PGCET 2026 ಫಲಿತಾಂಶ ಪ್ರಕಟ: MBA, MCA, ಅಂತಿಮ ಸೀಟು ಹಂಚಿಕೆ ರಿಸಲ್ಟ್ ನೋಡುವುದು ಹೇಗೆ? ಪ್ರವೇಶಾತಿ ವೇಳಾಪಟ್ಟಿ ಇಲ್ಲಿದೆ
ರಾಜ್ಯದಲ್ಲಿ ಸ್ನಾತಕೋತ್ತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕಾಯುತ್ತಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಿಹಿಸುದ್ದಿ ನೀಡಿದೆ. ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (ಪಿಜಿಸಿಇಟಿ) ಆಧಾರದ ಮೇಲೆ ಎಂಜಿನಿಯರಿಂಗ್, ಆರ್ಕಿಟೆಕ್ಚರ್ ಮತ್ತು ಮ್ಯಾನೇಜ್‌ಮೆಂಟ್ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಯ ಪ್ರಮುಖ ಹಂತವಾದ ಸೀಟು ಹಂಚಿಕೆ ಪ್ರಕ್ರಿಯೆಯ ಅಂತಿಮ ಫಲಿತಾಂಶವನ್ನ ಇದೀಗ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಅವರು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಪಿಜಿಸಿಇಟಿ-26ರ ಅಡಿಯಲ್ಲಿ ಎಂಬಿಎ, ಎಂಸಿಎ, ಎಂಇ, ಎಂ.ಟೆಕ್ ಮತ್ತು ಎಂ.ಆರ್ಕ್ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಅಂತಿಮ ಸುತ್ತಿನ ಸೀಟು ಹಂಚಿಕೆಯ ವಿವರಗಳನ್ನ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.

ವಿದ್ಯಾರ್ಥಿಗಳು ತಮ್ಮ ಲಾಗಿನ್ ವಿವರಗಳನ್ನು ಬಳಸಿ ತಮಗೆ ಯಾವ ಕಾಲೇಜಿನಲ್ಲಿ ಸೀಟು ಸಿಕ್ಕಿದೆ ಎಂಬುದನ್ನ ಖಚಿತಪಡಿಸಿಕೊಳ್ಳಬಹುದು.
ಕೆಇಎ ಅಂತಿಮ ಫಲಿತಾಂಶ ವೀಕ್ಷಿಸುವುದು ಹೇಗೆ?
ಮೊದಲ ಸುತ್ತು ಮತ್ತು ಎರಡನೇ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆಗಳೆಲ್ಲ ಮುಗಿದ ಬಳಿಕ, ಅಭ್ಯರ್ಥಿಗಳು ನೀಡಿದ್ದ ಆದ್ಯತೆಗಳು ಹಾಗೂ ಅವರ ರ್‍ಯಾಂಕಿಂಗ್ ಆಧಾರದ ಮೇಲೆ ಈ ಕೆಇಎ ಅಂತಿಮ ಫಲಿತಾಂಶ ಪ್ರಕಟವಾಗಿದೆ.
ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣ (kea.kar.nic.in) ಕ್ಕೆ ಭೇಟಿ ನೀಡಿ, ಅಲ್ಲಿ ನೀಡಲಾಗಿರುವ ಪಿಜಿಸಿಇಟಿ 2026ರ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ತಮ್ಮ ಪಿಜಿಸಿಇಟಿ ನಂಬರ್ ನಮೂದಿಸುವ ಮೂಲಕ ತಮಗೆ ಹಂಚಿಕೆಯಾಗಿರುವ ಕಾಲೇಜು ಮತ್ತು ಕೋರ್ಸ್‌ನ ವಿವರಗಳನ್ನ ಸುಲಭವಾಗಿ ಪಡೆಯಬಹುದು.
ಶುಲ್ಕ ಪಾವತಿಗೆ ಅಕ್ಟೋಬರ್ 19 ಕೊನೆಯ ದಿನ
ಅಂತಿಮ ಸೀಟು ಹಂಚಿಕೆಯಲ್ಲಿ ತಮಗೆ ಇಷ್ಟವಾದ ಕಾಲೇಜಿನಲ್ಲಿ ಸೀಟು ಪಡೆದುಕೊಂಡಿರುವ ವಿದ್ಯಾರ್ಥಿಗಳು, ಮುಂದಿನ ಹಂತವಾಗಿ ನಿಗದಿತ ಶುಲ್ಕ ಪಾವತಿ ಮಾಡುವುದು ಕಡ್ಡಾಯವಾಗಿದೆ.
