ಸಿದ್ದರಾಮಯ್ಯ v/s ಡಿಕೆಶಿ, ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಶುರು
Recommended Video

ಬೆಂಗಳೂರು, ಅಕ್ಟೋಬರ್ 06: ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಪ್ರಾರಂಭವಾಗಿದೆ. ರಾಜ್ಯ ರಾಜಕೀಯದ ಮೇಲೆ ಪ್ರಭುತ್ವ ಸಾಧಿಸಲು ಡಿ.ಕೆ.ಶಿವಕುಮಾರ್ ಅವರು ಗಟ್ಟಿಯಾಗಿಯೇ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಕೇಂದ್ರ ಸ್ಥಾನದಿಂದ ಕೆಳಗಿಳಿಸುವುದು ಅವರ ಉದ್ದೇಶ.
ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರದ್ದೇ ಮೇಲುಗೈ, ಆದರೆ ಅವರ ಪ್ರಭಾವ ತಗ್ಗಿಸಬೇಕೆಂದು ಡಿ.ಕೆ.ಶಿವಕುಮಾರ್ ಹಾಗೂ ಜಿ.ಪರಮೇಶ್ವರ್ ಬಳಗ ಬಹುವಾಗಿ ಯತ್ನಿಸುತ್ತಿದೆ. ಇದೊಂದು ರೀತಿ ಮೂಲ ಕಾಂಗ್ರೆಸ್ಸಿಗರು, ವಲಸಿಗರ ಪ್ರಭಾವ ತಗ್ಗಿಸಲು ಮಾಡತ್ತಿರುವ ಯತ್ನದಂತೆಯೂ ಕಾಣುತ್ತಿದೆ.
ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ನಡೆದ ಭೋಜನ ಕೂಟ ಸಿದ್ದರಾಮಯ್ಯ v/s ಡಿ.ಕೆ.ಶಿವಕುಮಾರ್ ರಾಜಕೀಯ ಕದನದ ಬಗ್ಗೆ ಬಹಿರಂಗ ಸುಳಿವು ನೀಡಿದೆ. ಉಪಹಾರ ಕೂಟದಿಂದ ಸಿದ್ದರಾಮಯ್ಯ ಅವರನ್ನು ದೂರವಿಟ್ಟ ಡಿ.ಕೆ.ಶಿವಕುಮಾರ್ ರಾಜ್ಯ ಕಾಂಗ್ರೆಸ್‌ನಲ್ಲಿ ತಮ್ಮ ಪ್ರಭಾವ ಮರಳಿಗಳಿಸಲೆಂದೇ ಆ ಕೂಟ ಆಯೋಜಿಸಿದ್ದರೆಂಬುದು ಸುಲಭದ ಊಹೆ.

ಡಿ.ಕೆ.ಶಿವಕುಮಾರ್‌ಗೆ ಸಾಲು-ಸಾಲು ಹಿನ್ನಡೆ
ಮೈತ್ರಿ ಸರ್ಕಾರದಲ್ಲಿ ತಮ್ಮ ಬೇಡಿಕೆಯ ಸಚಿವ ಸ್ಥಾನ ಗಳಿಸಲು ವಿಪಲರಾದ ಡಿ.ಕೆ.ಶಿವಕುಮಾರ್ ಆ ನಂತರವೂ ರಾಜಕೀಯವಾಗಿ ಸಾಲು-ಸಾಲು ಸೋಲು ಕಂಡರು. ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣದಲ್ಲಿ ಜಾರಕಿಹೊಳಿ ಸಹೋದರರ ಎದುರು ಡಿ.ಕೆ.ಶಿವಕುಮಾರ್ ಮಣಿಯಲೇಬೇಕಾಯಿತು. ಐಟಿ, ಇಡಿ ಕೇಸುಗಳಲ್ಲಿ ಸಿಕ್ಕಿ ನರಳುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯ ರಾಜಕೀಯದಲ್ಲಿ ಮೊದಲಿನ ಪ್ರಭಾವ ಇಲ್ಲ ಎಂಬುದು ಖಚಿತ.

