ಕದನ ಕುತೂಹಲ : ಶೆಟ್ಟರ್ ಗೆಲುವಿನ ಓಟಕ್ಕೆ ತಡೆ ಬೀಳಲಿದೆಯೇ?
ಹುಬ್ಬಳ್ಳಿ, ಮಾರ್ಚ್ 27 : ಈ ಬಾರಿಯ ಚುನಾವಣೆಯಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್. ವಿಧಾನಸಭೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕ್ಷೇತ್ರದ ಹಾಲಿ ಶಾಸಕರು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸತತವಾಗಿ 5 ಬಾರಿ ಆಯ್ಕೆಯಾಗಿರುವ ಜಗದೀಶ್ ಶೆಟ್ಟರ್, 6ನೇ ಗೆಲುವಿಗೆ ಸಿದ್ಧರಾಗುತ್ತಿದ್ದಾರೆ. ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್, ಮನೆ-ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ.
2008ರ ತನಕ ಈ ಕ್ಷೇತ್ರ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರವಾಗಿತ್ತು. ಕ್ಷೇತ್ರ ಪುನರ್ ವಿಂಗಡನೆ ಬಳಿಕ ನಗರ ಪ್ರದೇಶಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 19 ವಾರ್ಡ್‌ಗಳು ಈ ಕ್ಷೇತ್ರದ ಒಡಲಲ್ಲಿ ಇವೆ. ಈ ಕ್ಷೇತ್ರದಲ್ಲಿ ಗೆದ್ದವರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಮಾತುಗಳು ಇವೆ.
ಈ ಮಾತನ್ನು ಪುಷ್ಠೀಕರಿಸುವಂತೆ ಈ ಕ್ಷೇತ್ರದಿಂದ ಗೆದ್ದಿದ್ದ ಎಸ್.ಆರ್.ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದರು. ನಂತರ ಇದೇ ಕ್ಷೇತ್ರದಿಂದ ಗೆಲುವು ಸಾಧಿಸುತ್ತಿರುವ ಜಗದೀಶ್ ಶೆಟ್ಟರ್ ಸಹ ಮುಖ್ಯಮಂತ್ರಿಯಾದರು.
ಕ್ಷೇತ್ರಕ್ಕೆ ಜೆಡಿಎಸ್ ರಾಜಣ್ಣ ಕೊರವಿ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಕಾಂಗ್ರೆಸ್ ಟಿಕೆಟ್‌ಗಾಗಿ ಇನ್ನೂ ಪೈಪೋಟಿ ನಡೆಯುತ್ತಿದೆ. ಆಮ್ ಆದ್ಮಿ ಪಕ್ಷ ಸಂತೋಷ್ ನರಗುಂದ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ.

ಕ್ಷೇತ್ರದ ರಾಜಕೀಯ ಇತಿಹಾಸ
1957ರಿಂದ 2013ರ ತನಕ ಇಲ್ಲಿ ಗೆದ್ದವರ ಸಂಖ್ಯೆ ಕೇವಲ 4. ಇಲ್ಲಿ ಗೆದ್ದವರು ಮರು ಆಯ್ಕೆ ಆಗುವುದು ಸಂಪ್ರದಾಯ. ಎಂ.ಆರ್.ಪಾಟೀಲ, ಎಸ್.ಆರ್.ಬೊಮ್ಮಾಯಿ, ಜಿ.ಆರ್.ಸಾಂಡ್ರಾ ಮರು ಆಯ್ಕೆಯಾದವರು. ಜಗದೀಶ್ ಶೆಟ್ಟರ್ ಸಹ 5 ಬಾರಿ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿಯೂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಸಿಗುವುದು ಖಚಿತ. ಶಿಲ್ಪಾ ಶೆಟ್ಟರ್ ಅವರು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. 6ನೇ ಗೆಲುವಿಗಾಗಿ ಜಗದೀಶ್ ಶೆಟ್ಟರ್ ಎದುರು ನೋಡುತ್ತಿದ್ದಾರೆ. ಶೆಟ್ಟರ್ ಕಟ್ಟಿಹಾಕಲು ಕಾಂಗ್ರೆಸ್, ಜೆಡಿಎಸ್ ಮತ್ತು ಆಮ್ ಆದ್ಮಿ ಪಕ್ಷ ತಂತ್ರ ರೂಪಿಸುತ್ತಿವೆ.

