'ಸೋತವರಿಗೇಕೆ ಮಂತ್ರಿಸ್ಥಾನ' ಚರ್ಚೆಯ ಹಿಂದೆ ಎಂಟಿಬಿ ಹಣಿಯುವ ತಂತ್ರ?
ಬೆಂಗಳೂರು, ಜ. 27: ನಾಗರಹೊಳೆ ಬಳಿಯ ರೆಸಾರ್ಟ್‌ನಲ್ಲಿ ಬೆಳಗ್ಗೆ ಜೊತೆಗೆ ಉಪಹಾರ ಮಾಡಿದ ಇಬ್ಬರೂ ಧುರೀಣರು ಒಂದೇ ಕಾರಿನಲ್ಲಿ ಸುತ್ತೂರು ಮಠಕ್ಕೆ ತೆರಳುತ್ತಾರೆ. ಆಮೇಲೆ ಪರಸ್ಪರ ವಿರುದ್ಧದ ಹೇಳಿಕೆಗಳನ್ನು ಕೊಡುತ್ತಾರೆ. ಇದೊಂದು ರಾಜಕೀಯ ತಂತ್ರಗಾರಿಕೆ ಅಲ್ಲದೇ ಮತ್ತೇನೂ ಅಲ್ಲ ಎಂದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ. ಈ ಚರ್ಚೆಗೆ ಗ್ರಾಸವಾಗಿರುವುದು ಮಾಜಿ ಸಚಿವ ಎಚ್. ವಿಶ್ವನಾಥ್ ಹಾಗೂ ಶಾಸಕ ಎಸ್.ಟಿ. ಸೋಮಶೇಖರ್ ಅವರ ನಡೆ.
ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಇಬ್ಬರೂ ನಾಯಕರು ಪರಸ್ಪರ ವಿರೋಧಿಸುವ ಹೇಳಿಕೆ ಕೊಟ್ಟಿದ್ದಾರೆ. ಬೇಡ ಎಂದರೂ, ಚುನಾವಣೆಗೆ ನಿಂತು ಸೋತವರಿಗೆ ಮಂತ್ರ ಪದವಿ ಯಾಕೆ ಕೊಡಬೇಕು ಎಂದು ಶಾಸಕ ಎಸ್.ಟಿ. ಸೋಮಶೇಖರ್ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಕುಸ್ತಿ ಪಂದ್ಯಾವಳಿಗಳಿಗೆ ಚಾಲನೆ ಕೊಟ್ಟ ಬಳಿಕ ಹೇಳಿಕೆ ಕೊಟ್ಟಿದ್ದಾರೆ. ಅದಾದ ಬಳಿಕ ಸಿಎಂ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದ ಎಲ್ಲ 17 ಜನರನ್ನು ಮಂತ್ರಿ ಮಾಡುವ ಭರವಸೆಯನ್ನು ಮೊದಲೇ ಕೊಟ್ಟಿದ್ದಾರೆಂದು ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿಕೆ ಕೊಡುತ್ತಾರೆ.
ಈ ಚರ್ಚೆಯ ಹಿಂದೆ ಸೋತಿರುವ ಯಾರಿಗೂ ಮಂತ್ರಿ ಪದವಿ ತಪ್ಪಿಸುವ ರಾಜಕೀಯ ತಂತ್ರಗಾರಿಕೆ ಇಲ್ಲ ಎನ್ನಲೂ ಆಗುವುದಿಲ್ಲ.

