ಪ್ರಜ್ವಲ್ ಎಲ್ಲಿದಿಯಾಪ್ಪಾ? ದೇಶಕ್ಕೆ ವಾಪಸ್ ಆಗುವಂತೆ ಕೈ ಜೋಡಿಸಿ ಮನವಿ ಮಾಡಿದ ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು, ಮೇ 20: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಎಲ್ಲರೂ ಅಸಹ್ಯ ಪಡುವ ಪ್ರಕರಣ. ನನ್ನ ಹಾಗೂ ಹೆಚ್ಡಿ ದೇವೇಗೌಡರ ಮೇಲೆ ಗೌರವ ಇದ್ದರೆ ನಾನು ಕೈಮುಗಿದು ಮನವಿ ಮಾಡ್ತೇನೆ 24-48 ಗಂಟೆಯಲ್ಲಿ ಶರಣಾಗು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರಜ್ವಲ್ಗೆ ಕೈ ಜೋಡಿಸಿ ಮನವಿ ಮಾಡಿದ್ದಾರೆ.
ಈ ಕುರಿತು ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಕೂಡ ಯಾಕೆ ಹೆದರಬೇಕು. ಎಷ್ಟು ದಿನ ಹೊರಗೆ ಇರಬೇಕು, ಕೈಜೋಡಿಸಿ ಮನವಿ ಮಾಡುತ್ತೇನೆ. ದೇಶಕ್ಕೆ ವಾಪಸ್ ಬಂದು ತನಿಖೆಗೆ ಸಹಕರಿಸು, ನಮ್ಮ ತಂದೆಯವ ಪರವಾಗಿ ನಾನು ಮನವಿ ಮಾಡುತ್ತೇನೆ. ದೇವೇಗೌಡ ಶ್ರಮವನ್ನು ಬಿಟ್ಟು ನಿನಗೆ ಅವಕಾಶ ಕೊಟ್ಟಿದ್ರು. ಮುಂದಿನ 24 ಗಂಟೆ ಅಥವಾ 48 ಗಂಟೆಗಳ ಬಂದು ವಿಚಾರಣೆಗೆ ಹಾಜರಾಗಲು ಮನವಿ ಮಾಡಿದರು.

ನಾನು ಸಹ ಮನವಿ ಮಾಡಿಕೊಳ್ಳುತ್ತೆನೆ. ನನ್ನ ಕಾರ್ಯಕರ್ತರು ಪಕ್ಷವನ್ನು ಉಳಿಸಿಬೆಳೆಸಿದ್ದಾರೆ, ಲಕ್ಷಾಂತರ ಜನ ಮತವನ್ನು ಕೊಟ್ಟಿದ್ದಾರೆ. ಎಷ್ಟು ದಿನ ಹೊರಗೆ ಇರಬೇಕು, ಕೈಜೋಡಿಸಿ ಮನವಿ ಮಾಡಿಕೊಳ್ಳುತ್ತೆನೆ. ತಂದೆಯವರು ಬದುಕನ್ನು ಅವರಿಗೆ ದಾರೆಯೆರೆದಿದ್ದಾರೆ. ಅದಕ್ಕೆ ಗೌರವಕೊಟ್ಟು ದೇಶಕ್ಕೆ ಬರಬೇಕು. ನಾನು ಸೇರಿದಂತೆ ನಮ್ಮ ಸುತ್ತಲೂ ಇರುವ ಸುಮಾರು 30 ಜನರಿಗೆ ಪೋನ್ ಟ್ರ್ಯಾಪ್ ಆಗ್ತಾಯಿದೆ.