ಡಿ.ಕೆ.ಶಿವಕುಮಾರ್ ಪ್ರಭಾವ ತಗ್ಗಲು ಸಿದ್ದರಾಮಯ್ಯ ಕಾರಣ?
ಹೈಕಮಾಂಡ್‌ನಲ್ಲಿಯೂ ಸಾಕಷ್ಟು ಪ್ರಭಾವ ಹೊಂದಿದ್ದ ಡಿ.ಕೆ.ಶಿವಕುಮಾರ್ ಅಲ್ಲಿಯೂ ಅಲ್ಪ ನಿರ್ಲಕ್ಷಕ್ಕೆ ಒಳಗಾಗಿದ್ದಾರೆ. ಮೈತ್ರಿ ಸರ್ಕಾರ ರಚನೆ ವೇಳೆ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದು ಹೈಕಮಾಂಡ್ ಮೇಲಿನ ಪ್ರಭಾವವನ್ನೂ ಅವರು ಕಳೆದುಕೊಂಡರು. ಆದರೆ ಇದೇ ವೇಳೆ ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದಲ್ಲಿ ಅದರಲ್ಲಿಯೂ ಕಾಂಗ್ರೆಸ್‌ನಲ್ಲಿ ತಮ್ಮ ಪ್ರಭಾವ ಹೆಚ್ಚಿಸಿಕೊಂಡು ಬಹು ಶಾಸಕರಿಗೆ ನಾಯಕರಾದರು. ಇದು ಡಿ.ಕೆ.ಶಿ ಪ್ರಭಾವ ತಗ್ಗಲು ಕಾರಣವಾಯಿತು. ಡಿ.ಕೆ.ಶಿಗೆ ಪ್ರಮುಖ ಸಚಿವ ಸ್ಥಾನ ತಪ್ಪಲು ಸಿದ್ದರಾಮಯ್ಯ ಅವರೇ ಕಾರಣ ಎಂಬ ಮಾತೂ ಇದೆ.

ಸಿದ್ದರಾಮಯ್ಯ ಅಣತಿಯಂತೆ ಸಂಪುಟ ವಿಸ್ತರಣೆ
ಇದೀಗ ಎರಡನೇ ಹಂತದ ಸಂಪುಟ ವಿಸ್ತರಣೆ ಸಮಯದಲ್ಲಿಯೂ ಸಹ ಸಿದ್ದರಾಮಯ್ಯ ಅವರು ಹೇಳಿದ ಶಾಸಕರಿಗೆ ಸಚಿವ ಸ್ಥಾನ ದೊರಕುತ್ತಿರುವುದು ಡಿ.ಕೆ.ಶಿವಕುಮಾರ್ ಹಾಗೂ ಜಿ.ಪರಮೇಶ್ವರ್ ಅಲ್ಲಿ ಅಸಹನೆ ಹುಟ್ಟಿಸಿದೆ. ಹಾಗಾಗಿ ಸಿದ್ದರಾಮಯ್ಯ ಹಾಗೂ ಅವರ ಬಣದ ಪ್ರಭಾವ ತಗ್ಗಿಸಲೆಂದು ಡಿ.ಕೆ.ಶಿವಕುಮಾರ್
ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ನಾನೇ : ಸಿದ್ದರಾಮಯ್ಯ