ಕೆಇಎ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಅಕ್ಟೋಬರ್ 19 ರೊಳಗೆ ಆನ್‌ಲೈನ್ ಮೂಲಕ ಅಥವಾ ಚಲನ್ ಡೌನ್‌ಲೋಡ್ ಮಾಡಿಕೊಂಡು ನಿಗದಿತ ಬ್ಯಾಂಕ್‌ಗಳಲ್ಲಿ ಶುಲ್ಕವನ್ನು ಪಾವತಿಸಬೇಕು.
ಒಂದು ವೇಳೆ ನಿಗದಿತ ದಿನಾಂಕದೊಳಗೆ ಶುಲ್ಕ ಪಾವತಿಸಲು ವಿಫಲರಾದರೆ, ಅಂತಹ ಅಭ್ಯರ್ಥಿಗಳ ಸೀಟು ರದ್ದಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಚ್ಚರ ವಹಿಸಿ ಬೇಗನೆ ಶುಲ್ಕ ಕಟ್ಟುವಂತೆ ಪ್ರಾಧಿಕಾರ ಸೂಚಿಸಿದೆ.
#PGCET-26: ಎಂಬಿಎ, ಎಂಸಿಎ, ಎಂಇ, ಎಂ.ಟೆಕ್/ಎಂ ಆರ್ಕ್ ಕೋರ್ಸ್ ಗಳ ಪ್ರವೇಶಕ್ಕೆಸಂಬಂಧಿಸಿದಂತೆ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಿಸಲಾಗಿದೆ.ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಅ.19ರೊಳಗೆ ಶುಲ್ಕ ಪಾವತಿಸಿ, ಅ.23ರೊಳಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು.- ಹೆಚ್.ಪ್ರಸನ್ನ ಐಎಎಸ್ಕಾರ್ಯನಿರ್ವಾಹಕ ನಿರ್ದೇಶಕಕರ್ನಾಟಕ ಪರೀಕ್ಷಾ ಪ್ರಾಧಿಕಾರ@CMofKarnataka@basavarajrayar2@S_PrakashPatil
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) October 16, 2026
ಅ.23ರೊಳಗೆ ಕಾಲೇಜು ಪ್ರವೇಶ ಕಡ್ಡಾಯ
ಶುಲ್ಕ ಪಾವತಿಸಿದ ಬಳಿಕ ವಿದ್ಯಾರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ನಿಂದ ಪ್ರವೇಶ ಆದೇಶವನ್ನ ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆನಂತರ, ತಮ್ಮ ಎಲ್ಲಾ ಒರಿಜಿನಲ್ ಶೈಕ್ಷಣಿಕ ದಾಖಲಾತಿಗಳು, ಶುಲ್ಕ ಪಾವತಿಸಿದ ರಸೀದಿ ಹಾಗೂ ಪ್ರವೇಶ ಆದೇಶದೊಂದಿಗೆ ತಮಗೆ ಹಂಚಿಕೆಯಾಗಿರುವ ಕಾಲೇಜಿಗೆ ಖುದ್ದಾಗಿ ಭೇಟಿ ನೀಡಬೇಕು.
ಅಕ್ಟೋಬರ್ 23ರೊಳಗೆ ಅಭ್ಯರ್ಥಿಗಳು ಕಾಲೇಜುಗಳಲ್ಲಿ ವರದಿ ಮಾಡಿಕೊಂಡು, ಎಂಬಿಎ, ಎಂಸಿಎ ಪ್ರವೇಶ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮುಗಿಸಬೇಕು ಎಂದು ಕೆಇಎ ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಕಾಲೇಜಿಗೆ ರಿಪೋರ್ಟ್ ಮಾಡಿಕೊಂಡ ಬಳಿಕ, ಆಯಾ ಕಾಲೇಜಿನ ಆಡಳಿತ ಮಂಡಳಿಯು ವಿದ್ಯಾರ್ಥಿಯ ಪ್ರವೇಶವನ್ನು ಕೆಇಎ ಪೋರ್ಟಲ್‌ನಲ್ಲಿ ದೃಢೀಕರಿಸುತ್ತದೆ.
ಉನ್ನತ ಶಿಕ್ಷಣದ ಕನಸು ಹೊತ್ತು ಸ್ನಾತಕೋತ್ತರ ಪದವಿಗೆ ಕಾಲಿಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಇದು ಮಹತ್ವದ ಘಟ್ಟವಾಗಿದ್ದು, ಯಾವುದೇ ಗೊಂದಲಗಳಿಲ್ಲದೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಲು ಕೆಇಎ ಕೋರಿದೆ.


Click it and Unblock the Notifications
