
ಕರ್ನಾಟಕದಲ್ಲಿ ಪ್ರಧಾನಿ ಮೋದಿ ಪ್ರವಾಸ
ಬೆಂಗಳೂರು, ಸೆ. 24 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಪ್ರವಾಸಕ್ಕಾಗಿ ಕರ್ನಾಟಕಕ್ಕೆ ಮಂಗಳವಾರ ಸಂಜೆ ಆಗಮಿಸಿದ್ದಾರೆ. ಬುಧವಾರ ಬೆಳಗ್ಗೆ ಇಸ್ರೋಗೆ ಭೇಟಿ ನೀಡಿದ್ದ ಮೋದಿ ಮಂಗಳಯಾನದ ಐತಿಹಾಸಿಕ ಕ್ಷಣದಲ್ಲಿ ಪಾಲ್ಗೊಂಡಿದ್ದರು. ಇಸ್ರೋದಿಂದ ತುಮಕೂರಿಗೆ ತೆರಳಿರುವ ಮೋದಿ, ಫುಡ್ ಪಾರ್ಕ್ ಉದ್ಘಾಟನೆ ಮಾಡಲಿದ್ದಾರೆ. ಮೋದಿ ರಾಜ್ಯ ಪ್ರವಾಸದ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ.
ಮೋದಿ ಭಾಷಣದ ಮುಖ್ಯಾಂಶಗಳು
* ಪಿಪಿಪಿ ಮಾಡೆಲ್‌ನಿಂದ ದೇಶದ ಅಭಿವೃದ್ಧಿಯಾಗುತ್ತದೆ. ಇಂಡಿಯಾ ಫುಡ್‌ಪಾರ್ಕ್ ಅನ್ನು ರೈತರಿಗೆ ಅರ್ಪಿಸುತ್ತೇನೆ ಎಂದು ಹೇಳಿದ ಮೋದಿ, ಇದು ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಮಾಡುತ್ತದೆ ಎಂದು ಭರವಸೆ ಹೊಂದಿದ್ದೇನೆ ಎಂದು ಹೇಳಿದರು. [ತುಮಕೂರು ಫುಡ್ ಪಾರ್ಕ್ ಮಾಹಿತಿ ಇಲ್ಲಿದೆ ನೋಡಿ]
* ಟೊಮ್ಯಾಟೋ ಮಾರಿದರೆ ಹಣ ಸಿಗಲ್ಲ ಟೊಮ್ಯಾಟೋ ಸಾಸ್ ಮಾಡಿದರೆ ಹಣ ಸಿಗುತ್ತದೆ, ಅದರ ಬಾಟಲ್ ನಟಿಯೊಬ್ಬಳು ಕೈಯಲ್ಲಿ ಹಿಡಿದರೆ ಅದರೆ ದರ ಇನ್ನಷ್ಟು ಹೆಚ್ಚಾಗುತ್ತದೆ.
When the States become stronger the Nation will become stronger, when States progress the Nation will progress: PM @narendramodi
— PMO India (@PMOIndia) September 24, 2014
* ರೆಡಿ ಟು ಈಟ್ ಫುಡ್ ಅನ್ನು ನಾವು ತಯಾರಿಸಿ ವಿಶ್ವದ ಮುಂದೆ ಇಟ್ಟರೆ ನಮ್ಮ ರೈತರಿಗೂ ಸಹಾಯಕವಾಗುತ್ತದೆ ಎಂದು ಹೇಳಿದ ಮೋದಿ, ನಮ್ಮ ದೇಶದ ಸಾಂಬಾರ ಪದಾರ್ಥಗಳು ವಿಶ್ವದಲ್ಲೇ ಪ್ರಸಿದ್ಧಿ ಪಡೆದಿವೆ. ಆದರೆ, ಅವುಗಳನ್ನು ಬೆಳೆಯುವ ರೈತರಿಗೆ ಸರಿಯಾದ ಸೌಕರ್ಯ ದೊರೆಯುತ್ತಿಲ್ಲ ಎಂದರು.
