ದೇವಾಲಯದಲ್ಲಿ ಪೂಜೆಗೆ ಅನುಮತಿ; ಸರ್ಕಾರದ ವಿರುದ್ಧ ವಿಜಯೇಂದ್ರ ಟ್ವೀಟ್
ಬೆಂಗಳೂರು, ಜುಲೈ 10; ಹಿಂದೂ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲೂ ಬಿಬಿಎಂಪಿ ಅನುಮತಿ ಪಡೆದುಕೊಳ್ಳಬೇಕೆನ್ನುವ ನಿಯಮ 'ತುಘಲಕ್' ಆಡಳಿತ ನೆನಪಿಗೆ ತರಿಸುತ್ತಿದೆ ಎಂದು ಶಿಕಾರಿಪುರ ಕ್ಷೇತ್ರದ ಶಾಸಕ, ಬಿಜೆಪಿ ರಾಜ್ಯಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸೋಮವಾರ ಈ ಕುರಿತು ಅವರು ಟ್ವೀಟ್ ಮಾಡಿದ್ದು, ಪೊಲೀಸ್ ಇನ್ಸ್‌ಪೆಕ್ಟರ್ ಉಪ್ಪಾರಪೇಟೆ ಪೊಲೀಸ್ ಠಾಣೆ ಬೆಂಗಳೂರು ನಗರ ಇವರು ದಿನಾಂಕ 09/07/2023ರಂದು ಹೊರಡಿಸಿರುವ ಪೊಲೀಸ್ ನೋಟೀಸ್ ಅನ್ನು ಉಲ್ಲೇಖಿಸಿದ್ದಾರೆ.

ಪೊಲೀಸರು ಈ ನೋಟಿಸ್ ಅನ್ನು ಪುನೀತ್ ಕೆರೆಹಳ್ಳಿ ಹಿಂದೂ ಕಾರ್ಯಕರ್ತರು ಸಂಕಲ್ಪ ಹಿಂದೂ ರಾಷ್ಟ್ರ ಇವರಿಗೆ ನೀಡಿದ್ದಾರೆ. ಈ ನೋಟಿಸ್ ಉಲ್ಲೇಖ ಮಾಡಿ ಬಿ. ವೈ. ವಿಜಯೇಂದ್ರ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ.
ವಿಜಯೇಂದ್ರ ಟ್ವೀಟ್; ಶಾಸಕ ಬಿ. ವೈ. ವಿಜಯೇಂದ್ರ ತಮ್ಮ ಟ್ವೀಟ್‌ನಲ್ಲಿ, ' ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಹಿಂದೂ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲೂ ಅನುಮತಿ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಉದ್ಭವಿಸಿದೆ' ಎಂದು ಹೇಳಿದ್ದಾರೆ.
'ಕಾನೂನು ಸುವ್ಯವಸ್ಥೆಯ ದೃಷ್ಠಿಯಿಂದ ಪೋಲಿಸರ ಗಮನಕ್ಕೆ ತರಬೇಕೆನ್ನುವುದನ್ನು ಒಪ್ಪಬಹುದು, ಆದರೆ ಪೂಜೆ ಸಲ್ಲಿಸಲು BBMP ಅನುಮತಿ ಪಡೆದುಕೊಳ್ಳಬೇಕೆನ್ನುವ ನಿಯಮ 'ತುಘಲಕ್' ಆಡಳಿತ ನೆನಪಿಗೆ ತರಿಸುತ್ತಿದೆ' ಎಂದು ಅಸಧಾನ ವ್ಯಕ್ತಪಡಿಸಿದ್ದಾರೆ.
ವಿಜಯೇಂದ್ರ ಉಲ್ಲೇಖ ಮಾಡಿರುವ ಪೊಲೀಸ್ ನೋಟಿಸ್‌ನಲ್ಲಿ, ಈ ಮೂಲಕ ತಮಗೆ ತಿಳಿಯಪಡಿಸುವುದೇನೆಂದರೆ, ತಾವುಗಳು ದಿನಾಂಕ 09/07/2023 ರಿಂದ ಪ್ರತಿ ಭಾನುವಾರ ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 01.00 ಗಂಟೆವರೆಗೆ ಸಂಕಲ್ಪ ಹಿಂದೂ ರಾಷ್ಟ್ರ ಇದರ ವತಿಯಿಂದ ಶ್ರೀ. ಪುನೀತ್ ಕೆರೆಹಳ್ಳಿ ಆದ ನಿಮ್ಮ ನೇತೃತ್ವದಲ್ಲಿ ಬೆಂಗಳೂರು ನಗರ, ಮೆಜೆಸ್ಟಿಕ್ ಬಳಿ ಇರುವ ಬಿಬಿಎಂಪಿ ಗ್ರೌಂಡ್ ಪಕ್ಕದಲ್ಲಿರುವ ಪುರಾತನ ನಾಗರಕಟ್ಟೆ ಯ ಬಳಿ ನಾಗ ದೇವರ ಪೂಜೆಯನ್ನು ಹಮ್ಮಿಕೊಂಡಿದ್ದು, ಪ್ರತಿಯೊಬ್ಬ ಹಿಂದೂ ಕಾರ್ಯಕರ್ತರು ಮರೆಯದೇ ತಮ್ಮ ಕುಟುಂಬ ಸಮೇತವಾಗಿ ಭಾಗವಹಿಸಬೇಕೆಂದು ತಮ್ಮ ಸಾಮಾಜಿಕ ಜಾಲತಾಣದ ಪೇಜ್‌ನಲ್ಲಿ ಹಂಚಿಕೊಂಡಿರುತ್ತೀರಿ.