ರೆಸಾರ್ಟ್‌ನಲ್ಲಿ ಎಸ್‌ಟಿಎಸ್ ಭೇಟಿ ಮಾಡಿದ್ದ ಹಳ್ಳಿಹಕ್ಕಿ
ಸುತ್ತೂರು ಮಠದಲ್ಲಿನ ಕಾರ್ಯಕ್ರಮಕ್ಕೆ ತೆರಳಲು ನಾಗರಹೊಳೆ ಬಳಿಯ ರೆಸಾರ್ಟ್ ಒಂದರಲ್ಲಿ ಶಾಸಕ ಎಸ್.ಟಿ. ಸೋಮಶೇಖರ್ ಶುಕ್ರವಾರ ವಾಸ್ತವ್ಯ ಮಾಡಿರುತ್ತಾರೆ. ಅದೇ ರೆಸಾರ್ಟ್‌ಗೆ ಶನಿವಾರ ಬೆಳಗ್ಗೆ ಹೋಗುವ ಮಾಜಿ ಸಚಿವ ಎಚ್. ವಿಶ್ವನಾಥ್ ಅವರು ಸೋಮಶೇಖರ್ ಅವರನ್ನು ಭೇಟಿ ಮಾಡಿದ ಸುದೀರ್ಘವಾದ ಚರ್ಚೆಯನ್ನು ಮಾಡಿದ್ದಾರೆ ಎಂಬ ಮಾಹಿತಿಯಿದೆ.
ಬಳಿಕ ಇಬ್ಬರೂ ಧುರೀಣರು ಒಂದೇ ಕಾರಿನಲ್ಲಿ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ತೆರಳುತ್ತಾರೆ. ಆದರೆ ಅಲ್ಲಿಗೆ ಹೋದ ಬಳಿಕ ಎಸ್‌ಟಿಎಸ್ ಹಾಗೂ ಎಚ್. ವಿಶ್ವನಾಥ್ ಕೊಟ್ಟಿರುವ ಹೇಳಿಕೆಗಳು ಮಾತ್ರ ಒಂದಕ್ಕೊಂಡು ವಿರುದ್ಧವಾಗಿವೆ.

ಮೊದಲೇ ಮಾತನಾಡಿಕೊಂಡಂತೆ ವಿರೋಧಿ ಹೇಳಿಕೆ ಕೊಟ್ಟರಾ ಎಸ್‌ಟಿಎಸ್, ವಿಶ್ವನಾಥ್?
ಇಬ್ಬರೂ ನಾಯಕರು ಜೊತೆ ಜೊತೆಯಾಗಿಯೇ ಸುತ್ತೂರು ಮಠಕ್ಕೆ ಹೋಗಿ ಅಲ್ಲಿ ಪರಸ್ಪರ ವಿರುದ್ಧ ಹೇಳಿಕೆ ಕೊಟ್ಟಿರುವುದರ ಹಿಂದೆ ರಾಜಕೀಯ ತಂತ್ರಗಾರಿಕೆಯೂ ಇರಬಹುದು ಎನ್ನಲಾಗುತ್ತಿದೆ. ಯಾಕೆಂದರೆ ಉಪ ಚುನಾವಣೆಯ ಫಲಿತಾಂಶ ಬಂದು ಎರಡು ತಿಂಗಳು ಆಗುತ್ತಿವೆ. ಆದರೂ ಬಿಜೆಪಿ ಹೈಕಮಾಂಡ್ ಸಂಪುಟ ವಿಸ್ತರಣೆ ಬಗ್ಗೆ ಮಾತನ್ನೇ ಆಡುತ್ತಿಲ್ಲ. ದೆಹಲಿಗೆ ಬರಲು ಸಿಎಂ ಯಡಿಯೂರಪ್ಪ ಅವರಿಗೂ ಕಾಲಾವಕಾಶ ಕೊಟ್ಟಿಲ್ಲ.
ಇಂತಹ ಸಂದರ್ಭದಲ್ಲಿ ಚರ್ಚೆ ಹುಟ್ಟುಹಾಕಲು ವಿರೋಧಿ ಹೇಳಿಕೆ ಕೊಟ್ಟಿರುವ ಸಾಧ್ಯತೆಗಳನ್ನು ಅಲ್ಲಗಳೆಯುವುವಂತಿಲ್ಲ. ಈ ಮೊದಲು ಶಾಸಕ ಎಸ್.ಟಿ. ಸೋಮಶೇಖರ್ ನಾವೆಲ್ಲ 17 ಜನರೂ ಒಗ್ಗಟ್ಟಾಗಿದ್ದೇವೆ ಎಂದೇ ಪ್ರತಿಪಾದಿಸುತ್ತಿದ್ದರು. ಆದರೆ ದಿಢೀರ್ ಸೋತವರಿಗೆ ಯಾಕೆ ಮಂತ್ರಿ ಪದವಿ ಎಂದಿರುವುದರ ಹಿಂದೆ ಬೇರೆ ಯಾರಿಗೊ ಮಂತ್ರಿಸ್ಥಾನ ತಪ್ಪಿಸುವ ಆಲೋಚನೆಯೂ ಇರಬಹುದು ಎನ್ನಲಾಗುತ್ತಿದೆ.

