ಅಭಿಮಾನಿಗಳ ಆಕ್ರೋಶ: ಶಿವರಾಜ್ ಕುಮಾರ್ ಬಗ್ಗೆ ಹೇಳಿದ ಮಾತನ್ನು ಹಿಂಪಡೆದ ಪ್ರಶಾಂತ್ ಸಂಬರ್ಗಿ
ಬೆಂಗಳೂರು, ಮೇ 08: ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದ್ದು ಬಹಿರಂಗ ಪ್ರಚಾರಕ್ಕೆ ಸೋಮವಾರ ತೆರೆ ಬೀಳಲಿದೆ. ಈಗಾಗಲೇ ಪಕ್ಷದ ನಾಯಕರು, ಕೇಂದ್ರದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯಾದ್ಯಂತ ಭರ್ಜರಿ ಪ್ರಚಾರ ನಡೆಸಿದ್ದಾರೆ. ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ದುನಿಯಾ ವಿಜಯ್, ರಮ್ಯಾ ಸೇರಿದಂತೆ ಅನೇಕ ಸಿನಿಮಾ ಕಲಾವಿದರು ಕೂಡ ಈ ಬಾರಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.
ವರುಣಾ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪರ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ಪರ ಶಿವಣ್ಣ ಪ್ರಚಾರಕ್ಕೆ ಬಿಗ್‌ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ವ್ಯಂಗ್ಯವಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಲವು ಪೋಸ್ಟ್‌ಗಳನ್ನು ಹಾಕಿದ್ದರು.

ಪ್ರಶಾಂತ್ ಸಂಬರ್ಗಿ ಪೋಸ್ಟ್ ವಿರುದ್ಧ ಶಿವರಾಜ್ ಕುಮಾರ್ ಅಭಿಮಾನಿಗಳು ವ್ಯಾಪಕ ಆಕ್ರೋಶ ಹೊರಹಾಕಿದ್ದರು. ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಶಾಂತ್ ಸಂಬರ್ಗಿ ತಮ್ಮ ಮಾತನ್ನು ಹಿಂಪಡೆದಿದ್ದಾರೆ.
'ಶಿವಣ್ಣ ಮತ್ತೆ ಇನೊಬ್ಬ ನಮ್ಮ ಆಪ್ತ ಮಿತ್ರನೊಂದಿಗೆ ಇದೀಗ ತಾನೇ ಮಾತನಾಡಿದೆ. ಶಿವಣ್ಣ ಅವರಿಗೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ. ಶಿವಣ್ಣ ಅವರ ತಂದೆಯ ಬಯಕೆಯಂತೆ ಅವರು ರಾಜಕೀಯದಿಂದ ದೂರವಾಗಿದ್ದರೆ. ನಾನು ಅವರ ಬಗ್ಗೆ ಬರೆದಿರುವ ನನ್ನ ಪೋಸ್ಟ್ ಅನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಮತ್ತು ಶಿವಣ್ಣ ಮತ್ತು ಅವರ ಅಭಿಮಾನಿಗಳಿಗೆ ಕರ್ನಾಟಕದಾದ್ಯಂತ ನೋಯಿಸಬಾರದು ಎಂದು ನಾನು ಬಯಸುತ್ತೇನೆ' ಎಂದು ಪ್ರಶಾಂತ್ ಸಂಬರ್ಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಶಿವಣ್ಣ ಬಗ್ಗೆ ಈ ಹಿಂದೆ ಪ್ರಶಾಂತ್ ಸಂಬರ್ಗಿ ಹೇಳಿದ್ದೇನು?
'ಶಿವಣ್ಣ ಯಾವಾಗಲೂ ಸ್ಕ್ರಿಪ್ಟ್ ಕೇಳಲ್ಲ. ಅವರಿಗೆ ಹಣ ಅಷ್ಟೇ ಮುಖ್ಯ. ಸಿನಿಮಾ ಫ್ಲಾಪ್ ಆದರೂ ಅವರು ಕೇಳುವುದಿಲ್ಲ. ಮತ್ತೆ ಹಣ ತೆಗೆದುಕೊಂಡು ಮತ್ತೊಂದು ಸಿನಿಮಾ ಸಹಿ ಮಾಡುತ್ತಾರೆ. ರಾಜಕೀಯದಲ್ಲೂ ಅವರದ್ದು ಅದೇ ಸೂತ್ರ. ಅಭ್ಯರ್ಥಿ ಗೆಲ್ಲಲಿ, ಬಿಡಲಿ ಹಣ ಬಂದ್ರೆ ಆಯ್ತು' ಎಂದಿದ್ದರು. ಜೊತೆಗೆ ಕರ್ನಾಟಕಕ್ಕೆ ಅವರ ಕೊಡುಗೆ ಏನು ಎಂದು ಸಹ ಪ್ರಶ್ನೆ ಮಾಡಿದ್ದರು.
ಸಂಬರ್ಗಿ ವಿರುದ್ಧ ಶಿವಣ್ಣ ಗುಡುಗು
ಪ್ರಶಾಂತ್ ಸಂಬರ್ಗಿ ಟೀಕೆಗೆ ಪ್ರತಿಕ್ರಿಯಿಸಿದ ಶಿವಣ್ಣ, ಹಾಗೆ ಮಾತನಾಡುವುದು ಸರಿಯಲ್ಲ. ಆ ಹೇಳಿಕೆಯನ್ನು ವಾಪಸ್ ತಗೆದುಕೊಳ್ಳಬೇಕು. ನಮ್ಮ ಹತ್ತಿರ ಹಣನೇ ಇಲ್ವಾ. ನಾನು ಹಣ ತೆಗೆದುಕೊಂಡು ಇಲ್ಲಿ ವ್ಯಾಪರಕ್ಕೆ ಬಂದಿಲ್ಲ. ಹೃದಯದಿಂದ ಮನುಷ್ಯನಿಗಾಗಿ ಬಂದಿದ್ದೇನೆ. ಬದಲಾಗಿ ಯಾರನ್ನೂ ಟೀಕೆ ಮಾಡುವುದಕ್ಕೂ ನಾನು ಇಲ್ಲಿಗೆ ಬಂದಿಲ್ಲ ಎಂದಿದ್ದರು.












Click it and Unblock the Notifications