ರಾಜ್ಯ ರಾಜಕೀಯದಲ್ಲಿ ಸಂಚಲನ: ಚುನಾವಣೆ ಗೆಲುವಿಗಾಗಿ ನಾಯಕರ ಹೋರಾಟ
ರಾಜ್ಯ ರಾಜಕೀಯದಲ್ಲಿ ಸಂಚಲನ ಶುರುವಾಗಿದೆ. ಮೂರು ಪಕ್ಷಗಳು ಅಧಿಕಾರದ ಗದ್ದುಗೆಗಾಗಿ ಹೋರಾಟ ಆರಂಭಿಸಿದ್ದಾರೆ. ಇದುವರೆಗೆ ಮೌನವಾಗಿದ್ದ ನಾಯಕರೆಲ್ಲರೂ ಗೆಲುವಿಗಾಗಿ ಹೋರಾಟ ಆರಂಭಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 22: ರಾಜ್ಯ ರಾಜಕೀಯದಲ್ಲಿ ಸಂಚಲನ ಶುರುವಾಗಿದೆ. ಮೂರು ಪಕ್ಷಗಳು ಅಧಿಕಾರದ ಗದ್ದುಗೆಗಾಗಿ ಹೋರಾಟ ಆರಂಭಿಸಿದ್ದಾರೆ. ಇದುವರೆಗೆ ಮೌನವಾಗಿದ್ದ ನಾಯಕರೆಲ್ಲರೂ ಗೆಲುವಿಗಾಗಿ ಹೋರಾಟ ಆರಂಭಿಸಿದ್ದಾರೆ. ಆರೋಪ, ಪ್ರತ್ಯಾರೋಪ, ಜನಪರ ಕಾಳಜಿ, ಅಭಿವೃದ್ಧಿ ಮಂತ್ರಗಳು ಹೀಗೆ ಮತದಾರರನ್ನು ಸೆಳೆಯಲು ಬೇಕಾದ ತಂತ್ರ, ಪ್ರತಿತಂತ್ರಗಳು ಎಗ್ಗಿಲ್ಲದೆ ಸಾಗುತ್ತಿದೆ.
ರಾಜ್ಯದಾದ್ಯಂತ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪ್ರಚಾರಗಳನ್ನು ನಡೆಸುತ್ತಾ ಹಳ್ಳಿಹಳ್ಳಿಗೆ ತೆರಳುತ್ತಿದ್ದು, ಈಗ ಏನು ಮಾಡಿದ್ದೇವೆ ಎನ್ನುವುದಕ್ಕಿಂತ ಹೆಚ್ಚಾಗಿ ಮುಂದೆ ಮಾಡಲಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಣ್ಣಬಣ್ಣದ ಭರವಸೆಗಳನ್ನು ನೀಡುತ್ತಿದ್ದಾರೆ. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಮತದಾರರಿಗೆ ಅಗ್ಗದ ಉಡುಗೊರೆ, ಅರಶಿನ ಕುಂಕುಮ ನೀಡಿ ಮತವನ್ನು ಗಟ್ಟಿಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ನಾಯಕರು ಒಬ್ಬರ ಮೇಲೆ ಒಬ್ಬರು ಆರೋಪಗಳನ್ನು ಮಾಡುತ್ತಿದ್ದರೂ ಮೂರು ಪಕ್ಷಗಳಲ್ಲಿಯೂ ಎಲ್ಲವೂ ಸರಿ ಇದೆ ಎಂದು ಹೇಳಲಾಗುತ್ತಿಲ್ಲ, ಪಕ್ಷದೊಳಗೆ ಭಿನ್ನಾಭಿಪ್ರಾಯಗಳಿದ್ದು ಅವುಗಳಿಗೆ ತೇಪೆ ಹಚ್ಚಿ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ತೋರಿಸುವ ಪ್ರಯತ್ನಗಳು ನಡೆಯುತ್ತಿವೆ. ಜೆಡಿಎಸ್ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದ್ದರೂ ಮುಂದಿನ ಪಟ್ಟಿಯನ್ನು ಘೋಷಣೆ ಮಾಡುವುದು ಅಷ್ಟು ಸುಲಭವಾಗಿ ಉಳಿದಿಲ್ಲ.

