Doreswamy Naidu: ಪಿಇಎಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ, ವಿಧಾನ ಪರಿಷತ್ ಮಾಜಿ ಸದಸ್ಯ ದೊರೆಸ್ವಾಮಿ ನಾಯ್ಡು ನಿಧನ!
Doreswamy Naidu: ಬೆಂಗಳೂರಿನ ಪಿಇಎಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಹಾಗೂ ವಿಧಾನಪರಿಷತ್‌ನ ಮಾಜಿ ಸದಸ್ಯರಾದ ದೊರೆಸ್ವಾಮಿ ನಾಯ್ಡು ಅವರು ಇಂದು (ಮಾರ್ಚ್6ಕ್ಕೆ) ಮೃತಪಟ್ಟಿದ್ದು ಅವರ ಅಂತ್ಯ ಸಂಸ್ಕಾರ ನಾಳೆ ನೆರವೇರಲಿದೆ. ಪಿಇಎಸ್ ಶಿಕ್ಷಣ ಸಂಸ್ಥೆಯ ಮೂಲಕ ಅವರು ಸಾವಿರಾರು ಜನ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. 88 ವರ್ಷದ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಆಂಧ್ರಪ್ರದೇಶದ ಚಿತ್ತೂರು ಮೂಲದ ಅವರು ಶಿಕ್ಷಣ ತಜ್ಞರು ಸಹ ಆಗಿದ್ದರು. ಪಿಇಎಸ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪನೆ ಮಾಡುವ ಮೂಲಕ ಸಾವಿರಾರು ಜನರಿಗೆ ವಿದ್ಯಾಭ್ಯಾಸ ಕಲ್ಪಿಸುವುದರ ಜೊತೆಗೆ ಕರ್ನಾಟಕ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ಸಹ ನೀಡಿದ್ದಾರೆ. ಅವರ ನಿಧನಕ್ಕೆ ರಾಜಕೀಯ ಗಣ್ಯರು ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.
1972ರಲ್ಲಿ ಬೆಂಗಳೂರಿನಲ್ಲಿ ಸಣ್ಣ ಹಂತದಿಂದ ಅವರು ಶಿಕ್ಷಣ ಕ್ಷೇತ್ರಕ್ಕೆ ಬಂದಿದ್ದರು. ಮೊದ ಮೊದಲು ಬಾಡಿಗೆ ಕಟ್ಟಡದಿಂದ ಹಾಗೂ 40 ಜನ ವಿದ್ಯಾರ್ಥಿಗಳಿಂದ ಈ ಶಿಕ್ಷಣ ಸಂಸ್ಥೆ ಪ್ರಾರಂಭವಾಗಿತ್ತು. ಇನ್ನು ದೊರೆಸ್ವಾಮಿ ಅವರು ಪತ್ನಿ ಕೆ. ರಾಧಾ ಮನೋಹರಿ, ಒಬ್ಬ ಮಗ ಹಾಗೂ ಮಗಳನ್ನು ಅಗಲಿದ್ದಾರೆ.

ದೊರೆಸ್ವಾಮಿ ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಸಚಿವ ಎಂ.ಬಿ ಪಾಟೀಲ್ ಅವರು, ಬೆಂಗಳೂರಿನ ಪಿಇಎಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕರು, ವಿಧಾನಪರಿಷತ್ತಿನ ಮಾಜಿ ಸದಸ್ಯರಾದ ದೊರೆಸ್ವಾಮಿ ನಾಯ್ಡು ಅವರು ವಿಧಿವಶರಾದ ಸುದ್ದಿ ದುಃಖ ತಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಅವರ ದೀರ್ಘಕಾಲದ ಕೊಡುಗೆ ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಪ್ರಮುಖ ಪಾತ್ರವಹಿಸಿದೆ. ಅವರ ಅಗಲಿಕೆಯಿಂದಾಗಿ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ ಕುಟುಂಬದವರಿಗೆ,ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಪಿಇಎಸ್ ಸಂಸ್ಥೆಗಳ ಸಂಸ್ಥಾಪಕರು, ವಿಧಾನ ಪರಿಷತ್ ಮಾಜಿ ಸದಸ್ಯರಾದ ಪ್ರೊ.ಎಂ.ಆರ್.ದೊರೆಸ್ವಾಮಿ ಅವರ ನಿಧನದ ಸುದ್ದಿ ಆಘಾತ ಮೂಡಿಸಿದೆ. ಐದು ದಶಕಗಳ ಹಿಂದೆ ಬೆಂಗಳೂರಿನ ಗವಿಪುರ ಗುಟ್ಟಹಳ್ಳಿಯಲ್ಲಿ ತಾತ್ಕಾಲಿಕ ಕಟ್ಟಡವೊಂದರಲ್ಲಿ ಕೇವಲ 45 ವಿದ್ಯಾರ್ಥಿಗಳೊಂದಿಗೆ ಪಿಯು ಕಾಲೇಜು ಆರಂಭಿಸಿದ ದೂರದೃಷ್ಟಿಯ ದೊರೆಸ್ವಾಮಿ ಅವರು ಪೀಪಲ್ಸ್ ಎಜುಕೇಷನ್ ಸೊಸೈಟಿ (ಪಿಇಎಸ್) ಎಂಬ ಬ್ರ್ಯಾಂಡ್ ಕಟ್ಟಿ, ಇಂಜಿನಿಯರಿಂಗ್, ಮೆಡಿಕಲ್, ಹೊಸ ವಿಶ್ವವಿದ್ಯಾಲಯ ಸೇರಿದಂತೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು ಎಂದು ಸ್ಮರಿಸಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು, ಅವರ ಕುಟುಂಬಸ್ಥರಿಗೆ, ಅಪಾರ ಶಿಷ್ಯಕೋಟಿಗೆ ಈ ದುಃಖವನ್ನು ಭರಿಸುವ ಶಕ್ತಿ ಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
It’s with a heavy heart that I mourn the passing of Prof. Dr. M. R. Doreswamy Naidu, PES Chairman and ex-MLC. I’ll always be grateful for his generosity and the opportunities he provided. His legacy will live on in all of us. #RIP #MRDoreSwamy #PES pic.twitter.com/CWzK3rWEOv
— Abinay Chowdary | ಅಬಿನಯ್ (@abinay_t) March 6, 2025
ದೊರೆಸ್ವಾಮಿ ಅವರು ವಿಧಿವಶರಾಗಿರುವುದಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ. ಶಿಕ್ಷಣ ಕ್ಷೇತ್ರದ ಹಲವು ಗಣ್ಯರು ಸಹ ಸಂತಾಪ ಸೂಚಿಸಿದ್ದಾರೆ. ನಾಡಿನ ಹಲವರು ದೊರೆಸ್ವಾಮಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿದ್ದಾರೆ.












Click it and Unblock the Notifications