ವೈ. ಎಸ್. ವಿ. ದತ್ತಾ ನಿವಾಸಕ್ಕೆ ಪ್ರಜ್ವಲ್ ರೇವಣ್ಣ ಭೇಟಿ!
ಬೆಂಗಳೂರು, ಏಪ್ರಿಲ್ 13; ಕಾಂಗ್ರೆಸ್ ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ 2 ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಕಡೂರು ಕ್ಷೇತ್ರದ ಮಾಜಿ ಶಾಸಕ ವೈ. ಎಸ್. ವಿ. ದತ್ತಾಗೆ ಟಿಕೆಟ್ ಸಿಕ್ಕಿಲ್ಲ. ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಇದರ ನಡುವೆಯೇ ಮಹತ್ವದ ಬೆಳವಣಿಗೆಯೊಂದು ನಡೆದಿದೆ.
ಗುರುವಾರ ಹಾಸನ ಸಂಸದ, ಜೆಡಿಎಸ್ ಪಕ್ಷದ ನಾಯಕ ಪ್ರಜ್ವಲ್ ರೇವಣ್ಣ ಕಡೂರು ಕ್ಷೇತ್ರದ ಮಾಜಿ ಶಾಸಕ ವೈ. ಎಸ್. ವಿ. ದತ್ತಾ ನಿವಾಸಕ್ಕೆ ಆಗಮಿಸಿದ್ದಾರೆ. ಇದರಿಂದಾಗಿ ವೈ. ಎಸ್. ವಿ. ದತ್ತಾ ಜೆಡಿಎಸ್‌ಗೆ ವಾಪಸ್ ಆಗಲಿದ್ದಾರೆಯೇ? ಎಂಬ ಸುದ್ದಿ ಹಬ್ಬಿದೆ. ಕಾಂಗ್ರೆಸ್ ಪಕ್ಷ ಕಡೂರು ಕ್ಷೇತ್ರದಲ್ಲಿ ಆನಂದ್ ಕೆ. ಎಸ್. ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.

ಕಾಂಗ್ರೆಸ್ ಟಿಕೆಟ್ ಸಿಗುವ ಭರವಸೆ ಮೇಲೆಯೇ ಮಾಜಿ ಶಾಸಕ ವೈ. ಎಸ್. ವಿ. ದತ್ತಾ ಜೆಡಿಎಸ್ ಬಿಟ್ಟು ಪಕ್ಷ ಸೇರಿದ್ದರು. ಆದರೆ ಕೆ. ಎಸ್. ಆನಂದ್ ಅಭ್ಯರ್ಥಿ ಎಂದು ಕಾಂಗ್ರೆಸ್‌ನ 2ನೇ ಪಟ್ಟಿಯಲ್ಲಿ ಘೋಷಣೆ ಮಾಡಲಾಗಿತ್ತು. ಇದರಿಂದಾಗಿ ವೈ. ಎಸ್. ವಿ. ದತ್ತಾ ಅಸಮಾಧಾನಗೊಂಡಿದ್ದರು. ಬಳಿಕ ಕೆ. ಎಸ್. ಆನಂದ್ ದತ್ತಾ ನಿವಾಸಕ್ಕೆ ಭೇಟಿ ನೀಡಿ ಸಂಧಾನ ಸಭೆ ನಡೆಸಿದ್ದರು.
ವೈ. ಎಸ್. ವಿ. ದತ್ತಾ ಮನೆಯಲ್ಲಿ ಬೆಂಬಲಿಗರ ಮುಂದೆಯೇ ಕೆ. ಎಸ್. ಆನಂದ್ ಮನವೊಲಿಕೆಗೆ ಪ್ರಯತ್ನ ಮಾಡಿದ್ದರು. ಆದರೆ ಸಭೆಯಲ್ಲಿಯೇ ದತ್ತಾ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುವ ಸುಳಿವು ನೀಡಿದ್ದರು. ದತ್ತಾ ಅಭಿಮಾನಿಗಳು ಸಹ ಪಕ್ಷೇತರವಾಗಿ ಕಣಕ್ಕೆ ಇಳಿಯಬೇಕು ಎಂದು ಒತ್ತಾಯಿಸಿದ್ದರು.
ಬೆಂಬಲಿಗರ ಜೊತೆ ಸಭೆ; ಪ್ರಜ್ವಲ್ ರೇವಣ್ಣ ಮಾಜಿ ಶಾಸಕ ವೈ. ಎಸ್. ವಿ. ದತ್ತಾ ನಿವಾಸದಲ್ಲಿ ಬೆಂಬಲಿಗರ ಮುಂದೆಯೇ ಅವರ ಜೊತೆ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿಯೇ ಜೆಡಿಎಸ್ ಪಕ್ಷಕ್ಕೆ ವಾಪಸ್ ಆಗುವಂತೆ ಪ್ರಜ್ವಲ್ ರೇವಣ್ಣ ಮನವೊಲಿಕೆ ಮಾಡುವ ನಿರೀಕ್ಷೆ ಇದೆ. ಗುರುವಾರ ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಎಚ್. ಡಿ. ರೇವಣ್ಣ, "ವೈ. ಎಸ್. ವಿ. ದತ್ತಾ ಜೆಡಿಎಸ್ ಪಕ್ಷಕ್ಕೆ ಸೇರುವ ಕುರಿತು ದೇವೇಗೌಡರು ತೀರ್ಮಾನ ಕೈಗೊಳ್ಳಲಿದ್ದಾರೆ" ಎಂದು ಹೇಳಿದ್ದರು.

