ಅಮಿತ್ ಶಾ ಕೈ ಸೇರಿದ್ದ ಪ್ರಜ್ವಲ್ ಸಿಡಿ, ಟಿಕೆಟ್ ಬೇಡ ಅಂದ್ರು ಕೊಟ್ಟಿದ್ದು ಯಾಕೆ ಗೊತ್ತಾ? ಬಾಲಕೃಷ್ಣ ಹೇಳಿದ್ದೇನು?
ರಾಮನಗರ, ಮೇ 22: ಪ್ರಜ್ವಲ್ ತಾತನಿಗೆ ತಕ್ಕ ಮೊಮ್ಮಗ ಆಗಲಿಲ್ಲ. ಬದಲಿಗೆ ತಂದೆಗೆ ತಕ್ಕ ಮಗನಾಗಿದ್ದಾನೆ, ಹಿಂದೆ ಕುಮಾರಸ್ವಾಮಿ ಅವರೇ ಹೇಳಿದ್ರು ನಾನು ದಾರಿತಪ್ಪಿದ್ದೆ, ಬಳಿಕ ನನ್ನ ಶ್ರೀಮತಿ ನನ್ನನ್ನ ಎಚ್ಚರಿಸಿದ್ರು ಅಂತ.
ಹಾಗೆ ನೂಲಿನಂತೆ ಸೀರೆ ಅಲ್ವಾ.? ಎಂದು ಕುಮಾರಸ್ವಾಮಿ ವಿರುದ್ಧ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರಜ್ವಲ್ ತಾತನಿಗೆ ತಕ್ಕ ಮೊಮ್ಮಗ ಆಗಿದ್ರೆ ಇದೆಲ್ಲ ಆಚೆ ಬರ್ತಿರ್ಲಿಲ್ಲ. ತಂದೆಗೆ ತಕ್ಕ ಮಗ ಆಗಿರೋದ್ರಿಂದ ಇವೆಲ್ಲ ಆಚೆ ಬರ್ತಿವೆ. ಪ್ರಜ್ವಲ್ ಗೆ ಟಿಕೆಟ್ ಕೊಡದಿದ್ರೆ ಇದ್ಯಾವುದೂ ಆಚೆ ಬರ್ತಿರಲಿಲ್ಲ, ಪ್ರಜ್ವಲ್ ಹಗರಣಗಳು ಅಮಿತ್ ಶಾಗೆ ಗೊತ್ತಿತ್ತು.ಈ ಸಿಡಿಗಳೆಲ್ಲ ಅಮಿತ್ ಶಾ ಕೈಸೇರಿ ಅವರು ಟಿಕೆಟ್ ಬೇಡ ಅಂದ್ರು. ಆದರೂ ದೇವೇಗೌಡರು ಮೊಮ್ಮಗನ ವ್ಯಾಮೋಹಕ್ಕೆ ಟಿಕೆಟ್ ಕೊಟ್ರು ಎಂದು ಹೆಚ್.ಸಿ.ಬಾಲಕೃಷ್ಣ ಹೇಳಿದರು.

ಒಬ್ಬ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟು ಗೆಲ್ಲಿಸಬಹುದಿತ್ತು.ಆದರೆ ಪ್ರಕರಣದಲ್ಲಿ ಕಾಂಗ್ರೆಸ್ ಅವರನ್ನ ವಿಲನ್ ಮಾಡ್ತಿದ್ದೀರಿ, ವೀಡಿಯೋ ಮಾಡಿದ್ದು ಜೆಡಿಎಸ್ ಸಂಸದ. ವೀಡಿಯೋ ಸಿಡಿ ಮಾಡಿ ಹಂಚಿದ್ದು ಬಿಜೆಪಿಯ ದೇವರಾಜೇಗೌಡ, ಆದರೆ ಆರೋಪ ಮಾಡಿ ವಿಲನ್ ಮಾಡ್ತಿರೋದು ಕಾಂಗ್ರೆಸ್ ಪಕ್ಷವನ್ನ.ಇದು ಯಾವ ನ್ಯಾಯ, ನಾವೇನು ಸಿಡಿ ಫ್ಯಾಕ್ಟರಿ ಇಟ್ಟುಕೊಂಡಿದ್ದೇವಾ. ವೀಡಿಯೋ ಮಾಡಿ ತಂದು ಕೊಡಿ ಅಂತ ಹೇಳಿದ್ವಾ.? ಎಂದು ಪ್ರಶ್ನಿಸಿದರು. ಆರೋಪ ಮಾಡುವ ಹೆಚ್ ಡಿ ಕುಮಾರಸ್ವಾಮಿ ಒಬ್ಬ ಮಾಜಿ ಸಿಎಂ. ಸ್ವಲ್ಪ ಗಂಭೀರವಾಗಿ ಇರೋದನ್ನ ಕಲಿಯಬೇಕು, ಎರಡು ಬಾರಿ ಸಿಎಂ ಆಗಿದ್ದವರು, ಚಿಲ್ಲರೆ ಹುಡುಗರ ರೀತಿ ಮಾತನಾಡೊದನ್ನ ಬಿಡಿ ಎಂದರು.
ಸರ್ಕಾರ ನಮ್ಮ ಕುಟುಂಬದವರ ಪೋನ್ ಟ್ಯಾಪಿಂಗ್ ಮಾಡ್ತಾ ಇದ್ದಾರೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಯಾವತ್ತಾದ್ರೂ ಸತ್ಯ ಹೇಳಿದ್ದಾರಾ.? ಅವರು ಹೇಳೋದೆಲ್ಲಾ ಸುಳ್ಳೇ.!
