Prajwal Revanna Case: ಸಿದ್ದರಾಮಯ್ಯಗೆ ಬಂತು ಬಹಿರಂಗ ಪತ್ರ! ಮುಂದಿಟ್ಟ 16 ಬೇಡಿಕೆಗಳೇನು?
ಬೆಂಗಳೂರು, ಮೇ 15: ರಾಜ್ಯ ರಾಜಕಾರಣದಲ್ಲಿ ಸದ್ಯ ಹಾಸನ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಪ್ರೆನ್ ಡ್ರೈವ್ ವಿಚಾರ ಜೋರಾಗಿ ಸದ್ದು ಮಾಡುತ್ತಿದೆ. ಇತ್ತ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರಿಗೆ ಜಾಮೀನು ಸಿಕ್ಕ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬಂದಿದೆ.
ಹೌದು, ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿ ಸಾಹಿತಿಗಳು, ಬರಹಗಾರರು, ಮಹಿಳಾ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸುದೀರ್ಘ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಹಿರಿಯ ಲೇಖಕರಾದ ಡಾ. ವಿಜಯಾ, ಸಾಹಿತಿ ಡಾ.ಜಿ ರಾಮಕೃಷ್ಣ, ವಸುಂಧರಾ ಭೂಪತಿ, ಮೀನಾಕ್ಷಿ ಬಾಳಿ ಕೆ, ನೀಲಾ, ಕೆ.ಎಸ್ ವಿಮಲಾ, ಕುಂ ವೀರಭದ್ರಪ್ಪ, ಮುಜಫರ್ ಅಸ್ಸಾದಿ ಸೇರಿದಂತೆ ಒಟ್ಟು 107 ಮಂದಿಯ ಸಹಿಯುಳ್ಳ ಪತ್ರ ಬರೆಯಲಾಗಿದ್ದು, 'ಪಜ್ಞಾವಂತ ನಾಗರಿಕರ ಬಹಿರಂಗ ಪತ್ರ' ಎಂದು ಹೆಸರಿಸಲಾಗಿದೆ.

ಇನ್ನೂ ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸರ್ಕಾರದ ನಡೆ ಹಾಗೂ ಹೆಚ್ಡಿ ಕುಮಾರಸ್ವಾಮಿ ಕುಟುಂಬದ ವಿರುದ್ಧ ಬಹಿರಂಗ ಪತ್ರದಲ್ಲಿ ಬೇಸರ ವ್ಯಕ್ತಪಡಿಸಲಾಗಿದೆ. ಸಂತ್ರಸ್ತರ ಪೋಟೋ, ವಿಡಿಯೋ ದಾಖಲಿಸಿ ಇಟ್ಟುಕೊಂಡಿರುವುದು, ದೂರು ಕೊಡದಂತೆ ಬೆದರಿಸುವುದು, ಅಪಹರಿಸುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಗಿದ್ದು, ಅನೇಕ ವರ್ಷಗಳಿಂದ ನಡೆದುಕೊಂಡ ಬಂದ ಹಗರಣವಿದು. ರಾಜಕೀಯ ನಾಯಕರು ತಮ್ಮ ಹಿತಾಸಕ್ತಿಗೆ, ಚುನಾವಣೆ ಲಾಭಕ್ಕಾಗಿ ಬಳಸುತ್ತಿರುವುದು ಆಘಾತಕಾರಿಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
16 ಬೇಡಿಕೆಗಳೇನು?
1. ಆರೋಪಿ ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ ಪತ್ತೆಮಾಡಿ ಈ ಕೂಡಲೇ ಬಂಧಿಸಬೇಕು.
2.ಸಂತ್ರಸ್ತ ಮಹಿಳೆಯರು ಭೀತಿ ಇಲ್ಲದೆ ದೂರು ನೀಡುವಂತಹ ವಾತಾವರಣ ನಿರ್ಮಾಣ ಮಾಡಬೇಕು. ರಾಜ್ಯದ ಮುಖ್ಯಸ್ಥರಾಗಿ ತಾವು ಸಂತ್ರಸ್ತ ಮಹಿಳೆಯರನ್ನು ಉದ್ದೇಶಿಸಿ ಧೈರ್ಯ ತುಂಬುವ ಮಾತುಗಳನ್ನು ಹೇಳಬೇಕು.
3.ಹಗರಣ ಕುರಿತು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವ ರಾಜಕೀಯ ನಾಯಕರ ನಡವಳಿಕೆಗೆ ನೀವು ಕಡಿವಾಣ ಹಾಕಬೇಕು.
