Prajwal Case: ವಿಡಿಯೋ ಬಲೆಯಲ್ಲಿ ಸಿಲುಕಿದ ಪ್ರಜ್ವಲ್ ; ಹಾಸನ ಕ್ಷೇತ್ರ ಕಳೆದುಕೊಳ್ಳುವ ಭೀತಿಯಲ್ಲಿ ದಳಪತಿ
ಹಾಸನ, ಮೇ 13: 203 ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆರಿದ ಕಾಂಗ್ರೆಸ್ ಸೋಲಿನ ರುಚಿ ತೋರಿಸಲು ಮೈತ್ರಿಯಾಗಿದೆ. ಈ ಲೋಕಸಭಾ ಚುನಾವಣೆ ದಳಪತಿಗಳಿಗೆ ಅಸ್ತಿತ್ವದ ಪ್ರಶ್ನೆಯಾಗಿದ್ದು, ಪ್ರಜ್ವಲ್ ಪ್ರಕರಣದಿಂದಾಗಿ ದಳಪತಿಗಳಿಗೆ ಪ್ರತಿಷ್ಠೆಯ ಕ್ಷೇತ್ರವನ್ನ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಹೌದು, ಲೋಕಸಭಾ ಚುನಾವಣೆ ಹಿನ್ನೆಲೆ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಕುರಿತು ತೀವ್ರ ವಿರೋಧ ಕೇಳಿ ಬಂದಿತ್ತು. ಆದರೆ, ಕಾಂಗ್ರೆಸ್ ಸೋಲಿಸುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಮೈತ್ರಿಯ ಮುನಿಸು ತಣ್ಣಗಾಗಿತ್ತು. ಇತ್ತ ಚುನಾವಣೆ ಹಿನ್ನೆಲೆ ಮೈತ್ರಿ ನಾಯಕರು ರಾಜ್ಯದ 28 ಕ್ಷೇತ್ರಗಳ ಫೈಕಿ 28 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಒಟ್ಟಾಗಿ ಚುನಾವಣೆ ಪ್ರಚಾರ ನಡೆಸಿದ್ರು. ಇತ್ತ ಏಪ್ರಿಲ್ 26 ರಂದು ಮೊದಲ ಹಂತದ ಚುನಾವಣೆಗೆ ಕೆಲ ಗಂಟೆಗಳು ಇರುವ ಹೊತ್ತಲಿ ರಾತ್ರೋರಾತ್ರಿ ಹಾಸನ ಎನ್ ಡಿಎ ಅಭ್ಯರ್ಥಿ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ವಿಡಿಯೋ ಪ್ರಕರಣ ರಾಜ್ಯಾದ್ಯಂತ ಹೆಚ್ಚು ಸದ್ದು ಮಾಡಿತ್ತು..

ಇತ್ತ ಏಪ್ರಿಲ್ 26 ರಂದು ನಡೆದ ಮೊದಲ ಹಂತದ ಚುನಾವಣೆ ಯಲ್ಲಿ ಮತಚಲಾಯಿಸಿದ ಪ್ರಜ್ವಲ್ ರೇವಣ್ಣ ಅವರು ರಾತ್ರೋರಾತ್ರಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ರೆ, ಇತ್ತ ಮಾಜಿ ಸಚಿವ ಹಾಗೂ ಪ್ರಜ್ವಲ್ ಅವರ ತಂದೆ ಎಚ್ ಡಿ ರೇವಣ್ಣ ಅವರ ವಿರುದ್ಧ ಅಪಹರಣ ಕೇಸ್ ನಿಂದಾಗಿ ಇದೀಗ ಬಂಧನದಲ್ಲಿದ್ದಾರೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ತಮ್ಮ ಕ್ಷೇತ್ರವಾದ ಹಾಸನ ಕ್ಷೇತ್ರವನ್ನ ಮೊಮ್ಮಗನಿಗಾಗಿ 2019 ರಲ್ಲಿ ಬಿಟ್ಟುಕೊಟ್ಟಿದ್ರು. ನನ್ನ ಘನತೆಯನ್ನು ನನ್ನ ಮೊಮ್ಮಗ ಪ್ರಜ್ವಲ್ ದೆಹಲಿ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾನೆ ಎನ್ನುವ ನಿರೀಕ್ಷೆ ದೊಡ್ಡಗೌಡರಿಗಿತ್ತು. ಆದರೆ, ಪೆನ್ ಡ್ರೈವ್ ಪ್ರಕರಣದಿಂದಾಗಿ ಈ ವಯಸ್ಸಿನಲ್ಲಿ ದೇವೇಗೌಡ್ರು ಮುಜುಗರವನ್ನ ಅನುಭವಿಸುವಂತಾಗಿದೆ.