ಕಾಂಗ್ರೆಸ್‌ನಲ್ಲಿ ದೊಡ್ಡಮಟ್ಟದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ
ಹೆಚ್.ಡಿ.ದೇವೇಗೌಡರ ಕುಟುಂಬದಲ್ಲಿಯೇ ಟಿಕೆಟ್ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಭುಗಿಲೆದ್ದಿರುವುದು ಗುಟ್ಟಾಗಿ ಉಳಿದಿಲ್ಲ. ಇನ್ನು ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ ದೊಡ್ಡಮಟ್ಟದಲ್ಲಿದ್ದು, ಟಿಕೆಟ್ ಘೋಷಣೆಯಾದ ಬಳಿಕ ಟಿಕೆಟ್ ಸಿಗದ ನಾಯಕರು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಬಿಜೆಪಿಯಲ್ಲಿಯೂ ಟಿಕೆಟ್ ವಿಚಾರದಲ್ಲಿ ಗೊಂದಲ ಏರ್ಪಡುವ ಸಾಧ್ಯತೆಯಿದ್ದರೂ ಹೈಕಮಾಂಡ್ ಖಡಕ್ ಆಗಿರುವ ಕಾರಣ ಮತ್ತು ಟಿಕೆಟ್ ಘೋಷಣೆ ಬಳಿಕದ ಅಸಮಾಧಾನವನ್ನು ಸರಿಪಡಿಸಿ ಒಟ್ಟಾಗಿ ಕೆಲಸ ಮಾಡಿಸುವುದು ಹೇಗೆ ಎಂಬುದು ಬಿಜೆಪಿ ನಾಯಕರಿಗೆ ಗೊತ್ತಿರುವುದರಿಂದ. ಬೀದಿ ರಂಪಾಟವಾಗುವುದಕ್ಕೆ ತಡೆಯೊಡ್ಡುತ್ತಾರಾ..? ಅಥವಾ ಅಲ್ಲಿಂದಲೂ ನಾಯಕರು ಎದ್ದು ಹೊರಬರುತ್ತಾರಾ..? ಗೊತ್ತಿಲ್ಲ.

ಕಾಂಗ್ರೆಸ್ ನಾಯಕರಲ್ಲಿ ಹೆಚ್ಚಿದ ಗೆಲುವಿನ ಉತ್ಸಾಹ
ಸಮ್ಮಿಶ್ರ ಸರ್ಕಾರವನ್ನು ಕೆಡವಿ ಬಿಜೆಪಿ ಅಧಿಕಾರ ಹಿಡಿದ ಬಳಿಕ ಮಹಾಮಾರಿ ಕೊರೊನಾ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಡಳಿತರೂಢ ಬಿಜೆಪಿ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದು ವಿಪಕ್ಷಗಳಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಸರ್ಕಾರದ ವೈಫಲ್ಯಗಳನ್ನು ನೋಡಿಕೊಂಡು ಸುಮ್ಮನಿದ್ದವು. ಆ ನಂತರ ಕೊರೊನಾ ನಡುವೆ ಮೇಕೆದಾಟು ಯೋಜನೆ ಹೋರಾಟವನ್ನು ಹುಟ್ಟು ಹಾಕಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅದರಲ್ಲಿ ಯಶಸ್ಸು ಕಂಡರು.
ಕಳೆದೊಂದು ವರ್ಷದಲ್ಲಿ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸಿದ ಕಾಂಗ್ರೆಸ್ ಅದನ್ನು ಜನರ ತನಕ ಕೊಂಡೊಯ್ಯುವಲ್ಲಿಯೂ ಯಶಸ್ವಿಯಾಗಿದೆ. ಚುನಾವಣಾ ಪ್ರಚಾರಸಭೆ, ಸಮಾವೇಶಗಳಲ್ಲಿ ಸೇರುತ್ತಿರುವ ಜನಸ್ತೋಮ ಕಾಂಗ್ರೆಸ್ ನಾಯಕರಲ್ಲಿ ಅದರಲ್ಲೂ ಡಿ.ಕೆ.ಶಿವಕುಮಾರ್ ಅವರಿಗೆ ಉತ್ಸಾಹವನ್ನು ಹೆಚ್ಚಿಸಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ನಾನೇ ಸಿಎಂ ಎಂಬ ಘೋಷಣೆಯೊಂದಿಗೆ ಮತ ಕೇಳುತ್ತಿದ್ದಾರೆ.

ರಾಷ್ಟ್ರಮಟ್ಟದ ನಾಯಕರನ್ನು ಕರೆತರುತ್ತಿರುವ ಬಿಜೆಪಿ ನಾಯಕರು
ಚುನಾವಣೆಯಲ್ಲಿ ಗೆಲುವು ನಮ್ಮದೇ ನಾವೇ ಅಧಿಕಾರ ನಡೆಸುವುದಾಗಿ ಕಾಂಗ್ರೆಸ್ ನಾಯಕರು ಘೋಷಣೆ ಮಾಡುತ್ತಿರುವುದರಿಂದ ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನು ಬೆಚ್ಚಿ ಬೀಳುವಂತಾಗಿದೆ. ಜೊತೆಗೆ ಬಿಜೆಪಿಗೆ ಟಾಂಗ್ ನೀಡುತ್ತಿದ್ದು, ಆಪರೇಷನ್ ಹಸ್ತಕ್ಕೆ ಮುಂದಾಗಿದೆ. ಈಗಾಗಲೇ ಕೆಲವೆಡೆ ನಾಯಕರು ಜೆಡಿಎಸ್, ಬಿಜೆಪಿ ತೊರೆದು ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ.
ಇತ್ತ ಬಿಜೆಪಿ ಸುಮ್ಮನೆ ಕೈ ಕಟ್ಟಿ ಕುಳಿತಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ನಾಯಕರು ರಾಜ್ಯ ಸುತ್ತುತ್ತಿದ್ದಾರೆ. ಅಲ್ಲಲ್ಲಿ ಪ್ರಚಾರ ಸಭೆಗಳನ್ನು ಮಾಡುತ್ತಿದ್ದಾರೆ. ಜೊತೆಗೆ ರಾಷ್ಟ್ರಮಟ್ಟದ ನಾಯಕರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ. ಮೇಲಿಂದ ಮೇಲೆ ಪ್ರಧಾನಿ ನರೇಂದ್ರ ಮೋದಿಯನ್ನು ಕರೆತರುವ ಕೆಲಸ ನಡೆಯುತ್ತಿದೆ.