4.ಎಸ್‌ಐಟಿ ತನಿಖೆಯು ಕಾಯಿದೆಯ ಅನುಸಾರ ಕಾಲಮಿತಿಯೊಳಗೆ ನಡೆಯಬೇಕು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 173ಕ್ಕೆ 2018ರಲ್ಲಿ ತಂದಿರುವ ತಿದ್ದುಪಡಿಯು ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳ ಒಳಗೆ ಮುಗಿಸಬೇಕು ಎನ್ನುತ್ತದೆ. ಹಾಗೂ 60 ದಿನಗಳ ಒಳಗಾಗಿ ತನಿಖೆ ಮುಗಿಯದಿದ್ದಲ್ಲಿ ಆರೋಪಿಯ ಜಾಮೀನು ಪಡೆಯಲು ಅವಕಾಶ ಕಲ್ಪಿಸುತ್ತದೆ. ಹಾಗಾಗಿ ಕಾಲಮಿತಿಯ ತನಿಖೆಯನ್ನು ಪ್ರಕಟಿಸಬೇಕು.
5.ಈ ಲೈಂಗಿಕ ಕೃತ್ಯಗಳ ಚಿತ್ರೀಕರಣದಲ್ಲಿ ಪ್ರಜ್ವಲ್ ಜೊತೆಗೆ ಭಾಗಿ ಆಗಿರಬಹುದಾದವರನ್ನು ಪತ್ತೆಮಾಡಿ ಮೊಕದ್ದಮೆ ಹೂಡಬೇಕು.
6.ಈ ವಿಡಿಯೋಗಳು ತಮ್ಮ ಬಳಿ ಇದ್ದವೆಂದು ಹಲವಾರು ತಿಂಗಳುಗಳಿಂದ ಹೇಳುತ್ತಿರುವ ಪ್ರಜ್ವಲ್ ರೇವಣ್ಣನ ಕಾರು ಚಾಲಕ ಕಾರ್ತಿಕ್‌ನನ್ನು ಕೂಡಲೇ ಬಂಧಿಸಬೇಕು.
7.ಈ ವಿಡಿಯೋಗಳು ತಮ್ಮ ಬಳಿ ಇದ್ದವೆಂದು ಹೇಳಿದ ಬಿಜೆಪಿ ನಾಯಕ ಬಿ. ದೇವರಾಜೇಗೌಡ ಮತ್ತು ಕಾರ್ತಿಕ್ ವಿರುದ್ದ ಈ ಹಗರಣವನ್ನು ಮುಚ್ಚಿಟ್ಟಿದ್ದಕ್ಕೆ, (2) ಆರೋಪಿಯು ತಪ್ಪಿಸಿಕೊಳ್ಳಲು ಪರೋಕ್ಷವಾಗಿ ಅವಕಾಶ ಮಾಡಿಕೊಟ್ಟಿದ್ದಕ್ಕೆ, (3) ಕಾನೂನು ಪಾಲಕರ ಕೈತಪ್ಪಿಸಿ ವಿಡಿಯೋಗಳು ಸಮಾಜಘಾತುಕರ ಕೈಗೆ ಸಿಗುವಂತೆ ಮಾಡಿದಕ್ಕೆ, (4) ನೂರಾರು ಮಹಿಳೆಯರ ಮತ್ತು ಅವರ ಕುಟುಂಬದವರ ಬದುಕಿನ ಘನತೆಗೆ ಕುಂದು ತಂದಿರುವುದಕ್ಕೆ, (5) ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡಿದ್ದಕ್ಕೆ (6) ಚುನಾವಣೆಯ ಮೇಲೆ ಈ ಹಗರಣವು ಪ್ರತಿಕೂಲ ಪರಿಣಾಮ ಬೀರುವಂತೆ ಸಂಚು ರೂಪಿಸಿದ್ದಕ್ಕೆ ಸೂಕ್ತ ಕಾನೂನುಗಳ ಅಡಿಯಲ್ಲಿ ಮೊಕದ್ದಮೆ ಹೂಡಬೇಕು.
8. ವಿಡಿಯೋಗಳನ್ನು ಸಾರ್ವಜನಿಕರಿಗೆ ಹಂಚಿದವರ ವಿರುದ್ಧ ಮಾನವಹಕ್ಕುಗಳಿಗೆ ಧಕ್ಕೆ ತಂದಿರುವುದು, ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವುದು, ಚುನಾವಣೆಯನ್ನು ಸ್ಯಾಬೊಟೇಜ್ ಮಾಡಲು ಸಂಚು ಮಾಡಿರುವ ಆರೋಪದ ಮೇಲೆ ಮೊಕದ್ದಮೆ ಹೂಡಬೇಕು.