ರಾಜ್ಯ ಸರ್ಕಾರ ವರ್ಷದ ಸಂಭ್ರಮದಲ್ಲಿದೆ. ಆದರೆ, ಕೇಂದ್ರ ಸರ್ಕಾರ ನೀಡಿರುವ ಬೆಳೆ ಪರಿಹಾರ ಹಣವು ಸಾಲಕ್ಕೆ ಜಮೆ ಆಗುತ್ತಿದೆ. ಇದು ಈ ಸರ್ಕಾರದ ವೈಖರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು. ರೈತರು ಬರದಿಂದ ಕಂಗೆಟ್ಟು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಈ ಸರ್ಕಾರದ ಕೊಡುಗೆ ಏನೂ ಇಲ್ಲ. ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಆರಂಭ ಆಗಿವೆ. ಬರ ಪರಿಹಾರ ಹಣವನ್ನು ಸಾಲಕ್ಕೆ ವಜಾ ಮಾಡ್ತಿದ್ದಾರೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿಲ್ಲ. ಹಲವು ಇಲಾಖೆಗಳಲ್ಲಿ ವೇತನ ನೀಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಕಳೆದ ಒಂದು ವರ್ಷದಲ್ಲಿ ಎಷ್ಟು ಮಂತ್ರಿಗಳು ಜಿಲ್ಲೆಗಳಲ್ಲಿ ಸಭೆ ಮಾಡಿದ್ದಾರೆ. ಸಮಸ್ಯೆಗಳ ಬಗ್ಗೆ ಏನು ಸೂಚನೆಗಳನ್ನು ಕೊಟ್ಟಿದ್ದಾರೆ. ಜನರ ಕಷ್ಟಗಳನ್ನು ಬಗೆಹರಿಸಿದ್ದಾರೆಯೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು. ಮುಖ್ಯಮಂತ್ರಿಗಳು ಸಭೆ ನಡೆಸಿ ಅಧಿಕಾರಿಗಳ ಮೇಲೆ ವಾಗ್ದಾಳಿ ನಡೆಸಿದ್ದರು. ಆದರೆ, ಜನರ ಕೆಲಸಗಳು ಏನಾಗಿವೆ? ಅಭಿವೃದ್ಧಿ ಕೆಲಸಗಳು ಎಲ್ಲಾದರೂ ಆಗಿವೆಯೇ? ಕೇವಲ ಗ್ಯಾರಂಟೀಗಳ ಹೆಸರು ಹೇಳಿಕೊಂಡು ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ರಾಜ್ಯದ ನೀರಾವರಿ ಯೋಜನೆಗಳ ಪರಿಸ್ಥಿತಿ ಏನಾಗಿದೆ? ರಸ್ತೆಯ ಪರಿಸ್ಥಿತಿ ಹೇಗಾಗಿದೆ? ಕಳೆದ ಒಂದು ವರ್ಷದಿಂದ ಬ್ರ್ಯಾಂಡ್ ಬೆಂಗಳೂರು ಏನಾಗಿದೆ? ಮಳೆ ಬಂದು ಬೆಂಗಳೂರಿನ ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ಈಗ ಕಣ್ಣಾರೆ ನೋಡುತ್ತಿದ್ದೇವೆ. ಎರಡು ದಿನ ಸುರಿದ ಮಳೆಗೆ ಬೆಂಗಳೂರು ಜನರು ನರಕ ನೋಡುತ್ತಿದ್ದಾರೆ. ಮನೆಗಳಿಗೆ ಬೀಗ ಹಾಕಿ ಹೋಟೆಲ್ ಗೆ ಹೋಗಿ ಜೀವನ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು. ಅತ್ಯಂತ ಮೌಲ್ಯವಾದ ದಿನಗಳನ್ನು ನಾವು ಒಂದು ವರ್ಷದಲ್ಲಿ ಕಳೆದುಕೊಂಡಿದ್ದೇವೆ. ರಾಜ್ಯದ ಅಭಿವೃದ್ಧಿ ಹಿಮ್ಮುಖವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇಲಾಖೆಗಳ ಕೆಲಸ ನೋಡಿದರೆ ಅರ್ಥ ಆಗುತ್ತದೆ. ಎಂಟು ಪ್ರಮುಖ ಇಲಾಖೆಗಳಲ್ಲಿ 35,471 ಕಡತಗಳು ವಿಲೇವಾರಿ ಆಗಿಲ್ಲ ಎಂಬ ವರದಿಯನ್ನು ಓದಿದೆ. ಇದು ಸರ್ಕಾರದ ಸಾಧನೆಯೇ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಚುನಾವಣೆ ನಂತರ ಓರ್ವ ಮಂತ್ರಿಯಾದರೂ ಜಿಲ್ಲೆಗಳಿಗೆ ಭೇಟಿ ನೀಡಿದ್ದೀರಾ? ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಕೆಲಸ ಮಾಡಿಸಿದ್ದಾರಾ? ಇಲ್ಲ. ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ನಾಡಿನ ಅಭಿವೃದ್ಧಿಗೆ ಪೂರಕವಾದ ಕೆಲಸ ಆಗಿಲ್ಲ. ಸರ್ಕಾರದ ಐದು ವರ್ಷದ ಆಡಳಿತಾತ್ಮಕ ಮಂಜೂರಾತಿ ಮುಂದುವರಿಸಿದ್ದು ಬಿಟ್ಟರೆ ಏನೂ ಆಗಿಲ್ಲ. ವರ್ಗಾವಣೆ ದಂಧೆಯೂ ನಿಂತಿಲ್ಲ. ವರ್ಗಾವಣೆಗೆ ಸಿ ಎಸ್ ಆರ್ ಫಂಡ್ ಹೆಸರನ್ನು ಸಂಜ್ಞೆಯಾಗಿ ಬಳಕೆ ಮಾಡಲಾಗುತ್ತಿದೆ ಎಂದು ಅವರು ಆರೋಪ ಮಾಡಿದರು.












Click it and Unblock the Notifications