* ಪೆಪ್ಸಿ, ಕೋಲಾ ಮುಂತಾದವುಗಳನ್ನು ಸೇವಿಸುತ್ತೇವೆ. ಇದರಿಂದ ಕೋಟಿ-ಕೋಟಿ ರೂ. ವ್ಯವಹಾರ ನಡೆಯುತ್ತದೆ. ಆದರೆ, ಇದರಲ್ಲಿ ಶೇ 5ರಷ್ಟು ನೈಸರ್ಗಿಕ ಪಾನೀಯಗಳನ್ನು ಬೆರೆಸಲು ಸಾಧ್ಯವಾದರೆ, ರೈತರಿಗೆ ಹಣ್ಣು ಮತ್ತು ತರಕಾರಿಗಳಿಗೆ ಉತ್ತಮ ಬೆಲೆ ದೊರೆಯುತ್ತದೆ ಎಂದು ಮೋದಿ ಹೇಳಿದರು.
* ಹಿಂದಿನಿಂದಲೂ ಕೃಷಿ ಆಧುನೀಕರಣ ಹಂತ-ಹಂತವಾಗಿ ನಡೆಯುತ್ತಿದೆ. ಹಿಂದೆ ಪೂರ್ವಜನರು ಆಹಾರಗಳನ್ನು ತಮ್ಮ ವೈಯಕ್ತಿಕ ಉಪಯೋಗಕ್ಕಾಗಿ ಸಂರಕ್ಷಣೆ ಮಾಡುತ್ತಿದ್ದರು. ಇದನ್ನು ದೊಡ್ಡ ಹಂತದಲ್ಲಿ ಫುಡ್ ಪಾರ್ಕ್ ಮಾಡುತ್ತದೆ ಎಂದರು.
PM and CM may belong to any party, the nation is one. We all have to walk shoulder to shoulder: PM @narendramodi
— PMO India (@PMOIndia) September 24, 2014
* ದೇಶವನ್ನು ಅಭಿವೃದ್ಧಿಪಡಿಸಬೇಕಾದರೆ, ಗ್ರಾಮಗಳಲ್ಲಿರುವ ರೈತರ ಅಭಿವೃದ್ಧಿಯಾಗಬೇಕು. ಕೃಷಿ ಕ್ಷೇತ್ರವನ್ನು ಆಧುನೀಕರಣಗೊಳಿಸಬೇಕು ಎಂದು ಮೋದಿ ಹೇಳಿದರು. ನಮ್ಮ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕು. ಕೃಷಿಯಲ್ಲಿ ನಮ್ಮ ಬಲವರ್ಧನೆಯಾಗಬೇಕು ಎಂದು ಮೋದಿ ಹೇಳಿದರು.
* ನನಗೆ ಕನ್ನಡ ಅರ್ಥವಾಗೋಲ್ಲ. ಆದರೆ, ಮುಖ್ಯಮಂತ್ರಿಗಳ ಭಾಷಣವನ್ನು ಅರ್ಥಮಾಡಿಕೊಂಡಿದ್ದೇನೆ. ರಾಜ್ಯದ ಅಗತ್ಯತೆಗಳು ಏನು ಎಂಬುದನ್ನು ಕೇಂದ್ರ ಅರ್ಥಮಾಡಿಕೊಂಡಿದೆ. ದೇಶದ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ನರೇಂದ್ರ ಮೋದಿ ಹೇಳಿದರು.
ಸಮಯ 12 ಗಂಟೆ : ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸಿದ್ದಾರೆ.