ಸದರಿ ವಿಚಾರಕ್ಕೆ ಸಂಬಂಧಿಸಿದಂತೆ, ತಾವುಗಳು ಬಿಬಿಎಂಪಿ ಗ್ರೌಂಡ್ ಪಕ್ಕದಲ್ಲಿರುವ ಪುರಾತನ ನಾಗರಕಟ್ಟೆಯ ಬಳಿ ಪೂಜೆಯನ್ನು ಮಾಡಲು ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳಿಂದ ಅನುಮತಿಯನ್ನು ಪಡೆದಿರುತ್ತೀರಾ? ಪಡೆದಿದ್ದಲ್ಲಿ ಅನುಮತಿ ಪತ್ರದ ಒಂದು ಪ್ರತಿಯನ್ನು ನೀಡಲು ತಮಗೆ ಸೂಚಿಸಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಹಿಂದೂ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲೂ ಅನುಮತಿ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಕಾನೂನು ಸುವ್ಯವಸ್ಥೆಯ ದೃಷ್ಠಿಯಿಂದ ಪೋಲಿಸರ ಗಮನಕ್ಕೆ ತರಬೇಕೆನ್ನುವುದನ್ನು ಒಪ್ಪಬಹುದು, ಆದರೆ ಪೂಜೆ ಸಲ್ಲಿಸಲು BBMP ಅನುಮತಿ ಪಡೆದುಕೊಳ್ಳಬೇಕೆನ್ನುವ ನಿಯಮ ‘ತುಘಲಕ್’ ಆಡಳಿತ ನೆನಪಿಗೆ ತರಿಸುತ್ತಿದೆ. pic.twitter.com/siKqr0MDDS
— Vijayendra Yeddyurappa (@BYVijayendra) July 10, 2023
ಪೊಲೀಸರಿಗೆ ಯತ್ನಾಳ್ ಪ್ರಶ್ನೆ; ಇನ್ನು ಇದೇ ನಾಗರಕಟ್ಟೆಯ ಬಳಿ ನಾಗ ದೇವರ ಪೂಜೆಯನ್ನು ಮಾಡುವ ಕುರಿತು ಹೊರಡಿಸಿರುವ ನೋಟಿಸ್ ಕುರಿತು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಟ್ವೀಟ್ ಮಾಡಿದ್ದಾರೆ. ಬೆಂಗಳೂರು ನಗರ ಪೊಲೀಸ್, ಕರ್ನಾಟಕ ಡಿಐಜಿ ಮತ್ತು ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿಯನ್ನು ಟ್ಯಾಗ್ ಮಾಡಿದ್ದಾರೆ.
ತಮ್ಮ ಟ್ವೀಟ್‌ನಲ್ಲಿ ಯತ್ನಾಳ್, 'ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಅಲ್ಲಿರುವ ನಾಗರಕಟ್ಟೆಯ ಪೂಜೆ ಮಾಡುವ ಹಿಂದುಗಳಿಗೆ ನೋಟಿಸ್ ಜಾರಿ ಮಾಡಿರುವುದು ಪೊಲೀಸರು ಯಾರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಸಂದೇಹ ಮೂಡಿಸಿದೆ' ಎಂದು ಹೇಳಿದ್ದಾರೆ.
'ಬಿಬಿಎಂಪಿ ಅನುಮತಿ ಪಡೆಯಬೇಕಾದರೆ ಬಿಬಿಎಂಪಿಯವರು ನೋಟಿಸ್ ಜಾರಿ ಮಾಡುವುದನ್ನು ಹೊರತು, ಪೊಲೀಸರು ಕೊಟ್ಟಿರುವುದು ಬಿಬಿಎಂಪಿಯ ಆಪ್ತ ಸಹಾಯಕರ ಎಂಬ ಸಂಶಯ ಮೂಡಿಸುತ್ತಿದೆ' ಎಂದು ಟ್ವೀಟ್ ಮಾಡಿದ್ದಾರೆ.
'ಹಿಂದೂಗಳು ಈ ರಾಜ್ಯದಲ್ಲಿ ಪೂಜೆ ಮಾಡಲು ಪೊಲೀಸರ ಹಾಗು ಬಿಬಿಎಂಪಿಯವರ ಅನುಮತಿ ಪಡೆಯಬೇಕೆ?. ಯಾವ ಧಾರ್ಮಿಕ ಕೇಂದ್ರಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ?' ಎಂದು ಪೊಲೀಸರ ಕ್ರಮವನ್ನು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications