ಲೋಕಸಭೆ ಚುನಾವಣೆ ಹಿನ್ನಡೆ; ಸತ್ಯ ಶೋಧನಾ ಸಮಿತಿ ರಚನೆ
ಬೆಂಗಳೂರು, ಜೂನ್ 20: ಲೋಕಸಭೆ ಚುನಾವಣೆ 2024ರ ಫಲಿತಾಂಶ ಪ್ರಕಟವಾಗಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಕಾಂಗ್ರೆಸ್ ಪಕ್ಷ ದೇಶದಲ್ಲಿ 99 ಸ್ಥಾನಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿಯೇ ಪಕ್ಷ ನಿರೀಕ್ಷೆ ಮಾಡಿದಷ್ಟು ಫಲಿತಾಂಶ ಬಂದಿಲ್ಲ.
ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರುವ ಅಂಶಗಳ ಕುರಿತು ವರದಿ ನೀಡಲು ಕಾಂಗ್ರೆಸ್ ಪಕ್ಷ ಸತ್ಯ ಶೋಧನಾ ಸಮಿತಿ ರಚನೆ ಮಾಡಿದೆ. ಕರ್ನಾಟಕ ಸೇರಿದಂತೆ ಹಿನ್ನಡೆ ಉಂಟಾದ 7 ರಾಜ್ಯಗಳ ವರದಿ ನೀಡಲು ಸಮಿತಿಗೆ ಸೂಚನೆ ನೀಡಲಾಗಿದೆ. ಸಮಿತಿಯಲ್ಲಿ ಇಬ್ಬರು ಮತ್ತು ಮೂವರು ಸದಸ್ಯರಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಕುರಿತು ಆದೇಶ ಹೊರಡಿಸಿದ್ದಾರೆ. ಕರ್ನಾಟಕದಲ್ಲಿಯೂ ಕಾಂಗ್ರೆಸ್ ಅಧಿಕಾರದಲ್ಲಿದೆ. ರಾಜ್ಯದಲ್ಲಿಯೂ ಕಾಂಗ್ರೆಸ್‌ಗೆ ಹಿನ್ನಡೆ ಉಂಟಾಗಿತ್ತು. ರಾಜ್ಯದ ವರದಿ ನೀಡಲು ಮೂವರು ಸದಸ್ಯರ ಸತ್ಯ ಶೋಧನಾ ಸಮಿತಿ ರಚನೆ ಮಾಡಲಾಗಿದೆ.
ಕರ್ನಾಟಕಕ್ಕೆ ರಚನೆ ಮಾಡಿರುವ ಸಮಿತಿಯಲ್ಲಿ ಮಧುಸೂಧನ್ ಮಿಸ್ತ್ರಿ, ಗೌರವ್ ಗೋಗಿ ಮತ್ತು ಹಿಬಿ ಇಡನ್ ಸದಸ್ಯರು. ಕರ್ನಾಟಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ರಾಜ್ಯ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷ ರಾಜ್ಯದಲ್ಲಿ ಎರಡಂಕಿ ಸೀಟು ಗೆಲ್ಲಲು ವಿಫಲವಾಗಿತ್ತು.
ಮಧ್ಯ ಪ್ರದೇಶ, ಛತ್ತೀಸ್‌ಗಢ, ಒಡಿಶಾ, ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಿರುವ ಕುರಿತು ಸತ್ಯ ಶೋಧನಾ ಸಮಿತಿ ವರದಿಯನ್ನು ತಯಾರು ಮಾಡಿ ಎಐಸಿಸಿಗೆ ಸಲ್ಲಿಕೆ ಮಾಡಲಿದೆ.
ಲೋಕಸಭೆ ಚುನಾವಣೆ ಫಲಿತಾಂಶ: ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕ ಪ್ರಮುಖವಾಗಿದೆ. ಪಕ್ಷ ಅಧಿಕಾರದಲ್ಲಿದ್ದರೂ ಸಹ ರಾಜ್ಯದ 28 ಕ್ಷೇತ್ರಗಳಲ್ಲಿ ಪಕ್ಷ ನಿರೀಕ್ಷೆ ಮಾಡಿದಷ್ಟು ಸೀಟುಗಳನ್ನು ಗೆದ್ದಿಲ್ಲ. ರಾಜ್ಯದಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಸೀಟುಗಳಲ್ಲಿ ಜಯಗಳಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಆಡಳಿತ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟಾಗಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 135 ಸ್ಥಾನಗಳಲ್ಲಿ ಜಯಗಳಿಸಿದ ಅಧಿಕಾರ ಹಿಡಿದ ಕಾಂಗ್ರೆಸ್ 2024ರ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ರೂಪಿಸಿದ ತಂತ್ರಗಳು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಮುಂದೆ ವಿಫಲವಾಗಿವೆ.
ರಾಜ್ಯದಲ್ಲಿ 20 + ಸ್ಥಾನದಲ್ಲಿ ಜಯಗಳಿಸಬೇಕು ಎಂದು ಹೈಕಮಾಂಡ್ ನಾಯಕರು ಟಾರ್ಗೆಟ್ ನೀಡಿದ್ದರು. ಆದರೆ 10 ಸ್ಥಾನಗಳಿಸಲು ಸಹ ಪಕ್ಷ ವಿಫಲವಾಗಿದೆ. ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಹೋದರ ಡಿ. ಕೆ. ಸುರೇಶ್ ಸಹ ಸೋಲು ಕಂಡಿದ್ದಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಬೆಂಗಳೂರು ನಗರದ ಮೂರು, ಹಳೆ ಮೈಸೂರು ಭಾಗದ ಎಲ್ಲಾ ಕ್ಷೇತ್ರಗಳನ್ನು ಕಾಂಗ್ರೆಸ್ ಬಿಜೆಪಿಗೆ ಬಿಟ್ಟುಕೊಟ್ಟಿದೆ. ಜೆಡಿಎಸ್‌ನ ಭದ್ರಕೋಟೆಯಾದ ಹಾಸನದಲ್ಲಿ ಕಾಂಗ್ರೆಸ್ ಗೆದ್ದಿದೆ. ಆದರೆ ಡಿ. ಕೆ. ಸುರೇಶ್ ಬೆಂಗಳೂರು ಗ್ರಾಮಾಂತರದಲ್ಲಿ ಸೋಲು ಕಂಡಿದ್ದಾರೆ. ತುಮಕೂರಿನಲ್ಲಿ ಕಾಂಗ್ರೆಸ್‌ಗೆ ಗೆಲುವು ಪಕ್ಕಾ ಎಂಬ ವರದಿ ಇತ್ತು. ಆದರೆ ಬಿಜೆಪಿಯ ವಿ. ಸೋಮಣ್ಣ ಗೆಲುವು ಕಂಡಿದ್ದಾರೆ.
ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಸೋತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ಗೆ ಒಂದೂ ಸೀಟು ಸಿಕ್ಕಿಲ್ಲ. ಮೂವರು ಸದಸ್ಯರ ಸತ್ಯ ಶೋಧನಾ ಸಮಿತಿ ಈ ಎಲ್ಲಾ ಅಂಶಗಳ ಕುರಿತು ವಿವರವಾದ ವರದಿ ತಯಾರು ಮಾಡಿ ಸಲ್ಲಿಕೆ ಮಾಡಲಿದೆ.












Click it and Unblock the Notifications