ಬಿಜೆಪಿ ಮತ್ತು ಜೆಡಿಎಸ್ ನಡುವೆ 'ಘಟಬಂಧನ'ವಿಲ್ಲ: ದೇವೇಗೌಡ
ಬೆಂಗಳೂರು, ಮೇ 2: ಮಂಗಳವಾರ ಚಾಮರಾಜನಗರದ ಸಂತೇಮರಳ್ಳಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಹಾಡಿಹೊಗಳಿದ್ದರು. ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಮುನ್ಸೂಚನೆ ಪ್ರಧಾನಿ ಮೋದಿಯವರಿಗೆ ಸಿಕ್ಕಿದೆ. ಈ ಹಿನ್ನಲೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಗುರಿಯಾಗಿರಿಸಿಕೊಂಡು ಪ್ರಧಾನಿ ಈ ರೀತಿ ಹೊಗಳಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಕುರಿತು ಇಂದು ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿರುವ ಜೆಡಿಎಸ್ ವರಿಷ್ಠ ದೇವೇಗೌಡರು, "ಕನ್ನಡಿಗರೊಬ್ಬರು ಪ್ರಧಾನಿಯಾಗಿದ್ದರು. ಸಿದ್ದರಾಮಯ್ಯ ಕನ್ನಡಿಗರ ಹೆಮ್ಮೆಯನ್ನು ಕೆಡವಲು ಪ್ರಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕನ್ನಡಿಗರಿಗೆ ಗೌರವ ನೀಡುವುದೇ ಹೀಗೆ ಎಂದು ಅವರು (ಪ್ರಧಾನಿ ಮೋದಿ) ಹೇಳಿದ್ದರು. ಇದರರ್ಥ 'ಘಟಬಂಧನ' ಅಲ್ಲ," ಎಂದು ಸ್ಪಷ್ಟನೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಮಾತನಾಡಿದ್ದ ದೇವೇಗೌಡರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಮಗ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯನ್ನು ಮನೆಯಿಂದ ಹೊರಗೆ ಹಾಕುವುದಾಗಿ ಹೇಳಿದ್ದರು. ಇದೀಗ ಅವರು ಪ್ರಧಾನಿ ಹೇಳಿಕೆ ಮೈತ್ರಿಯ ಸೂಚನೆ ಅಲ್ಲ ಎಂದಿದ್ದಾರೆ.











Click it and Unblock the Notifications