PM Fasal Bima Yojana: ಮುಂಗಾರು ವಿಳಂಬ, ಬೆಳೆ ವಿಮೆಗಾಗಿ ರೈತರೂ ಕೂಡಲೆ ಹೆಸರು ನೋಂದಾಯಿಸಿಕೊಳ್ಳಿ
ಬೆಂಗಳೂರು, ಜುಲೈ 12: ಹವಾಮಾನದಲ್ಲಿನ ಬದಲಾವಣೆಗಳ ಪರಿಣಾಮವಾಗಿ ಪ್ರಸ್ತಕ 2023ನೇ ವರ್ಷದಲ್ಲಿ ಅಂದುಕೊಂಡಂತಹ ಸಮಯಕ್ಕೆ ಮಳೆ ಆಗಲಿಲ್ಲ. ಸಾಕಷ್ಟು ಕಡೆಗಳಲ್ಲಿ ಮಳೆ ಕೊರತೆ ಉಂಟಾಗಿದ್ದು, ಅಂದುಕೊಂಡಂತೆ ಫಸಲು ನಿರೀಕ್ಷೆ ಅಸಾಧ್ಯ ಎಂಬಂತ ವಾತಾವರಣ ಇದೆ. ಆದ್ದರಿಂದ ಕೂಡಲೇ ರೈತರು 'ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ' ಅಡಿ ಬೆಳೆ ವಿಮೆಗೆ ಅರ್ಜಿ ಹಾಕಬೇಕಿದೆ.
ಬರಗಾಲ ಸೃಷ್ಟಿ, ಅತೀವ ಮಳೆ, ಪ್ರಾಕೃತಿಕ ಹಾನಿಯಿಂದ ಸಂಭವಿಸುವ ಬೆಳೆ ಹಾನಿಗೆ ರೈತರು ಬೆಳೆ ವಿಮೆ ಪಡೆಯಬಹುದಾಗಿದೆ.

ಪ್ರಸಕ್ತ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಯನ್ನು ಕೃಷಿ ಇಲಾಖೆ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆ ರೈತರಿಗೆ ಆರ್ಥಿಕವಾಗಿ ಸಹಾಯಕ್ಕೆ ಬರಲಿದೆ.
ಬೆಂಗಳೂರು ನಗರ ಜಿಲ್ಲೆಗೆ ಮಳೆಯಾಶ್ರಿತ ಬೆಳೆಯಾಗಿ ರಾಗಿ ಮತ್ತುಮುಸುಕಿನ ಜೋಳ, ನೀರಾವರಿ ಬೆಳೆಯಾಗಿ ಭತ್ತ ಹಾಗೂ ಮತ್ತು ಟೊಮೊಟೊ ಬೆಳೆಗಳನ್ನು ಇತರ ಬೆಳೆಗಳಾಗಿ ಅಧಿಸೂಚಿಸಲಾಗಿದೆ. ರೈತರು ಟೊಮಾಟೋ ಬೆಳೆ ವಿಮೆಯನ್ನು ಜುಲೈ 15ರೊಳಗೆ, ರಾಗಿ, ಭತ್ತ ಹಾಗೂ ಮುಸುಕಿನ ಜೋಳ ಬೆಳೆಗಳಿಗೆ ಆಗಸ್ಟ್ 16ರ ಒಳಗಾಗಿ ವಿಮೆಗೆ ನೋಂದಾಯಿಸಿಕೊಳ್ಳಬೇಕಿದೆ.
ಈ ಬೆಳೆಗಳಿಗೆ ವಿಮೆ: ನೋಂದಣಿ ಎಲ್ಲಿ?
ಅದೇ ರೀತಿ ವಿವಿಧ ಜಿಲ್ಲೆಗಳ ರೈತರು ತಾವು ಬೆಳೆದ ಬೆಳೆಗಳ ಕುರಿತು ಹತ್ತಿರದ ಕೃಷಿ ಕೇಂದ್ರದಲ್ಲಿ ಮಾಹಿತಿ ಪಡೆಯಬಹುದು. ಇಲ್ಲವೇ ಹತ್ತಿರದ ಗ್ರಾಮ ಒನ್ ಕಚೇರಿಗೆ ತೆರಳಿ ಬೆಳೆ ವಿಮೆಗೆ ನೋಂದಾಯಿಸಬೇಕು. ಈ ವೇಳೆ ಅಗತ್ಯ ವಿವರ ಕೇಳಿ ಪಡೆದುಕೊಳ್ಳಬಹುದಾಗಿದೆ.

