ರಾಜಕೀಯ ಸ್ವಾರ್ಥಕ್ಕೆ ರಾಜ್ಯದ ಹಿತ ಮರೆತ ಜನಪ್ರತಿನಿಧಿಗಳು!
ಬೆಂಗಳೂರು, ಡಿಸೆಂಬರ್ 02: ರಾಜ್ಯದಲ್ಲಿ ಅದೇನಾಗಿದೆಯೋ ಗೊತ್ತಿಲ್ಲ.. ಬೆಳಗೆದ್ದರೆ ಪರಸ್ಪರ ರಾಜಕೀಯ ಕೆಸರು ಎರಚಾಟ ಬಿಟ್ಟರೆ ಮತ್ತೇನು ಕಾಣಿಸದಂತಾಗಿದೆ. ಎಲ್ಲೋ ಒಂದು ಕಡೆ ರಾಜಕೀಯ ಪ್ರತಿಷ್ಠೆಗೋಸ್ಕರ ನಡೆಯುತ್ತಿರುವ ಕಿತ್ತಾಟದಲ್ಲಿ ರಾಜ್ಯದ ಜನರು ಬಡವರಾಗುತ್ತಿದ್ದಾರೆ. ಇದರ ಅರಿವಿಲ್ಲದ ರಾಜಕೀಯ ನಾಯಕರು ಮಾತ್ರ ಸ್ವಾರ್ಥ ರಾಜಕೀಯ ಮಾಡುತ್ತಾ ಮುನ್ನಡೆಯುತ್ತಿದ್ದಾರೆ.
ನಮ್ಮ ರಾಜಕೀಯ ನಾಯಕರು ಸ್ವಾರ್ಥ ಮರೆತು ರಾಜ್ಯ ಜನರ ಹಿತದ ಚಿಂತನೆ ಮಾಡಿದ್ದಾರಾ? ಖಂಡಿತಾ ಇಲ್ಲ. ಜನ ನೀಡಿದ ಮತದಿಂದಲೇ ಆರಿಸಿ ಬಂದವರು ಜನಕ್ಕೆ ಏನು ಮಾಡಬೇಕೋ ಅದನ್ನು ಮಾಡದೆ ಕೇವಲ ಉಡಾಫೆಯ ಮಾತನಾಡಿಕೊಂಡು ಓಡಾಡುತ್ತಿರುವುದು ಎದ್ದು ಕಾಣಿಸುತ್ತಿದೆ. ಮೇಲಿಂದ ಮೇಲೆ ನಡೆಯುತ್ತಿರುವ ಚುನಾವಣೆಗೆ ಬೇಕಾದ ರಾಜಕೀಯ ತಂತ್ರಗಳನ್ನು ಹೆಣೆಯುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕಳೆದ ಒಂದೂವರೆ ವರ್ಷದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಉಪಚುನಾವಣೆ ಹೀಗೆ ರಾಜ್ಯದೊಳಗೆ ಎರಡು ಚುನಾವಣೆಯನ್ನು ಎದುರಿಸಿದ್ದಲ್ಲದೆ, ಹೊರ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿಯೂ ಪಾಲುದಾರಿಕೆಯನ್ನು ವಹಿಸಿದ್ದು ಬರೀ ಚುನಾವಣೆಯಲ್ಲಿಯೇ ಸಮಯ ಕಳೆದುಹೋಗಿದೆ.
ಹಗರಣ, ಬೆಲೆ ಏರಿಕೆ ವಿರುದ್ಧ ಹೋರಾಡಿದ್ದ ಕಾಂಗ್ರೆಸ್
ಇನ್ನು ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ವಿರುದ್ಧ ಹಗರಣ, ಬೆಲೆ ಏರಿಕೆ ಮೊದಲಾದವುಗಳ ವಿರುದ್ಧ ಹೋರಾಟ ಮಾಡುತ್ತಾ ಅಧಿಕಾರಕ್ಕೆ ಬಂದ ಕೂಡಲೇ ಹಗರಣಗಳ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಅಟ್ಟುವ ವಾಗ್ದಾನದೊಂದಿಗೆ ಗೆದ್ದು ಬಂದು ಒಂದೂವರೆ ವರ್ಷವಾದರೂ ತನಿಖೆ ನಡೆಸಿ ಸತ್ಯಾಂಶವನ್ನು ಹೊರಗೆಡವುವಲ್ಲಿ ವಿಫಲರಾಗಿದ್ದು, ಕೇವಲ ರಾಜಕೀಯಕ್ಕೆ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆಡಳಿತರೂಢ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಯಾವುದಾದರೂ ಅಗತ್ಯವಸ್ತುಗಳ ಬೆಲೆ ಕಡಿಮೆಯಾಗಿದೆಯಾ? ಖಂಡಿತಾ ಇಲ್ಲ. ಆದರೆ ಬೆಲೆ ಏರಿಕೆ ಮಾತ್ರ ಎಲ್ಲ ವಸ್ತುಗಳ ಮೇಲೆಯೂ ಆಗಿದೆ. ಹಾಗೆಯೇ ಹಗರಣಗಳ ಆರೋಪಗಳು ಸಾಲು ಸಾಲಾಗಿ ಬಂದಿವೆ. ಇದೇ ಆರೋಪದಲ್ಲಿ ಸಚಿವರೊಬ್ಬರಯ ಜೈಲಿಗೆ ಹೋಗಿದ್ದು ಸರ್ಕಾರಕ್ಕೆ ಮುಜುಗರವಲ್ಲವೆ? ಹಾಗಾದರೆ ಜನ ಯಾರನ್ನು ನಂಬಬೇಕು? ಎಲ್ಲ ಪಕ್ಷ, ರಾಜಕೀಯ ನಾಯಕರು ಒಂದೇ ಎಂಬ ತೀರ್ಮಾನಕ್ಕೆ ಜನ ಬರಬೇಕಲ್ಲದೆ?