9.ವಿಡಿಯೋಗಳ ಕುರಿತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಜ್ಯ ಅಧ್ಯಕ್ಷರಿಗೆ ಬಿ.ದೇವರಾಜೇಗೌಡ ಬರೆದಿರುವುದಾಗಿ ಹೇಳುತ್ತಿರುವ ಪತ್ರಗಳನ್ನು ಆಧರಿಸಿ, ಆ ಇಬ್ಬರು ರಾಜಕೀಯ ನಾಯಕರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿಲ್ಲದೆ ಇರುವುದಕ್ಕೆ ಅವರುಗಳನ್ನೂ ಸಂಚಿನ ಭಾಗವಾಗಿ ಪರಿಗಣಿಸಬೇಕು.
10.ಕೆಲವು ವಿಡಿಯೋಗಳು ಐದಾರು ವರ್ಷಗಳಷ್ಟು ಹಳೆಯವು ಎಂದು ಎಚ್ ಡಿ ರೇವಣ್ಣ ಹೇಳಿರುವುದು ವರದಿಯಾಗಿದೆ. ಅಷ್ಟು ವರ್ಷಗಳಿಂದ ನಡೆಯುತ್ತಿರುವ ಈ ಲೈಂಗಿಕ ವಿಕೃತಿಯನ್ನು ಮುಂದುವರೆಯಲು ಬಿಟ್ಟಿರುವುದರಿಂದ ಅವರ ಕುಟುಂಬದ ಎಲ್ಲ ಸದಸ್ಯರನ್ನು ಈ ಕೃತ್ಯದ accomplice ಗಳೆಂದು ಪರಿಗಣಿಸಿ ಅವರ ಮೇಲೆಯೂ ಮೊಕದ್ದಮೆ ಹೂಡಬೇಕು.
11.ಆರೋಪಿಯು ದೇಶ ಬಿಟ್ಟು ಪರಾರಿಯಾಗಿರುವುದು ಗೃಹ ಇಲಾಖೆಯ ಮತ್ತು ಇಂಟೆಲಿಜೆನ್ಸ್ ವಿಭಾಗದ ವೈಫಲ್ಯ. ಈ ಇಲಾಖೆಗಳ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು
12.ಪ್ರಜ್ವಲ್ ತನ್ನ ಹುಳುಕುಗಳನ್ನು ಮುಚ್ಚಿಟ್ಟುಕೊಳ್ಳಲು ಪಡೆದ ಈ ತಡೆಯಾಜ್ಞೆಯಿಂದ ಜನರ ಹಕ್ಕಿನ ಉಲ್ಲಂಘನೆಯಾಗಿದ್ದು ಜನರ ಹಕ್ಕುಗಳ ಸಂರಕ್ಷಕನಾಗಿರುವ (ಕಸ್ಟೋಡಿಯನ್) ರಾಜ್ಯ ಸರ್ಕಾರವು ಈ ಕುರಿತು ಮೊಕದ್ದಮೆ ದಾಖಲಿಸಬೇಕು. ಜನರ ಮಾಹಿತಿಯ ಹಕ್ಕನ್ನು ಎತ್ತಿ ಹಿಡಿಯಬೇಕು.
13.ಎಚ್ ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಅವರ ಶಿಫಾರಸ್ಸಿನ ಮೇರೆಗೆ ಹಾಸನ ಜಿಲ್ಲೆಯ ವಿವಿಧ ಕಚೇರಿಗಳಲ್ಲಿ ನೇಮಕಗೊಂಡಿರುವ ಅಧಿಕಾರಿಗಳನ್ನು ಎಲ್ಲ ಈ ಕೂಡಲೆ ವರ್ಗಾವಣೆ ಮಾಡಬೇಕು.
14.ಎಸ್‌ಐಟಿ ತನಿಖೆ ಪೂರ್ಣಗೊಳ್ಳುವವರೆಗೆ ಎಚ್ ಡಿ ರೇವಣ್ಣ ಅವರ ವಿಧಾನ ಸಭೆ ಸದಸ್ಯತ್ವವನ್ನು ತಾತ್ಕಾಲಿಕವಾಗಿ ರದ್ದುಪಡಿಸಬೇಕು.
15.ಪ್ರಜ್ವಲ್ ಕುಟುಂಬಕ್ಕೆ ಒದಗಿಸಲಾಗಿರುವ ಎಲ್ಲ ಸರ್ಕಾರಿ ಸವಲತ್ತುಗಳನ್ನು ಈ ಕೂಡಲೆ ಹಿಂದಕ್ಕೆ ಪಡೆಯಬೇಕು.
16. ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ಇರುವ ತಡೆಯಾಜ್ಞೆ ತೆರವುಗೊಳಿಸಬೇಕು.












Click it and Unblock the Notifications