ಈಗಾಗಲೇ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಎಸ್ ಐಟಿ ಅಧಿಕಾರಿಗಳು ಹುಟುಕಾಟ ನಡೆಸುತ್ತಿದ್ದು, ಜೆಡಿಎಸ್ ಈಗಾಗಲೇ ಪಕ್ಷದಿಂದ ಅಮಾನತು ಮಾಡಿದೆ. ಇತ್ತ ಪ್ರಜ್ವಲ್ ರೇವಣ್ಣ ಅವರನ್ನ ಹುಡುಕಿಕೊಟ್ಟವರಿಗೆ ಜೆಡಿಎಸ್ ಒಂದು ಲಕ್ಷ ಬಹುಮಾನವನ್ನ ನೀಡುವುದಾಗಿ ಹೇಳಿದೆ. ಇನ್ನೂ ಈ ಪ್ರಕರಣದಿಂದ ಕೇವಲ ಜೆಡಿಎಸ್ ನಾಯಕರಿಗೆ ಮಾತ್ರವಲ್ಲ ಬಿಜೆಪಿ ನಾಯಕರಿಗೂ ಮುಜುಗರ ಅನುಭವಿಸುವಂತೆ ಮಾಡಿದೆ. ಈ ಮುಜುಗರದ ನಡುವೆಯೇ ಮೈತ್ರಿ ಮುಂದುವರೆಸಲು ಬಿಜೆಪಿ ಜೆಡಿಎಸ್ ನಾಯಕರು ಮುಂದಾಗಿದ್ದು, ದಳಪತಿಗಳಿಗೆ ಕ್ಷೇತ್ರ ಕೈ ತಪ್ಪುವ ಆತಂಕ ಎದುರಾಗಿದೆ.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಹಾಸನ ಲೋಕಸಭಾ ಕ್ಷೇತ್ರ ಎಲ್ಲಾ ಸ್ಥಾನವನ್ನ ನೀಡಿದೆ. ಹೀಗಾಗಿ ಹಾಸನ ಕ್ಷೇತ್ರ ದೊಡ್ಡಗೌಡರಿಗೆ ಪ್ರತಿಷ್ಠೆಯಾಗಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರದ ವಿರೋಧದ ನಡುವೆ ದೇವೇಗೌಡ್ರು ಮೊಮ್ಮಗನಿಗೆ ಹಾಸನ ಕ್ಷೇತ್ರವನ್ನ ಬಿಟ್ಟು ಕೊಟ್ಟಿದ್ರು. ದೇವೇಗೌಡರ ವರ್ಚಸ್ಸಿನಿಂದ 2019 ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಕಂಡು ಪ್ರಜ್ವಲ್ ಸಂಸತ್ ಪ್ರವೇಶಿಸಿದ್ರು. ಇನ್ನೂ 2024 ರ ಲೋಕಸಭಾ ಚುನಾವಣೆಯ ವೇಳೆಯೂ ಸಹ ಹಾಸನ ಜೆಡಿಎಸ್ ಮುಖಂಡರು ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಬೇಡಿ ಎಂದು ದೇವೇಗೌಡರ ಬಳಿ ಮನವಿ ಮಾಡಿದ್ರು. ಹಾಸನ ಶಾಸಕರು ಹಾಗೂ ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಜ್ವಲ್ ಗೆ ಟಿಕೆಟ್ ನೀಡಿದ್ದರು.
ಇದೀಗ ಏಪ್ರಿಲ್ 26 ರಂದು ಮೊದಲ ಹಂತದ ಚುನಾವಣೆಯ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದೆ ಎನ್ನಲಾದ ಪೆನ್ ಡ್ರೈವ್ ಹೆಚ್ಚು ಸದ್ದು ಮಾಡಿದ್ದು, ರಾಷ್ಟ್ರ ಮಟ್ಟದಲ್ಲೂ ಹೆಚ್ಚು ಚರ್ಚೆಯಾಗುತ್ತಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಸಹ ಪ್ರತಿಕ್ರಿಯಿಸಿದ್ದು, ದೇವೇಗೌಡರಿಗೆ ಹಾಗೂ ಜೆಡಿಎಸ್ ತೀವ್ರ ಮುಜುಗರವನ್ನ ಅನುಭವಿಸಿದೆ. ಇತ್ತ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಹಾಗೂ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಿಂದಾಗಿ ಈ ಬಾರಿ ಕ್ಷೇತ್ರದ ಕಳೆದುಕೊಳ್ಳುವ ಭೀತಿ ಎದುರಾಗಿದೆ.












Click it and Unblock the Notifications