ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆಗೆ ಪ್ಲಾನ್
ಬೆಂಗಳೂರು, ಜುಲೈ 14: ಈಗಾಗಲೇ ರಾಜ್ಯದ ಜನರು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತಿದ್ದಾರೆ. ಈ ನಡುವೆಯೇ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರವೇ ವಿದ್ಯುತ್ ದರ ಏರಿಕೆ ಆಗುವ ಸಾಧ್ಯತೆ ಇದೆ. ಎಸ್ಕಾಂಗಳ ಆದಾಯದ ಅಂತರವನ್ನ ಸರಿದೂಗಿಸಲು ಜನರ ಜೇಬು ಸುಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ದರವನ್ನ ಹೆಚ್ಚಿಸುವ ಮೂಲಕ ತಮ್ಮ 4,620 ಕೋಟಿ ರೂಪಾಯಿಗಳ ಆದಾಯದ ಅಂತರವನ್ನು ಸರಿದೂಗಿಸಲು ವಿದ್ಯುತ್ ಸರಬರಾಜು ನಿಗಮ ನಿಯಮಿತ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಿಂದ (ಕೆಇಆರ್‌ಸಿ) ತಿದ್ದುಪಡಿ ಕೋರಿದೆ ಎಂದು ತಿಳಿದುಬಂದಿದೆ.

ತಮ್ಮ ಆದಾಯದ ಅಂತರವನ್ನು ಸರಿ ಮಾಡಿಕೊಳ್ಳಲು ಎಸ್ಕಾಂಗಳು ಮಾರ್ಚ್ 23, 2025ರಂದು ಮೊದಲ ಬಾರಿಗೆ ಕೆಇಆರ್‌ಸಿಗೆ ಮೇಲ್ಮನವಿ ಸಲ್ಲಿಕೆ ಮಾಡಿದ್ದವು. ಈ ಕುರಿತ ಚರ್ಚೆಯನ್ನು ಜುಲೈ 8ರಂದು ನಡೆಸಲಾಯಿತು. 30 ದಿನಗಳೊಳಗೆ ಎಲ್ಲಾ ಪಾಲುದಾರರಿಂದ ಸಾರ್ವಜನಿಕ ಅಭಿಪ್ರಾಯವ ಸಂಗ್ರಹಿಸಲು ಮತ್ತು ಅಫಿಡವಿಟ್ ಮೂಲಕ ಆಯೋಗಕ್ಕೆ ವಿವರಗಳನ್ನು ಸಲ್ಲಿಕೆ ಮಾಡಲು ವಿದ್ಯುತ್ ಸರಬರಾಜು ನಿಗಮ ನಿಯಮಿತಕ್ಕೆ ಅನುಮತಿ ನೀಡಿದೆ.
ಆದರೆ, ಈ ರೀತಿಯ ಪರಿಷ್ಕರಣೆ ಕೋರಿರುವುದು ಇದೇ ಮೊದಲು, ಯಾಕಂದ್ರೆ ಸರ್ಕಾರಕ್ಕೆ ಬಾಕಿ ಹಣವನ್ನ ತೆರವುಗೊಳಿಸಲು ಕಷ್ಟವರ ಆಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿ ಆಗಿದೆ.
ಇನ್ನು ಖ್ಯಾತ ಇಂಧನ ತಜ್ಞ ಎಂ.ಜಿ. ಪ್ರಭಾಕರ್ ಅವರು ಮಾತನಾಡಿ, ಕಾನೂನು ಎಸ್ಕಾಂಗಳು ಅಂತಹ ತಿದ್ದುಪಡಿಗಳನ್ನು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ ಅಂತಾ ವರದಿಯಾಗಿದೆ. ಸರ್ಕಾರವು ಐಪಿ ಸೆಟ್‌ಗಳಿಗೆ ನೀಡಿರುವ ಸಬ್ಸಿಡಿ ಹೆಚ್ಚಾಗಿದೆ. ಇದನ್ನು ಎಸ್ಕಾಂಗಳು ನಿರ್ವಹಿಸಲು ಕಷ್ಟಕರ ಆಗಿದೆ. ಆದ್ದರಿಂದ ಆದಾಯವನ್ನು ಹೊಂದಿಸಲು, ಎಸ್ಕಾಂಗಳು ಗ್ರಾಹಕರ ಮೇಲೆ ಹೆಚ್ಚಿನ ಸುಂಕ ಹೇರಲು ಬಯಸುತ್ತಿದ್ದಾರೆ.
ಗೃಹ ಜ್ಯೋತಿ ಯೋಜನೆಗೂ ಸಹ ಕ್ರಮೇಣ ಅದೇ ರೀತಿ ಮಾಡುವ ಸಾಧ್ಯತೆಗಳಿವೆ. 2025-26ನೇ ಸಾಲಿಗೆ ಐಪಿ ಸೆಟ್‌ಗಳ ಅನುಮೋದಿತ ಮಾರಾಟವು 24,868.10 ಮಿಲಿಯನ್ ಯೂನಿಟ್‌ಗಳು ಆಗಿದ್ದು, ಅವುಗಳಿಗೆ ಪ್ರತಿ ಯೂನಿಟ್‌ಗೆ 8.30 ರೂಪಾಯಿಗಳಿಗೆ ವಿದ್ಯುತ್ ಪೂರೈಸುವ ಜವಾಬ್ದಾರಿಯನ್ನ ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಈ ಸುಂಕವನ್ನು ಕೆಇಆರ್‌ಸಿ ನಿಗದಿಪಡಿಸಿದೆ. ಆದರೆ, ಕರ್ನಾಟಕ ವಿದ್ಯುತ್ ಕಾಯ್ದೆ 2003, ವಿಭಾಗ 63, ಉಪ-ವಿಭಾಗ- 4ರ ಪ್ರಕಾರ, ಯಾವುದೇ ಸುಂಕ ಅಥವಾ ಯಾವುದೇ ಸುಂಕದ ಭಾಗವನ್ನು ಸಾಮಾನ್ಯವಾಗಿ ಯಾವುದೇ ಹಣಕಾಸು ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ತಿದ್ದುಪಡಿ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಈ ನಡುವೆ ವಿವಿಧ ಕೈಗಾರಿಕಾ ಸಂಸ್ಥೆಗಳ ಸದಸ್ಯರು ಕೆಎಆರ್‌ಸಿ ಮತ್ತು ಎಸ್ಕಾಂಗಳ ಮುಂದೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಈಗಾಗಲೇ ದಿನಬಳಕೆ ವಸ್ತುಗಳ ದರ ಏರಿಕೆಯಿಂದ ಸಾಮನ್ಯ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆಯೇ ಇದೀಗ ವಿದ್ಯುತ್ ದರ ಏರಿಕೆಗೆ ಸರ್ಕಾರ ಚಿಂತನೆ ನಡೆಸುತ್ತಿದ್ದು, ಇದರಿಂದ ಜನರು ಮತ್ತಷ್ಟು ಆತಂಕ್ಕೆ ಒಳಗಾಗಿದ್ದಾರೆ.












Click it and Unblock the Notifications