ಕ್ಷೇತ್ರದ ಜಾತಿ ಲೆಕ್ಕಾಚಾರ
ಕ್ಷೇತ್ರದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಸ್ಲಿಂಮರು, ಹಿಂದುಳಿದವರು, ದಲಿತರು, ಪಟ್ಟೇಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈದ್ಗಾ ಮೈದಾನದ ವಿವಾದ ಮತ್ತು ಎಲ್.ಕೆ.ಅಡ್ವಾಣಿ ಅವರ ರಥಯಾತ್ರೆ ಬಳಿಕ ಕ್ಷೇತ್ರದಲ್ಲಿ ಕಮಲ ಅರಳಿತು. ಬಿಜೆಪಿ ನಾಯಕರೂ ನಂತರ ಕ್ಷೇತ್ರವನ್ನು ಭದ್ರಕೋಟೆ ಮಾಡಿಕೊಂಡಿದ್ದಾರೆ.
1994ರ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದಲ್ಲಿ ಜನತಾದಳದಿಂದ ಶೆಟ್ಟರ್ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು. ವಿರೋಧ ಪಕ್ಷಗಳು ಪ್ರತಿ ಬಾರಿ ಹೊಸ ಅಭ್ಯರ್ಥಿ ಕಣಕ್ಕಿಳಿಸುತ್ತವೆ. ಆದ್ದರಿಂದ, ಬಿಜೆಪಿಗೆ ಸಹಾಯಕವಾಗುತ್ತದೆ.

ಕಾಂಗ್ರೆಸ್ ಅಭ್ಯರ್ಥಿ ಯಾರು?
ಕಾಂಗ್ರೆಸ್ ಪಕ್ಷದಿಂದ ಡಾ.ಮಹೇಶ್ ನಲವಾಡ್ ಅವರು ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಕಳೆದ ಚುನಾವಣೆಯಲ್ಲಿ ಅವರು ಶೆಟ್ಟರ್ ವಿರುದ್ಧ ಸ್ಪರ್ಧಿಸಿದ್ದರು. 40,447 ಮತಗಳನ್ನು ಪಡೆದಿದ್ದರು. ಈ ಬಾರಿಯೂ ಅವರು ಟಿಕೆಟ್ ಆಕಾಂಕ್ಷಿ.
ಎರಡು ವರ್ಷದಿಂದ ಕ್ಷೇತ್ರದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದಾರೆ ಮಹೇಶ್. ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗರಾಜ್ ಛಬ್ಬಿ ಅವರು ಸಹ ಟಿಕೆಟ್ ಆಕಾಂಕ್ಷಿ. ಯಾರಿಗೆ ಟಿಕೆಟ್ ಸಿಗಲಿದೆ? ಎಂದು ಕಾದು ನೋಡಬೇಕು.

ರಾಜಣ್ಣ ಕೊರವಿ ಜೆಡಿಎಸ್ ಅಭ್ಯರ್ಥಿ
ಜೆಡಿಎಸ್ ಪಕ್ಷ ರಾಜಣ್ಣ ಕೊರವಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. 2008ರಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಿದ್ದರು. 2013ರಲ್ಲಿ ಸ್ಪರ್ಧಿಸಿರಲಿಲ್ಲ. ಕಳೆದ ಚುನಾವಣೆಯಲ್ಲಿ ತರ್ಬೇಜ್ ಶಂಶಿ ಸ್ಪರ್ಧಿಸಿ 7,898 ಮತಗಳನ್ನು ಪಡೆದಿದ್ದರು.
ಈ ಬಾರಿ ಉತ್ತರ ಕರ್ನಾಟಕದಲ್ಲಿ ಹೆಚ್ಚು ಸೀಟು ಗೆಲ್ಲುವ ಉತ್ಸಾಹದಲ್ಲಿದೆ ಜೆಡಿಎಸ್. ಆದ್ದರಿಂದ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಮೇಲೆಯೂ ಪಕ್ಷ ಕಣ್ಣಿಟ್ಟಿದೆ.

ಸಂತೋಷ್ ನರಗುಂದ ಸ್ಪರ್ಧೆ
ಆಮ್ ಆದ್ಮಿ ಪಕ್ಷ ಸಂತೋಷ್ ನರಗುಂದ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಏರೋನಾಟಿಕಲ್ ಇಂಜಿನಿಯರ್ ಆಗಿರುವ ಇವರು ಜಗದೀಶ್ ಶೆಟ್ಟರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಜನ ಸಾಮಾನ್ಯನಿಗೆ ಮತ ನೀಡಿ ಎಂದು ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ.
ಮುಖ್ಯಮಂತ್ರಿಗಳನ್ನು ನಾಡಿಗೆ ಕೊಟ್ಟ ಕ್ಷೇತ್ರವಾದರೂ ಇಲ್ಲ ಕುಡಿಯುವ ನೀರು ಸೇರಿದಂತೆ ಅನೇಕ ಸಮಸ್ಯೆಗಳಿವೆ. ಇವುಗಳ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಾ ಸಂತೋಷ್ ಪ್ರಚಾರ ನಡೆಸುತ್ತಿದ್ದಾರೆ.












Click it and Unblock the Notifications