ಸಮಯ 11.50 : ರಾಜ್ಯದಲ್ಲಿ ಬರಗಾಲವಿದೆ, ಮಳೆ ಹೆಚ್ಚಾಗಿ ರೈತರು ಸಂಕಷ್ಟ ಅನುಭವಿಸುತ್ತಾರೆ. ಕೇಂದ್ರ ಸರ್ಕಾರ ಹೆಚ್ಚು ಆರ್ಥಿಕ ಸಹಾಯ ಮಾಡಬೇಕು ಎಂದು ಸಿಎಂ ಮನವಿ ಮಾಡಿದರು.
ಸಮಯ 11.40 : ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಷಣ ಆರಂಭಿಸಿದ್ದಾರೆ. ಈ ಫುಡ್‌ಪಾರ್ಕ್‌ನಿಂದ ರೈತರಿಗೆ ಉಪಯೋಗವಾಗಲಿದೆ ಎಂದು ಸಿಎಂ ಹೇಳಿದರು.
ಸಮಯ : 11.30 : ಕೇಂದ್ರ ಆಹಾರ ಮತ್ತು ಸಂಸ್ಕರಣೆ ಖಾತೆ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಫುಡ್‌ಪಾರ್ಕ್ ಉದ್ಘಾಟನೆಗೆ ಆಗಮಿಸಿದ್ದು, ಪ್ರಾಸ್ತವಿಕ ಭಾಷಣ ಮಾಡುತ್ತಿದ್ದಾರೆ.
ಸಮಯ 11.20 : ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ, ರಾಜ್ಯಪಾಲ ವಜುಭಾಯಿ ವಾಲಾ, ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಅನಂತ ಕುಮಾರ್, ಡಿವಿ ಸದಾನಂದ ಗೌಡ, ಜಿಎಂ ಸಿದ್ದೇಶ್ವರ್ ಮುಂತಾದವರು ಮೋದಿ ಅವರ ಜೊತೆಗಿದ್ದಾರೆ.
ಸಮಯ 11 ಗಂಟೆ : ಫುಡ್‌ಪಾರ್ಕ್ ಉದ್ಘಾಟನೆಗಾಗಿ ಮೋದಿ ಆಗಮಿಸಿದ್ದಾರೆ.
ಸಮಯ 10.50 ಗಂಟೆ : ಫುಡ್‌ಪಾರ್ಕ್ ಉದ್ಘಾಟನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತುಮಕೂರಿನ ವಸಂತನರಸಾಪುರಕ್ಕೆ ಆಗಮಿಸಿದ್ದಾರೆ.
ಸಮಯ 10.40 : ಜೀವನ ನಡೆಸುವ ಸರಿ ದಾರಿ ತೋರಿಸಿದ, ಜೀವನದ ಉದ್ದೇಶ ತಿಳಿಸಿದ ಇಂತಹ ಸಂತರು ಸಮಾಜಕ್ಕೆ ಬೇಕು ಎಂದು ಹೇಳಿದರು.

ಸಮಯ 10.33 : ಸಿದ್ಧಗಂಗಾ ಮಠದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ ದೇಶದ ಸ್ವಚ್ಛತೆಗಾಗಿ ವಾರಕ್ಕೆ ಎರಡು ಗಂಟೆ ಮೀಸಲಾಗಿಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಯ 10.29 : ನಾನು ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿಗೆ ಬರಲು ಸಾಧ್ಯವಾಗಲಿಲ್ಲ, ಪ್ರಧಾನಿಯಾಗಿಯೇ ಆಗಮಿಸಬೇಕು ಎಂಬುದು ಶ್ರೀಗಳ ಇಚ್ಛೆಯಾಗಿತ್ತನೋ ಎಂದು ಮೋದಿ ಹೇಳಿದರು.
ಸಮಯ 10.25 : ಇವತ್ತು ನನ್ನ ಪಾಲಿಗೆ ಮಹತ್ವದ ದಿನ ಎಂದು ಮಾತು ಆರಂಭಿಸಿದ ಮೋದಿ, ಒಂದು ಕಡೆ ಮಂಗಳಯಾನ ಯಶಸ್ವಿಯಾಗಿದೆ, ಮತ್ತೊಂದು ಕಡೆ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದು ಹೇಳಿದರು.