HDK ಹೊರತುಪಡಿಸಿ ನಾಯಕತ್ವ ವಹಿಸಿಕೊಳ್ಳದ ಮುಖಂಡರು
ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ನಾಯಕರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅವರು ಪ್ರತ್ಯೇಕ ತಂಡಗಳಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಬಹುದಾಗಿದೆ. ಜೊತೆಗೆ ರಾಷ್ಟ್ರಮಟ್ಟದ ನಾಯಕರನ್ನು ಕರೆದುಕೊಂಡು ಬರಬಹುದಾಗಿದೆ. ಆದರೆ ಜೆಡಿಎಸ್ ಪರಿಸ್ಥಿತಿ ಹಾಗಿಲ್ಲ. ಪ್ರತಿ ಸಭೆ, ಸಮಾರಂಭಗಳಿಗೂ ಎಚ್.ಡಿ.ಕುಮಾರಸ್ವಾಮಿಯೇ ತೆರಳಬೇಕಾಗಿದೆ. ಅವರನ್ನು ಹೊರತು ಪಡಿಸಿ ಬೇರೆ ಯಾರೂ ಕೂಡ ನಾಯಕತ್ವ ವಹಿಸಿಕೊಂಡು ಸಮಾವೇಶ ನಡೆಸುವ ಪರಿಸ್ಥಿತಿಯಲ್ಲಿ ಇಲ್ಲದಂತಾಗಿದೆ.
ಪ್ರಭಾವಿ ನಾಯಕರ ಕೊರತೆ ಎದುರಿಸುತ್ತಿರುವ ಜೆಡಿಎಸ್ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರಚಾರಗಳನ್ನು ನಡೆಸಬೇಕಾಗಿದ್ದು, ಇದನ್ನು ಹೇಗೆ ನಿಭಾಯಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಇರುವ ಕೆಲವು ನಾಯಕರು ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತರಾಗಿದ್ದು, ಅವರ ಮುಂದಾಳತ್ವದಲ್ಲಿ ಇತರೆ ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ಸ್ಥಿತಿಯಲ್ಲಿ ಅವರಿಲ್ಲ. ಹೀಗಾಗಿ ಪ್ರತಿ ಕ್ಷೇತ್ರಕ್ಕೂ ಹೆಚ್.ಡಿ.ಕುಮಾರಸ್ವಾಮಿ ಅವರೇ ತೆರಳಬೇಕಾದಂತಹ ಪರಿಸ್ಥಿತಿ ಜೆಡಿಎಸ್ ನಲ್ಲಿದೆ.
ಚುನಾವಣೆಯ ದಿನಾಂಕ ನಿಗದಿಯಾಗಿಲ್ಲ. ಮೂರು ಪಕ್ಷಗಳಲ್ಲಿಯೂ ಅಭ್ಯರ್ಥಿಗಳ ಘೋಷಣೆಯಾಗಿಲ್ಲ. ಹೀಗಾಗಿ ಮುಂದೆ ಇದೆಲ್ಲವೂ ಆದ ಬಳಿಕ ಈಗಿರುವ ರಾಜಕೀಯ ಪರಿಸ್ಥಿತಿ ಸಂಪೂರ್ಣ ಬದಲಾದರೂ ಅಚ್ಚರಿಪಡಬೇಕಾಗಿಲ್ಲ. ಕೆಲವು ಕ್ಷೇತ್ರದಲ್ಲಿ ಬಂಡಾಯದ ಬಿಸಿಯೂ ತಟ್ಟಬಹುದು. ಹೀಗಾಗಿ ರಾಜ್ಯದಲ್ಲಿ ರಾಜಕೀಯವಾಗಿ ಮುಂದೇನು ಆಗಬಹುದು ಎಂಬುದೇ ಎಲ್ಲರನ್ನು ಕಾಡುತ್ತಿದೆ.












Click it and Unblock the Notifications