ಅವರು ಮೊದಲೇ ಊಹೆ ಮಾಡಿಕೊಳ್ತಾರೆ. ಸರ್ಕಾರ ಈ ರೀತಿ ಮಾಡಬಹುದು, ಸಿದ್ದರಾಮಯ್ಯ, ಡಿಕೆಶಿ ಏನು ಮಾಡ್ತಾರೆ ಅಂತಾ ಊಹೆ ಮಾಡಿಕೊಳ್ತಾರೆ. ಅವರೇ ಊಹೆ ಮಾಡಿಕೊಂಡು ಹೇಳ್ತಾರೆ ಎಂದು ಹೆಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದರು.
ಪ್ರಜ್ವಲ್ ರೇವಣ್ಣ ಕೇಸ್ ನಲ್ಲಿ 100 ಕೋಟಿ ಡೀಲ್ ನಡೆದಿದೆ ಎಂಬ ದೇವರಾಜೇಗೌಡ ಹೇಳಿಕೆ ವಿಚಾರವಾಗಿ ಮಾತನಾಡಿ, ದೇವರಾಜೇಗೌಡ ಯಾರು ಅಂತಾ ಎಲ್ಲರಿಗೂ ಗೊತ್ತು.ಮೊದಲು ದೇವೆಗೌಡರ ಕುಟುಂಬದ ವಿರುದ್ದ ಮಾತಾಡ್ತ ಇದ್ರು. ಆಮೇಲೆ ನಮ್ಮ ವಿರುದ್ದ ಮಾತಾಡೋಕೆ ಶುರು ಮಾಡಿದ್ದ. ಇದಲ್ಲಾ ಬಿಜೆಪಿ ಅವರು ಅವನ ಕೈಯಲ್ಲಿ ಆಟ ಆಡಿಸ್ತಾ ಇದ್ದಾರೆ, ಬಿಜೆಪಿಯರು ಯಾವ ರೀತಿ ಕೀ ಕೊಡ್ತಾರೆ ಆ ರೀತಿ ದೇವರಾಜೇಗೌಡ ಆಡ್ತಾ ಇದ್ದಾನೆ ಎಂದು ಕಿಡಿಕಾರಿದರು.
ಪ್ರಜ್ವಲ್ ರೇವಣ್ಣ ಕೇಸ್ ನ ಸಿಬಿಐಗೆ ಕೊಡಬೇಕೆಂಬ ಒತ್ತಾಯ ವಿಚಾರವಾಗಿ ಮಾತನಾಡಿ, ಸಿಬಿಐಗೆ ಯಾಕೆ ಕೊಡಬೇಕು. ಈ ಹಿಂದೆ ಬಿಡಿಸಿಸಿ ಬ್ಯಾಂಕ್ ಸಂಬಂಧ ಪಟ್ಟ ಕೇಸ್ ಕೊಟ್ಟು 35 ವರ್ಷಗಳೇ ಕಳೆದಿವೆ.
ಏನು ತೀರ್ಮಾನ ಆಗಿಲ್ಲ. ಎಸ್ ಐಟಿ ಅವರು ಕೇಸ್ ನ ತನಿಖೆ ನಡೆಸ್ತಾ ಇದ್ದಾರೆ, ಅವರಿಗೆ ಸಮಾಧಾನ ಆಗಿಲ್ಲ. ಅಂದ್ರೆ ಆಮೇಲೆ ಸಿಬಿಐಗೆ ಕೊಡೋದ ಬೇಡ್ವಾ ಅಂತಾ ಯೋಚನೆ ಮಾಡಬೇಕು. ಎಸ್ ಐಟಿ ತನಿಖೆಯ ವರದಿಗೂ ಮುಂಚೆಯೇ ಸಿಬಿಐಗೆ ಯಾಕೆ ಕೊಡಬೇಕು. ಸಿಬಿಐಗೆ ಕೊಟ್ರೆ ಪ್ರಕರಣದಿಂದ ತಪ್ಪಿಸಿಕೊಂಡು ರಕ್ಷಣೆ ತಗೊಬೇಕು ಅಂತಾ ಆಲೋಚನೆ ಅವರಿಗಿದೆ.
ಡಿಕೆ ಶಿವಕುಮಾರ್ ಸಿಡಿ ಮಾಸ್ಟರ್, ಸಿಡಿ ತಯಾರಿಕೆ ಕಂಪನಿ ಇದೆ ಎಂಬ ಆರೋಪ ವಿಚಾರವಾಗಿ ಉತ್ತರಿಸಿ, ಪ್ರಜ್ವಲ್ ಗೆ ಸಿಡಿ ಮಾಡಿ ಅಂತಾ ಯಾರಾದ್ರೂ ಹೇಳಿದ್ರಾ...? ಡಿಕೆ ಶಿವಕುಮಾರ್ ಆಗಲಿ ನಾವೇನಾದರೂ ಏನಾದ್ರೂ ಪೋನ್ ಮಾಡಿ ಹೇಳಿದ್ರಾ..? ಕುಮಾರಸ್ವಾಮಿ ಗೆ ತಲೆ ಕೆಟ್ಟಿದೆ ಅದಕ್ಕೆ ಏನೆನೋ ಮಾತಾಡ್ತಾರೆ. ಕುಮಾರಸ್ವಾಮಿ ಅವರು ಆರೋಪ ಮಾಡೋದೆ ಡಿಕೆ ಶಿವಕುಮಾರ್ ವಿರುದ್ಧ. ಹೆಚ್ ಡಿಕೆಗೆ ನಿದ್ದೆಗಣ್ಣಲ್ಲೂ ಡಿಕೆ ಶಿವಕುಮಾರ್ ಕಾಣ್ತಾರೆ ಎಂದು ಹೇಳಿದರು.












Click it and Unblock the Notifications