ಎಂಟಿಬಿ ಅವರಿಗೆ ಮಂತ್ರಿ ಪದವಿ ತಪ್ಪಿಸಲು ಈ ಚರ್ಚೆಗೆ ಶುರುವಾಯಿತಾ?
ಕಳೆದ ಉಪಚುನಾವಣೆಯಲ್ಲಿ ಮತ್ತೊಬ್ಬ ಪ್ರಭಾವಿ ನಾಯಕ ಎಂ.ಟಿ.ಬಿ. ನಾಗರಾಜ್ ಅವರೂ ಸೋತಿದ್ದಾರೆ. ಮಂತ್ರಿಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಉಪಚುನಾವಣೆಯನ್ನು ಎಂಟಿಬಿ ನಾಗರಾಜ್ ಎದುರಿಸಿದ್ದರು. ಅವರಿಗೆ ಸೂಕ್ತಸ್ಥಾನ ಮಾನ ಕೊಡಲು ಬಿಜೆಪಿ ತೀರ್ಮಾನಿಸಿದೆ ಎಂಬ ಮಾಹಿತಿಯಿದೆ. ಹೀಗಾಗಿ ಅವರನ್ನು ಕೈಬಿಡಲು ಸಿಎಂ ಯಡಿಯೂರಪ್ಪ ಸಿದ್ಧರಿಲ್ಲ. ಇದೇ ವಿಚಾರಕ್ಕೆ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ.
ಎಂ.ಟಿ.ಬಿ. ನಾಗರಾಜ್ ಅವರಿಗೆ ಮಂತ್ರಿಸ್ಥಾನ ಸಿಗದಿದ್ದರೆ ಅದರ ಲಾಭವಾಗುವುದು ಬೆಂಗಳೂರಿನ ಶಾಸಕರಿಗೆ. ಇದೇ ಹಿನ್ನೆಲೆಯಲ್ಲಿ ಸೋತವರಿಗೇಕೆ ಮಂತ್ರಿಸ್ಥಾನ ಎಂಬ ಚರ್ಚೆ ಆರಂಭವಾಗಿದೆ ಎಂದೂ ಮೂಲಗಳು ಹೇಳಿವೆ.

ಜ. 29 ರಂದು ಸಂಪುಟ ವಿಸ್ತರಣೆ ಆಗುತ್ತಾ?
ಇದೇ ಜನವರಿ 29 ರಂದು ಸಂಪುಟ ವಿಸ್ತರಣೆ ಮಾಡುವಂತೆ ಹೈಕಮಾಂಡ್ ಸೂಚನೆ ಕೊಟ್ಟಿದೆ ಎನ್ನಲಾಗಿದೆ. ಜನವರಿ 29ರಂದು ವಸಂತ ಪಂಚಮಿ ವಿಶೇಷ ದಿನ. ಅಂದು ಬೆಳಗ್ಗೆ 10.45ರ ಬಳಿಕ ರಾಜಯೋಗ ಆರಂಭವಾಗುತ್ತದೆ. ಈ ವೇಳೆ ಸಂಪುಟ ವಿಸ್ತರಣೆ ಮಾಡುವಂತೆ ಜ್ಯೋತಿಷಿಗಳು ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ. ಬಿಜೆಪಿ ಹೈಕಮಾಂಡ್ ಕೂಡ ಸಂಪುಟ ವಿಸ್ತರಣೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂದೇಶ ರವಾನಿಸಿದೆ ಎಂಬ ಮಾಹಿತಿ ಇದೆ. ಆದರೆ ಈ ಬಗ್ಗೆ ಚರ್ಚಿಸಲು ಯಡಿಯೂರಪ್ಪ ಅವರಿಗೆ ಸಮಯಾವಕಾಶವನ್ನು ಹೈಕಮಾಂಡ್ ಕೊಟ್ಟಿಲ್ಲ.
ಇದೇ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿಯೆ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.












Click it and Unblock the Notifications