ಭತ್ತ, ಮುಸುಕಿನ ಜೋಳ, ರಾಗಿ, ಟೊಮೆಟೋ ಜೊತೆಗೆ ನೆಲಗಡಲೆ (ಶೇಂಗಾ) (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ಮುಸುಕಿನ ಜೋಳ (ಮಳೆ ಆಶ್ರಿತ), ಹುರುಳಿ (ಮಳೆಆಶ್ರಿತ), ತೊಗರಿ (ಮಳೆ ಆಶ್ರಿತ), ಈರುಳ್ಳಿ (ನೀರಾವರಿ) ಬೆಳೆಗಳಿಗೆ ಹೂಬಳಿ ಮಟ್ಟಕ್ಕೆ ನಿಗದಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.
ಬೆಳೆ ವಿಮೆಗಾಗಿ ರೈತರು ಗ್ರಾಮ ಜನ ಸಾಮಾನ್ಯ ಸೇವಾ ಕೇಂದ್ರ ಜತೆ ಜೊತೆಗೆ ಬ್ಯಾಂಕ್ ಗಳಲ್ಲಿ ವಿಮಾ ಪ್ರಸ್ತಾವನೆ, ಪಹಣಿ, ಚಾಲ್ತಿ ಬ್ಯಾಂಕ್ ಪಾಸ್ ಪುಸ್ತಕ, ಮೊಬೈಲ್ ಹಾಗೂ ಅಧಾರ್ ಸಂಖ್ಯೆ ಸಹಿತವಾಗಿ ನಿಗದಿ ಕಂತು ಪಾವತಿಸಿ ಬೆಳೆ ವಿಮೆಗೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಕೃಷಿ ಇಲಾಖೆ ತಿಳಿಸಿದೆ.
ಇನ್ನಿತರ ಮಾಹಿತಿಗೆ ತಾಲೂಕು ಸಹಾಯಕ ಕೃಷಿ ನಿರ್ದೇಶಕರು, ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಎಮಾ ಸಂಸ್ಥೆಯ ಪ್ರತಿ ನಿಧಿಯನ್ನು ಸಂಪರ್ಕಿಸಬೇಕು.
ಯೋಜನೆಯನ್ನು ಅನುಷ್ಠಾನಗೊಳಿಸಲು ಯೂನಿವರ್ಸಲ್ ಸೋಂಪೋ ಜನರಲ್ ಇನ್ಶೂರೆನ್ಸ್ ಕಂಪನಿಯನ್ನು ನಿಗದಿ ಮಾಡಲಾಗಿದೆ. ಕೃಷಿ ಬೆಳೆಗಳಿಗೆ ವಿಮಾ ಮೊತ್ತಕ್ಕೆ ಶೇ.2ರಷ್ಟು ಹಾಗೂ ತೋಟಗಾರಿಕೆ ಬೆಳೆಗಳಿಗೆ ವಿಮಾ ಮೊತ್ತಕ್ಕೆ ಶೇ.5ರಷ್ಟು ವಿಮಾ ಕಂತು ಪಾವತಿಸಬೇಕಿದೆ. ಕಡಿಮೆ ದರದಲ್ಲಿ ಕಂತಗಳನ್ನು ಕಟ್ಟಿದರೆ, ಪ್ರಕೃತಿ ವಿಕೋಪದಿಂದ ಬೆಳೆಗಳು ಒಂದು ವೇಳೆ ಹಾಳಾದರೆ, ಹೆಚ್ಚಿನ ಮೊತ್ತದ ಹಣ ರೈತರಿಗೆ ಸಿಗಲಿದೆ.












Click it and Unblock the Notifications