ಸಮಯ 10.23 : ಸಿದ್ಧಗಂಗಾ ಮಠದ ಆವರಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮೋದಿ ಮಾತನಾಡುತ್ತಿದ್ದಾರೆ.
ಸಮಯ 10.15 : ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳು ಪ್ರಧಾನಿ ಮೋದಿ ಅವರಿಗೆ ಕಾಶ್ಮೀರ ಪ್ರವಾಹ ಸಂತ್ರಸ್ತರಿಗಾಗಿ 25 ಲಕ್ಷದ ಚೆಕ್ ಅನ್ನು ಹಸ್ತಾಂತರ ಮಾಡಿದ್ದಾರೆ.
ಸಮಯ 10.10 : ಸಿದ್ಧಗಂಗಾ ಶ್ರೀಗಳ ಪಾದ ಮುಟ್ಟಿ ನಮಸ್ಕಾರ ಮಾಡಿದ ಮೋದಿ, ಮೋದಿಗೆ ಎಳನೀರು ಮತ್ತು ಡ್ರೈ ಫ್ರೂಟ್ಸ್ ನೀಡಿದ ಶ್ರೀಗಳು
ಸಮಯ 10.08 : ಪ್ರಧಾನಿ ನರೇಂದ್ರ ಮೋದಿ ಸಿದ್ಧಗಂಗಾ ಮಠಕ್ಕೆ ಆಗಮಿಸಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಮೋದಿಗೆ ಸ್ವಾಗತ ಕೋರಿದರು. ಮಠದ ಆವರಣದಲ್ಲಿ ದೊಡ್ಡ ಪೆಂಡಾಲ್ ಹಾಕಲಾಗಿದ್ದು, ನೂರಾರು ಮಕ್ಕಳು ಅಲ್ಲಿ ಮೋದಿಗಾಗಿ ಕಾದು ಕುಳಿತಿದ್ದಾರೆ.
ಸಮಯ 10 ಗಂಟೆ : ಹೆಲಿಪ್ಯಾಡ್‌ನಲ್ಲಿದ್ದ ಕಾರ್ಯಕರ್ತರತ್ತ ಮೋದಿ ಕೈಬೀಸಿದರು, ಈ ಸಂದರ್ಭದಲ್ಲಿ ಮೋದಿಗೆ ಕಾರ್ಯಕರ್ತರು ಜಯಘೋಷ ಕೂಗಿದರು.
ಸಮಯ 9.56 : ತುಮಕೂರು ವಿವಿಯ ಹೆಲಿಪ್ಯಾಡ್‌ಗೆ ಪ್ರಧಾನಿ ನರೇಂದ್ರ ಮೋದಿ ಆಗಮನ, ಪಾಲಿಕೆ ಮೇಯರ್ ಗೀತಾ ರುದ್ರೇಶ್ ಅವರಿಂದ ಮೋದಿಗೆ ಸ್ವಾಗತ
ಹಿಂದಿನ ಸುದ್ದಿ : ಮಂಗಳವಾರ ಸಂಜೆ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ಬಿಜೆಪಿ ಘಟಕದ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೋದಿ ನಂತರ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದರು. [ಕರ್ನಾಟಕದ ಜನರಿಗೆ ಅಭಿನಂದನೆ ಸಲ್ಲಿಸಿದ ಮೋದಿ]
ತುಮಕೂರು ನಗರದ ಹೊರವಲಯದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಫುಡ್ ಪಾರ್ಕ್‌ಅನ್ನು ಬುಧವಾರ ಬೆಳಗ್ಗೆ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಮತ್ತು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. [ಇಸ್ರೋದಲ್ಲಿ ಮೋದಿ ಹೇಳಿದ್ದೇನು?]