Get Updates
Get notified of breaking news, exclusive insights, and must-see stories!

ಪೂಜ್ಯರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ: ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಗಣ್ಯರ ಸಂತಾಪ

ಹಾಸನ, ಮಾರ್ಚ್ 23: ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರವಣಬೆಳಗೊಳದ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (74) ಗುರುವಾರ ವಿಧಿವಶರಾದರು. ಬೆಳ್ಳೂರು ಕ್ರಾಸ್‌ನಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆ ದಾಖಲಾಗಿದ್ದ ಸ್ವಾಮೀಜಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಇತಿಹಾಸ ತಜ್ಞರು, ತತ್ವ ಜ್ಞಾನಿಗಳು ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಶ್ರೀಕ್ಷೇತ್ರ ಶ್ರವಣಬೆಳಗೊಳದ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ನಮ್ಮನ್ನಗಲಿದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಪೂಜ್ಯರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಅವರ ಅಪಾರ ಸಂಖ್ಯೆಯ ಭಕ್ತರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

Political Leaders Condolence To Jain Mutt Sri Charukeerthi Bhattaraka Swamiji Death

ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳ ಅಂತ್ಯಸಂಸ್ಕಾರವನ್ನು ಜೈನ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಶ್ರವಣಬೆಳಗೊಳದ ಶ್ರೀ ಜೈನಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರು ಅಗಲಿದ ವಿಷಯ ಕೇಳಿ ನನಗೆ ತೀವ್ರ ಆಘಾತ ಉಂಟಾಗಿದೆ. ಶ್ರೀ ಭಗವಾನ್ ಬಾಹುಬಲಿ ಅವರ ಶಾಂತಿ, ಅಹಿಂಸೆ, ಸಹನೆ ತತ್ವಗಳನ್ನು ಪಸರಿಸುತ್ತಾ ಜನರಲ್ಲಿ ಅರಿವಿನ ಬೆಳಕು ಮೂಡಿಸಿದ್ದ ಪರಮಪೂಜ್ಯರು ನಾಡಿಗೆ ಅಪಾರ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಮಠದ ಭಕ್ತರು, ನಾಡಿನ ಜನರಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಸ್ವಾಮೀಜಿಗಳ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದು, ಶ್ರವಣಬೆಳಗೊಳದ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ವಿಧಿವಶರಾದ ಸುದ್ದಿ ತಿಳಿದು ಅತೀವ ನೋವಾಯಿತು. ಧಾರ್ಮಿಕ ಚಟುವಟಿಕೆಗಳ ಜೊತೆ ಶಿಕ್ಷಣ, ಸಮಾಜ ಸುಧಾರಣೆಗಾಗಿ ದುಡಿಯುತ್ತಿದ್ದ ಶ್ರೀಗಳ ಅಗಲಿಕೆಯಿಂದ ಸಮಾಜ ಬಡವಾಗಿದೆ. ಶ್ರೀಗಳ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಮಠದ ಅನುಯಾಯಿಗಳಿಗೆ ದೇವರು ಕರುಣಿಸಲಿ ಎಂದಿದ್ದಾರೆ.

ಶ್ರವಣಬೆಳಗೊಳದ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.

ಸ್ವಸ್ಥಿ ಶ್ರಿ ಚಾರುಕೀರ್ತಿ ಎಂಬ ಬಿರುದಾಂಕಿತ ಜೈನ ಭಟ್ಟಾರಕ ಸ್ವಾಮೀಜಿಗಳು ದೇಶಾದ್ಯಂತ ಅಪಾರ ಭಕ್ತವರ್ಗವನ್ನು ಹೊಂದಿದ್ದಾರೆ. ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬಹಳ ನೋವಾಗಿದೆ. ಪೂಜ್ಯರು ಧರ್ಮ ರಕ್ಷಣೆ, ಸಮಾಜ ಸೇವೆಗೆ ತಮ್ಮ ಜೀವನ ಅರ್ಪಿಸಿಕೊಂಡಿದ್ದರು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಅವರ ಅಗಲಿಕೆ ನೋವು ಭರಿಸುವ ಶಕ್ತಿ ಅವರ ಭಕ್ತ ವೃಂದಕ್ಕೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಜೈನ ಮಠದ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ವಿಧಿವಶರಾದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ. ಪೂಜ್ಯರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ.

ಕರ್ನಾಟಕದ ಜೈನ ಸಮುದಾಯದ ಹಿರಿಯ ಸ್ವಾಮೀಜಿಗಳಾಗಿದ್ದ ಶ್ರೀಗಳು ಸಂಸ್ಕೃತ, ಕನ್ನಡದಲ್ಲಿ ಪಾಂಡಿತ್ಯ ಹೊಂದಿದ್ದರು. ಜೈನ ತತ್ವಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ಜೈನರ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಇವರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯುತ್ತಿತ್ತು ಎಂದಿದ್ದಾರೆ.

ಶ್ರವಣಬೆಳಗೊಳ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಜಿನೈಕ್ಯರಾದ ಸುದ್ದಿ ಅತ್ಯಂತ ದುಖಃವನ್ನುಂಟುಮಾಡಿದೆ. 1970ರಲ್ಲಿ ಪಟ್ಟಾಭಿಶಿಕ್ತರಾದ ಸ್ವಾಮೀಜಿಯವರು ಸುಮಾರು ಐದು ದಶಕಗಳ ಕಾಲ ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದರು ಎಂದು ಸ್ವಾಮೀಜಿಗಳ ಅಗಲಿಕೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ಸಂತಾಪ ಸೂಚಿಸಿದ್ದಾರೆ.

ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆಗಳನ್ನು ನೀಡಿದ ಸ್ವಾಮೀಜಿಯವರು ಸದಾ ಕಾಲ ಅಹಿಂಸೆ, ತ್ಯಾಗ ಹಾಗೂ ಶಾಂತಿಯಿಂದ ಜೈನ ಪರಂಪರೆಯನ್ನು ಬೆಳಗಿದ್ದರು. ಇವರು ಮೂಲತಃ ನಮ್ಮ ಕಾರ್ಕಳದ ಹೆಬ್ರಿ ತಾಲೂಕಿನ ವರಂಗದವರು ಎನ್ನುವುದೇ ನಮಗೆಲ್ಲರಿಗೂ ಹೆಮ್ಮೆ. ಜಿನೈಕ್ಯರಾದ ಪೂಜ್ಯರ ಆತ್ಮಕ್ಕೆ ಸದ್ಗತಿ ಕೋರುತ್ತಾ ಅವರ ಅಗಲಿಕೆಯ ದುಖಃವನ್ನು ಸಹಿಸುವ ಶಕ್ತಿಯನ್ನು ಸಮಸ್ತ ಭಕ್ತರಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವರು ಶೋಕ ವ್ಯಕ್ತಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+