ನಿಲ್ಲದ ನಾಯಕರ ಕುರ್ಚಿ ಬಡಿದಾಟ
ಆಡಳಿತ ಪಕ್ಷದಲ್ಲಿ ಕುರ್ಚಿ ಬಡಿದಾಟ ಅಧಿಕಾರ ಹಿಡಿದಲ್ಲಿಂದಲೂ ಇದೆ. ಅದು ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಮುಖ್ಯಮಂತ್ರಿ, ಸಚಿವ, ಕೆಪಿಸಿಸಿ ಅಧ್ಯಕ್ಷ, ನಿಗಮಮಂಡಳಿಗಳ ಸ್ಥಾನ ಹೀಗೆ ಎಲ್ಲದರ ಮೇಲೆ ಕಣ್ಣಿಟ್ಟು ಕೂತ ದೊಡ್ಡಪಡೆಯಿದೆ. ಹೀಗಾಗಿ ವಿರೋಧ ಪಕ್ಷಗಳಿರಲಿ, ಸ್ವಪಕ್ಷದವರಿಂದಲೇ ಕುರ್ಚಿಯನ್ನು ಕಾಪಾಡಿಕೊಳ್ಳುವುದು ಸವಾಲ್ ಆಗಿದ್ದು, ಹೀಗಿರುವಾಗ ರಾಜ್ಯದ ಅಬಿವೃದ್ಧಿಯತ್ತ ಗಮನ ಹರಿಸಲು ಯಾರಿಗೂ ಸಮಯ ಇಲ್ಲದಂತಾಗಿದೆ.

ಸದ್ಯಕ್ಕೆ ರಾಜ್ಯ ಸರ್ಕಾರವಂತು ಗ್ಯಾರಂಟಿ ಯೋಜನೆಯಿಂದಾಗಿ ಇಡೀ ರಾಜ್ಯದ ಜನ ಯಾವುದೇ ಸಮಸ್ಯೆಗಳಿಲ್ಲದ ನೆಮ್ಮದಿಯಾಗಿದ್ದಾರೆ ಎಂಬ ತೀರ್ಮಾನಕ್ಕೆ ಬಂದು ಬಿಟ್ಟಿದೆ. ಗ್ಯಾರಂಟಿ ಯೋಜನೆಗಳಾಚೆಗೂ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡಬೇಕಿದೆ ಎಂಬುದನ್ನು ಮರೆತಂತಿದೆ. ಈಗಾಗಲೇ ರಸ್ತೆಗಳು ಹಾಳಾಗುತ್ತಿವೆ. ಅವುಗಳನ್ನು ದುರಸ್ತಿ ಪಡಿಸುವ ಕೆಲಸಕ್ಕೆ ಮುಂದಾದಂತೆ ಕಾಣಿಸುತ್ತಿಲ್ಲ.
ನೆನೆಗುದಿಗೆ ಬಿದ್ದ ಅಭಿವೃದ್ಧಿ ಕಾರ್ಯಯಗಳು
ಮೊದಲೆಲ್ಲ ಕಟ್ಟಡ ಕಾಮಗಾರಿಗೆ, ರಸ್ತೆ ದುರಸ್ತಿಗೆ, ಚರಂಡಿ ನಿರ್ಮಾಣಕ್ಕೆ ಹೀಗೆ ಅಭಿವೃದ್ಧಿ ಕಾಮಗಾರಿಗಳ ಬಗೆಗೆ ಭೂಮಿ ಪೂಜೆಯ ಸುದ್ದಿಗಳು ಪತ್ರಿಕೆಗಳಲ್ಲಿ ಹೆಚ್ಚು ಹೆಚ್ಚಾಗಿ ಕಾಣಿಸುತ್ತಿದ್ದವು. ಈಗ ಅಂತಹ ಸುದ್ದಿಗಳೇ ಬಾರದಂತಾಗಿದೆ. ಈಗಾಗಲೇ ಸರ್ಕಾರದ ಗ್ಯಾರಂಟಿ ಯೋಜನೆಗಳು ಮನೆಮನೆ ತಲುಪಿವೆ ಎನ್ನುವುದಾದರೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಮಾವೇಶ ಮಾಡಿ ಜನರಿಗೆ ಪ್ರಚುರಪಡಿಸುವ ಅಗತ್ಯವೇನಿದೆ? ಇದು ರಾಜಕೀಯವಲ್ಲದೆ ಮತ್ತೇನು?