ಬುಧವಾರ ವೈ. ಎಸ್. ವಿ. ದತ್ತಾ ಬೆಂಗಳೂರಿಗೆ ಆಗಮಿಸಿದ್ದರು. ಪದ್ಮನಾಭನಗರದಲ್ಲಿರುವ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಸುಮಾರು 20 ನಿಮಿಷ ಮಾತುಕತೆ ನಡೆಸಿದ್ದರು. ದೇವೇಗೌಡರು ಎಚ್. ಡಿ. ಕುಮಾರಸ್ವಾಮಿ ಜೊತೆ ಮಾತನಾಡಿ ತಿಳಿಸುವೆ ಎಂದು ಹೇಳಿದ್ದರು. ಗುರುವಾರ ಪ್ರಜ್ವಲ್ ರೇವಣ್ಣ ವರಿಷ್ಠರ ಸಂದೇಶ ಹೊತ್ತು ದತ್ತಾ ನಿವಾಸಕ್ಕೆ ಭೇಟಿ ನೀಡಿರುವ ಸಾಧ್ಯತೆ ಇದೆ.
ವೈ. ಎಸ್. ವಿ. ದತ್ತಾ ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ, "ವೈ. ಎಸ್. ವಿ. ದತ್ತಾ ಅವರಿಗೆ ಹೇಳಿದ್ದೆ ತಂದೆ ಸಮಾನರಾದ ದೇವೇಗೌಡರಿಗೆ ಮೋಸ ಮಾಡಬೇಡಿ ಎಂದು. ಈಗ ಅವರ ಸ್ಥಿತಿ ಏನಾಗಿದೆ, ಪಕ್ಷ ಬಿಟ್ಟು ಹೋದವರು ಮತ್ತೆ ಕೆನ್ನೆಗೆ ಹೊಡೆದುಕೊಂಡು ಇಲ್ಲಿಗೆ ಬರಬೇಕು" ಎಂದು ಹೇಳಿದ್ದರು.
ಎಚ್. ಡಿ. ಕುಮಾರಸ್ವಾಮಿ ಕಲಬುರಗಿಯಲ್ಲಿ ಮಾತನಾಡಿ, "ಬಹಳ ಜನ ಜನತಾ ಪರಿವಾರದಿಂದ ಬೇರೆ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಅವರೆಲ್ಲರೂ ವಾಪಸ್ ಬರೋದಕ್ಕೆ ಮಾತುಕತೆ ಆಗಿದೆ. ವೈ. ಎಸ್. ವಿ. ದತ್ತಾ ಅವರು ನನ್ನ ಜೊತೆ ಸಂಪರ್ಕದಲ್ಲಿಲ್ಲ. ದತ್ತಾ ಶಾಸಕರಾಗಿದ್ದಾಗಲೂ ನನ್ನ ಜೊತೆ ಸಂಪರ್ಕದಲ್ಲಿ ಇರಲಿಲ್ಲ. ರೇವಣ್ಣ, ಪ್ರಜ್ವಲ್ ಅಂತಹ ದೊಡ್ಡವರ ಜೊತೆ ಸಂಪರ್ಕದಲ್ಲಿರೋದು" ಎಂದರು.












Click it and Unblock the Notifications