ಕರ್ನಾಟಕದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆಗಳು!

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಶುಕ್ರವಾರ ಡಿ.6ರಂದು ಅಂತ್ಯಗೊಳ್ಳಲಿದೆ. ನಂತರ ರಾಜಕೀಯ ಪಕ್ಷಗಳು ಮೈಚಳಿ ಬಿಟ್ಟು ಲೋಕಸಭೆ ಚುನಾವಣೆಯಲ್ಲಿ ಸಿದ್ಧತೆಯಲ್ಲಿ ತೊಡಗಲಿವೆ. ಮುಂದಿನ ವಾರದಿಂದಲೇ ವಿವಿಧ ಪಕ್ಷಗಳಲ್ಲಿ ಚಟುವಟಿಕೆಗಳು ಆರಂಭವಾಗುವ ಸೂಚನೆ ಈಗಾಗಲೇ ದೊರಕಿದೆ. ಬಿಜೆಪಿ ತನ್ನ ಚಟುವಟಿಕೆಯನ್ನು ಆರಂಭಿಸಿದ್ದು, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಮರಳಿ ಕರೆತರಲು ವೇದಿಕೆ ಸಜ್ಜುಗೊಳಿಸಿಕೊಳ್ಳುತ್ತಿದೆ.
ಆಡಳಿತರೂಢ ಕಾಂಗ್ರೆಸ್ ಸಹ ಡಿಸೆಂಬರ್ ಅಂತ್ಯದೊಳಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ನಿರ್ಧರಿಸಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಡಿ.14ರಂದು ರಾಜ್ಯಕ್ಕೆ ಆಗಮಿಸಲಿದ್ದು ಮೂರು ದಿನಗಳ ಕಾಲ ರಾಜ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಿಗಮ ಮಂಡಳಿಗಳ ನೇಮಕ, ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಮುಂತಾದ ವಿಚಾರಗಳ ಕುರಿತು ಸಭೆ ನಡೆಸಲಿದ್ದಾರೆ. (ಬುಧವಾರ ಸದನದಲ್ಲಿ ಏನಾಯ್ತು?)
ಕೆಜೆಪಿಯಿಂದ ಆರಂಭ : ಚಳಿಗಾಲದ ಅಧಿವೇಶನ ಮುಗಿದ ಬಳಿಕ ರಾಜಕೀಯ ವಿದ್ಯಮಾನಗಳನ್ನು ಕೆಜೆಪಿ ಆರಂಭಿಸಲಿದೆ. ಡಿ.9ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿ.ಎಸ್.ಯಡಿಯೂರಪ್ಪ ಪಕ್ಷದ ನಾಯಕರ ಸಭೆ ಕರೆದಿದ್ದಾರೆ. ಅಂದಿನ ಸಭೆಯಲ್ಲಿ ಯಡಿಯೂರಪ್ಪ ಬಿಜೆಪಿಗೆ ಮರಳುವ ಕುರಿತು ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. (ಯಡಿಯೂರಪ್ಪಗೆ ಜೇಟ್ಲಿ ಬುಲಾವ್)
ಬಿಜೆಪಿಯಲ್ಲಿ ಮೋದಿ ಜಪ : ಡಿಸೆಂಬರ್ ಕೊನೆಯ ವಾರ ಅಥವ ಜನವರಿ ಮೊದಲ ವಾರದಲ್ಲಿ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಮಾವೇಶಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಲು ಕರ್ನಾಟಕ ಬಿಜೆಪಿ ಚಿಂತನೆ ನಡೆಸಿದೆ. ಜೊತೆಗೆ ಬಿ.ಎಸ್.ಯಡಿಯುರಪ್ಪ ಪಕ್ಷಕ್ಕೆ ಮರಳುವ ಸಾಧ್ಯತೆಯೂ ಇದೆ. ಆದ್ದರಿಂದ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯಲಿವೆ. (ಇನ್ನೂ 1 ಡಜನ್ ಮೋದಿ ಸಮಾವೇಶ)
ಜೆಡಿಎಸ್ ಸಮಾವೇಶ : ನವೆಂಬರ್ ಮೊದಲ ವಾರದಲ್ಲಿ ರಾಯಚೂರಿನಲ್ಲಿ ಸಮಾವೇಶ ಏರ್ಪಡಿಸಿ, ಲೋಕಸಭೆ ಚುನಾವಣೆಯ ಸಿದ್ಧತೆ ಆರಂಭಿಸಲು ಜೆಡಿಎಸ್ ನಿರ್ಧರಿಸಿತ್ತು. ಆದರೆ, ಅಧಿವೇಶನದ ಹಿನ್ನಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲಾ ಪ್ರವಾಸ ಕೈಗೊಂಡಿದ್ದರಿಂದ ಅದು ವಿಳಂಬವಾಯಿತು. ಸದ್ಯ ಅಧಿವೇಶನ ಮುಗಿದ ಬಳಿಕ ಉತ್ತರ ಕರ್ನಾಟಕದಲ್ಲಿ ಸಮಾವೇಶ ನಡೆಸುವ ಮೂಲಕ ಚಟುವಟಿಕೆ ಆರಂಭಿಸಲಿದೆ.
ಡಿ.6 ರಂದು ಬೆಳಗಾವಿ ಅಧಿವೇಶನ ಅಂತ್ಯಗೊಳ್ಳಲಿದೆ. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶವೂ ಡಿ.8ರಂದು ಪ್ರಕಟವಾಗಲಿದೆ. ಆದ್ದರಿಂದ ಎಲ್ಲಾ ಪಕ್ಷಗಳು ಲೋಕಸಭೆ ಚುನಾವಣೆಗಾಗಿ ತಯಾರಿ ಆರಂಭಿಸಲಿದ್ದು, ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಲಿದೆ.












Click it and Unblock the Notifications