ಇನ್ನು ಸಂಸತ್ತಿನಿಂದ ಆರಂಭವಾಗಿ ರಾಜ್ಯ ವಿಧಾನಸಭೆಯ ತನಕ ಕಲಾಪಗಳು ಸುಗಮವಾಗಿ ನಡೆಯುತ್ತಿಲ್ಲ ಯಾವುದೋ ಒಂದು ವಿಚಾರವನ್ನಿಟ್ಟುಕೊಂಡು ಪ್ರತಿಭಟನೆ ಧರಣಿ, ಕೋಲಾಹಲಗಳ ನಡುವೆ ಕಲಾಪ ಮುಗಿದು ಹೋಗುತ್ತಿವೆ. ದೇಶದ ಮತ್ತು ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಂದೊಳ್ಳೆಯ ಚರ್ಚೆಗಳು ನಡೆಯುತ್ತಿಲ್ಲ. ಹೀಗೆ ಆದರೆ ಅಭಿವೃದ್ಧಿ ಹೇಗೆ? ಜನಸಾಮಾನ್ಯರ ಗತಿ ಏನು? ಯಾರಿಗೂ ಜನರ ಹಿತ ಬೇಕಾಗಿಲ್ಲವೆಂಬಂತಾಗಿದೆ.
ಬೆನ್ನುಮೂಳೆಯಿಲ್ಲದ ವಿರೋಧ ಪಕ್ಷಗಳು
ಆಡಳಿತ ಪಕ್ಷದ ದಾರಿ ತಪ್ಪಿದಾಗಲೆಲ್ಲ ಅದನ್ನು ಸರಿದಾರಿಗೆ ತರಬಲ್ಲ ವಿರೋಧ ಪಕ್ಷಗಳು ರಾಜ್ಯದಲ್ಲಿ ಬೆನ್ನು ಮೂಳೆ ಮುರಿದುಕೊಂಡು ಮೂಲೆಯಲ್ಲಿ ಕುಳಿತಿವೆ. ರಾಜ್ಯಲ್ಲೀಗ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿದ್ದರೂ ಎರಡು ಪಕ್ಷಗಳಲ್ಲಿ ಬಣ ಬಡಿದಾಟ ಅದರ ಸಾಮರ್ಥ್ಯ ಕುಗ್ಗುವಂತೆ ಮಾಡಿದೆ. ಒಗ್ಗಟ್ಟು ಮಾಯವಾಗಿ ಅವರೊಳಗೆ ಕಚ್ಚಾಟ ನಡೆಯುತ್ತಿರುವುದು ಆಡಳಿತರೂಢ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ.
ರಾಜ್ಯ ರಾಜಕೀಯವನ್ನು ಗಮನಿಸಿದ್ದೇ ಆದರೆ ಮೂರು ಪಕ್ಷಗಳಲ್ಲಿಯೂ ಸ್ವಾರ್ಥದ ರಾಜಕೀಯ ತಾಂಡವವಾಡುತ್ತಿದ್ದು, ಏನೇ ಮಾಡಿದರೂ ಅದರಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುತ್ತಿರುವುದು ಎದ್ದು ಕಾಣಿಸುತ್ತಿದೆ. ರಾಜಕೀಯ ಹೊರತಾಗಿ ರಾಜ್ಯದ ಮತ್ತು ಜನರ ಹಿತದೃಷ್ಟಿಯಿಂದ ಕೆಲಸ ಮಾಡಬೇಕೆನ್ನುವ ಇಚ್ಛಾಸಕ್ತಿ ದೂರವಾಗಿದೆ. ಇದರ ಪರಿಣಾಮಗಳನ್ನು ಮುಂದೆ ರಾಜ್ಯದ ಜನರೇ ಅನುಭವಿಸಬೇಕಾಗಿದೆ.
-
ಸಕಲೇಶಪುರದಲ್ಲಿ ಫೋಟೋಗ್ರಾಫರ್ಗಳ ಮೇಲೆ ಹಲ್ಲೆ ಪ್ರಕರಣ: ದುಬಾರಿ ಕ್ಯಾಮೆರಾಗೆ ಹಾನಿ, ಆರೋಪಿಗಳ ಬಂಧನ -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications