ಪ್ರಜ್ವಲ್ ರೇವಣ್ಣ ಅವರ ಆ ವಿಡಿಯೋ ನೋಡೋ ಧೈರ್ಯ ಬರಲಿಲ್ಲ: ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?
ಬೆಂಗಳೂರು, ಮೇ 05: ಲೋಕಸಭಾ ಚುನಾವಣಾ ಹೊತ್ತಲಿ ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ನೂರಾರು ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೋ ಪ್ರಕರಣದ ಕುರಿತು ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿರೋಧಗಳು ಕೇಳಿ ಬರುತ್ತಿದ್ದು,ಮೊದಲ ಬಾರಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ.
ಹೌದು, ಈ ಕುರಿತು ಶನಿವಾರ ಮಾಧ್ಯಮಗಳ ಜೊತೆಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಹಾಸನ ವಿಚಾರ ಆಗಲಿ, ನನಗೆ ಅದಕ್ಕೂ ಸಂಬಂಧ ಇಲ್ಲ. ನಾನು ಹೆಚ್ಚಿಗೆ ಹಾಸನಕ್ಕೆ ಕಾಲೇ ಇಟ್ಟಿಲ್ಲ, ಹೋದರೆ ಹಾಸನಾಂಬೆ ಉತ್ಸವಕ್ಕೆ ಮಾತ್ರ ಹೋಗ್ತೇನೆ. ಹಾಸನ ಸಂಸದರಿಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದರು.

ಇನ್ನೂ ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನ ರಾಜ್ಯ ಸರ್ಕಾರ ಈಗಾಗಲೇ ಎಸ್‌ಐಟಿ ರಚನೆ ಮಾಡಿದ್ದು, ತನಿಖೆ ಆಗುತ್ತಿದೆ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಅಂತಿಮವಾಗಿ ಎಸ್‌ಐಟಿ ವರದಿ ಬಂದ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತಾರೆ. ಅದರ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲ್ಲ. ಹಾಸನ ಟಿಕೆಟ್ ಕೊಡೋ ವಿಚಾರದಲ್ಲಿ ಪಕ್ಷದ ಕಾರ್ಯಕರ್ತರು ರಾಷ್ಟ್ರೀಯ ಅಧ್ಯಕ್ಷರು ಅಂತಿಮ ನಿರ್ಧಾರ, ಅವರ ನಿರ್ಧಾರಕ್ಕೆ ತಲೆಬಾಗಿ ಕೆಲಸ ಮಾಡಿದ್ದೇವೆ ಅಷ್ಟೇ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೂ ನೋವಾಗಿದೆ. ಆ ವಿಡಿಯೋವನ್ನು ನೋಡುವುದಕ್ಕೆ ನಾನು ಧೈರ್ಯ ಮಾಡಿಲ್ಲ. ನನ್ನ ಆಪ್ತ ವರ್ಗದವರು ಹೇಳಿದ ಪ್ರಕಾರ ಆ ವಿಡಿಯೋಗಳನ್ನು ಕನಿಷ್ಠ ಪಕ್ಷ ಬ್ಲರ್ ಕೂಡ ಮಾಡಿಲ್ಲ. ಆದರೆ ಪಾಪ ಆ ಹೆಣ್ಣು ಮಕ್ಕಳನ್ನ ಓಪನ್ ಆಗಿ ತೋರಿಸಿದ್ದಾರೆ. ಇದು ನಿಜಕ್ಕೂ ಕೂಡ ಬೇಜಾರಾಗುತ್ತೆ. ಇದರ ಬಗ್ಗೆಯೂ ಸಹ ತನಿಖೆ ಆಗಬೇಕು. ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದು ಹೇಳಿದರು.
ಇನ್ನೂ ಈ ಪ್ರಕರಣದಿಂದ ಕರ್ನಾಟಕದ ಜನತೆ ತಪ್ಪು ಸಂದೇಶ ಕೊಡುತ್ತಿದೆ. ವಿಶೇಷವಾಗಿ ದೇವೇಗೌಡರ ಜೀವನ ತೆರೆದ ಪುಸ್ತಕ. ಅಜ್ಜಿ ಚೆನ್ನಮ್ಮ ಯಾವ ರೀತಿ ಬದುಕಿದರು ಅಂತ ಎಲ್ಲರಿಗೂ ಗೊತ್ತಿದೆ. ಅದು ನಮಗೆ ದೊಡ್ಡ ಸ್ಪೂರ್ತಿ. ಯಾವ ರೀತಿ ದಂಪತಿ ಬಾಳಿ ಬದುಕುಬೇಕು ಅಂತ ತೋರಿಸಿಕೊಟ್ಟಿದ್ದಾರೆ. ಬಹುಶಃ ಈ ವಿಚಾರದಲ್ಲಿ ಅವರು ಸಾಕಷ್ಟು ನೊಂದಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.












Click it and Unblock the Notifications