಸರನ್ನು ರಸ್ತೆಗೆ ಇಡುವುದರಲ್ಲಿ ಏನು ತಪ್ಪು ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯನವರನ್ನು ನಾನು ಸೈದ್ಧಾಂತಿಕವಾಗಿ ಈಗಲೂ ಮತ್ತು ಮುಂದೆಯೂ ವಿರೋಧಿಸುತ್ತೇನೆ. ಆದರೆ ರಸ್ತೆಗೆ ಅವರ ಹೆಸರು ಇಡುವ ವಿಚಾರದಲ್ಲಿ ಸಣ್ಣತನ ಬೇಡ ಎಂದು ಸಿದ್ದರಾಮಯ್ಯ ಸಿಎಂ ಪರವಾಗಿ ಮಾತನಾಡಿದ್ದಾರೆ.

ಮೈಸೂರು ಪಾಲಿಕೆಯು ಇಲ್ಲಿನ ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ರಸ್ತೆ ಎಂದು ನಾಮಕರಣ ಮಾಡಲು ಮುಂದಾಗಿದೆ. ಇದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬೆಳವಣಿಗೆ ನಡುವೆ ಬಿಜೆಪಿ ನಾಯಕ ಪ್ರತಾಪ್ ಸಿಂಹ ಅವರ ಹೇಳಿಕೆಯು ಅಚ್ಚರಿ ತರಿಸಿದೆ.
ಸಿದ್ದರಾಮಯ್ಯ ಅವರು ಸ್ಪಷ್ಟ ಬಹುಮತದ ಜೊತೆ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಮೈಸೂರಿಗೆ ಸಿದ್ದರಾಮಯ್ಯನವರ ಕೊಡುಗೆ ಬಹಳಷ್ಟಿದೆ. ಹಾಗಾಗಿ ಅವರ ಹೆಸರು ರಸ್ತೆ ಇಡುವುದರಲ್ಲಿ ಸಣ್ಣತನ ಮಾಡುವುದಿಲ್ಲ ಎಂದೂ ಪ್ರತಾಪ್ ಸಿಂಹ ಹೇಳಿದ್ದಾರೆ.

ವಿಜಯೇಂದ್ರ ವಿರೋಧ: ಮತ್ತೊಂದೆಡೆ ಈ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಮೈಸೂರು ಸಂಸ್ಥಾನ ಕಟ್ಟಿ ಬೆಳೆಸಿದವರು ಮೈಸೂರಿನ ರಾಜ ಮಹಾರಾಜರು, ಅಂತಹ ಶ್ರೇಷ್ಠ ರಾಜ ಮನೆತನದವರ ಹೆಸರಿರುವ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮದೇ ಹೆಸರಿಟ್ಟುಕೊಳ್ಳಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಜನಪ್ರತಿನಿಧಿಗಳೇ ಇಲ್ಲದ ಮೈಸೂರು ಮಹಾನಗರ ಪಾಲಿಕೆ ಈ ನಿರ್ಧಾರ ತೆಗೆದುಕೊಂಡಿರುವುದು ಎಷ್ಟು ಕ್ರಮಬದ್ಧ ಹಾಗೂ ಎಷ್ಟು ಸಮಂಜಸ? ತಾವೇ ಅಧಿಕಾರದಲ್ಲಿದ್ದು ತಮ್ಮ ಹೆಸರನ್ನೇ ಪ್ರತಿಷ್ಠಾಪಿಸಿಕೊಳ್ಳಲು ಹೊರಟಿರುವ ಮುಖ್ಯಮಂತ್ರಿಗಳಿಗೆ ನೈತಿಕತೆ ಚುಚ್ಚುವುದಿಲ್ಲವೇ? ತುಘಲಕ್ ಆಡಳಿತ ಅನುಸರಿಸುವವರಲ್ಲಿ ಮಾತ್ರ ಇಂತಹ ನಡೆಯನ್ನು ಕಾಣಲು ಸಾಧ್ಯ ಎಂದು ಆಕ್ರೋಶ ಹೊರಹಾಕಿದ್ದಾರೆ.

ಜೆಡಿಎಸ್‌ನಿಂದಲೂ ವಿರೋಧ: ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರು ನಾಮಕರಣ ಮಾಡುವ ವಿಚಾರವಾಗಿ ಜೆಡಿಎಸ್ ಪಕ್ಷ ಕೂಡ ವಿರೋಧ ವ್ಯಕ್ತಪಡಿಸಿದೆ. ಐತಿಹಾಸಿಕ ಮೈಸೂರು ನಗರದ ಕೆಆರ್‌ಎಸ್ ರಸ್ತೆಗೆ "ಸಿದ್ದರಾಮಯ್ಯ ಆರೋಗ್ಯ ಮಾರ್ಗ" ಎಂದು ಹೆಸರಿಡಲು ಹೊರಟಿರುವ ಮೈಸೂರು ಮಹಾನಗರ ಪಾಲಿಕೆಯ ತೀರ್ಮಾನ ಖಂಡನೀಯ ಎಂದು ಹರಿಹಾಯ್ದಿದೆ.
ಮುಡಾದಲ್ಲಿ ಅಕ್ರಮವಾಗಿ ಸೈಟು ಪಡೆದು ವಂಚಿಸಿರುವ A1 ಆರೋಪಿ, 420 ಸಿದ್ದರಾಮಯ್ಯ ನ್ಯಾಯಾಲಯ ಹಾಗೂ ಲೋಕಾಯುಕ್ತದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಮಂಡಳಿ ಅಸ್ತಿತ್ವದಲ್ಲಿಲ್ಲ. ಕರ್ನಾಟಕ ಸರ್ಕಾರ ನಿಯೋಜಿಸಿರುವ ಅಧಿಕಾರಿಗಳು ಸಿದ್ದರಾಮಯ್ಯನ ಋಣ ತೀರಿಸಲು ಅವರ ಹೆಸರಿಡಲು ನಿರ್ಣಯ ಕೈಗೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.
ಮುಡಾವನ್ನು ಮುಕ್ಕಿ ತಿಂದಿರುವ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನ ಹೆಸರನ್ನು ರಸ್ತೆಗೆ ನಾಮಕರಣ ಮಾಡುವುದು, ಐತಿಹಾಸಿಕ ನಗರಿ ಮೈಸೂರಿಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಎಸಗುವ ದ್ರೋಹ ಮತ್ತು ಅಪಮಾನ ಎಂದು ಜೆಡಿಎಸ್ ದೂರಿದೆ.












Click it and Unblock the Notifications