ದಿನೇಶ್ ಗುಂಡೂರಾವ್ ಮೇಲೂ ಅಸಮಾಧಾನ
ದಿನೇಶ್ ಗುಂಡೂರಾವ್ ಸಹ ಡಿ.ಕೆ.ಶಿವಕುಮಾರ್ ಅವರ ಅವಕೃಪೆಗೆ ಪಾತ್ರರಾಗಿದ್ದಾರೆ. ದಿನೇಶ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಕೊಟ್ಟಿರುವುದು ಡಿ.ಕೆ.ಶಿ ಅವರಿಗೆ ಜೀರ್ಣವಾದಂತಿಲ್ಲ. ಹೈಕಮಾಂಡ್ ಬಳಿ ಮತ್ತೊಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕಾಗಿ ಡಿ.ಕೆ.ಶಿವಕುಮಾರ್ ಅವರು ಬೇಡಿಕೆ ಸಹ ಇಟ್ಟಿದ್ದರು, ಒಕ್ಕಲಿಗ ಸಮುದಾಯದವರನ್ನು ಕೆಪಿಸಿಸಿ ಎರಡನೇ ಕಾರ್ಯಾಧ್ಯಕ್ಷ ಮಾಡಿ ದಿನೇಶ್ ಪ್ರಭಾವ ತಗ್ಗಿಸಬೇಕೆಂದ ಅವರ ತಂತ್ರ ಆದರೆ ಸಿದ್ದರಾಮಯ್ಯ ಅವರ ಮಧ್ಯಪ್ರವೇಶದಿಂದ ಫಲಿಸಲಿಲ್ಲ. ದಿನೇಶ್ ಗುಂಡೂರಾವ್ ಅವರು ಸಿದ್ದರಾಮಯ್ಯ ಬೆಂಬಲಿಗರಾಗಿದ್ದು ಕೆಪಿಸಿಸಿಯಲ್ಲೂ ಸಿದ್ದರಾಮಯ್ಯ ಅವರ ಅಣತಿಯೇ ನಡೆಯುತ್ತಿರುವುದು ಡಿ.ಕೆ.ಶಿವಕುಮಾರ್ ಅವರಿಗೆ ಪಥ್ಯವಾಗುತ್ತಿಲ್ಲ ಹಾಗಾಗಿ ದಿನೇಶ್ ಗುಂಡೂರಾವ್ ಅವರ ಮೇಲೂ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ. ಹಾಗಾಗಿ ಅವರಿಗೂ ಮೊನ್ನೆಯ ಭೋಜನ ಕೂಟಕ್ಕೆ ಆಹ್ವಾನವಿರಲಿಲ್ಲ.

ಪ್ರತಿತಂತ್ರ ಹೆಣೆಯುತ್ತಿದ್ದಾರೆ ಸಿದ್ದರಾಮಯ್ಯ
ಡಿ.ಕೆ.ಶಿವಕುಮಾರ್ ಅವರ ತಂತ್ರಕ್ಕೆ ಈಗಾಗಲೇ ಪ್ರತಿ ತಂತ್ರಗಳನ್ನು ಸಿದ್ದರಾಮಯ್ಯ ಹೆಣೆಯುತ್ತಿದ್ದಾರೆ. ಎರಡು ದಿನಗಳ ಕಾಲ ಆರೋಗ್ಯ ಸಮಸ್ಯೆಯಿಂದ ವಿಶ್ರಾಂತಿ ಪಡೆದಿದ್ದ ಸಿದ್ದರಾಮಯ್ಯ ನಿನ್ನೆಯಿಂದ ಮತ್ತೆ ರಾಜಕೀಯ ಪ್ರಾರಂಭಿಸಿದ್ದಾರೆ. ನಿನ್ನೆಯಷ್ಟೆ ಅವರು ಶಾಸಕರಾದ ಎಂಟಿಬಿ ನಾಗರಾಜು, ತುಕಾರಾಂ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಆಪ್ತ ಎಚ್.ಸಿ.ಮಹದೇವಪ್ಪ ಅವರುಗಳನ್ನು ಭೇಟಿ ಆಗಿದ್ದಾರೆ. ಅಲ್ಲದೆ ಜಮೀರ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣೆ ಮೇಲೆ ಭಾರಿ ಪರಿಣಾಮ
ಲೋಕಸಭೆ ಹಾಗೂ ಎರಡು ಉಪ ಚುನಾವಣೆಗಳು ಸಮೀಪದಲ್ಲಿರುವಾಗ ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರಾರಂಭವಾಗಿರುವ ಈ ಬಣ ಕಿತ್ತಾಟ ಲೋಕಸಭೆ ಚುನಾವಣೆ ಮೇಲೆ ಭಾರಿ ಪ್ರಭಾವ ಬೀರುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅಂತಹಾ ರಾಜಕೀಯ ಮದಗಜಗಳ ನಡುವಿನ ಕಿತ್ತಾಟ ಕಾಂಗ್ರೆಸ್ ಎಂಬ ಕದಳಿಯನ್ನು ಹಾಳುಮಾಡುವುದು ಖಂಡಿತ. ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಮುಖಂಡರಲ್ಲಿ ಇದ್ದ ಒಗ್ಗಟ್ಟು ಈಗ ಕಾಣೆ ಆಗಿರುವುದು ಸ್ಪಷ್ಟ.












Click it and Unblock the Notifications