ಕೊವಿಡ್-19 ನೆಗೆಟಿವ್ ಬಂದರೂ ಮೊಬೈಲ್ ಸಂಖ್ಯೆಗೆ SMS
ಬೆಂಗಳೂರು, ಜುಲೈ.20: ಕೊರೊನಾವೈರಸ್ ಸೋಂಕಿನ ಭೀತಿಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿದ್ದೀವಿ. ಪಾಸಿಟಿವ್ ಬರುತ್ತೋ, ನೆಗೆಟಿವ್ ಬರುತ್ತೋ. ಪಾಸಿಟಿವ್ ಬಂದರೆ ಅಷ್ಟೇ ನಮಗೆ ಮಾಹಿತಿ ಕೊಡ್ತಾರಂತೆ. ನೆಗೆಟಿವ್ ಇದ್ದರೆ ಯಾವುದೇ ಮಾಹಿತಿ ಸಿಗೋದಿಲ್ಲ.
Recommended Video
ಕೊವಿಡ್-19 ಟೆಸ್ಟ್ ಕುರಿತು ಯಾವುದೇ ವರದಿಯ ಬಗ್ಗೆ ನಮಗೆ ಗೊತ್ತೇ ಆಗೋದಿಲ್ಲ. ಹೀಗೆ ಭಯದಲ್ಲೇ ಕಾಲ ಕಳೆಯುತ್ತಿದ್ದ ಜನರ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರದ ಹೊಸ ಸುತ್ತೋಲೆಯನ್ನು ಹೊರಡಿಸಿದೆ.
ಒಮ್ಮೆ ಕೊರೊನಾವೈರಸ್ ತಪಾಸಣೆಗೆ ಒಳಗಾದ ವ್ಯಕ್ತಿಗೆ ಸೋಂಕು ಪಾಸಿಟಿವ್ ಬಂದರೂ ನೆಗೆಟಿವ್ ಬಂದರೂ ಆತನಿಗೆ ಮಾಹಿತಿ ನೀಡಬೇಕು. ಎಸ್ಎಂಎಸ್ ಮೂಲಕ ಕಡ್ಡಾಯವಾಗಿ ಮಾಹಿತಿ ನೀಡುವಂತೆ ಖಡಕ್ ಸೂಚನೆ ನೀಡಲಾಗಿದೆ.

ಪಾಸಿಟಿವ್ ವರದಿ ಬಂದರೆ ಎಸ್ಎಂಎಸ್
ಕೊರೊನಾವೈರಸ್ ಸೋಂಕು ತಪಾಸಣೆ ಮಾಡಿಸಿಕೊಂಡ ಪ್ರತಿಯೊಬ್ಬರು ತಮ್ಮ ಮೊಬೈಲ್ ಸಂಖ್ಯೆಯನ್ನು ಹಾಗೂ ವಿಳಾಸದ ವಿವರವನ್ನು ನೀಡಿರುತ್ತಾರೆ. ಈ ಮೊದಲು ಸೋಂಕು ಪಾಸಿಟಿವ್ ಬಂದರೆ ಮೊದಲಿಗೆ ಮೊಬೈಲ್ ಗೆ ಸಂದೇಶ ರವಾನಿಸಿ, ನಂತರ ಸ್ವತಃ ವೈದ್ಯಕೀಯ ಸಿಬ್ಬಂದಿಯೇ ಆ ವಿಳಾಸಕ್ಕೆ ತೆರಳಿ ಸೋಂಕಿತನನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗಳಿಗೆ ಅಥವಾ ಕೊವಿಡ್ ಕೇರ್ ಸೆಂಟರ್ ಗೆ ಕರೆದುಕೊಂಡು ಬಂದು ದಾಖಲಿಸುತ್ತಿದ್ದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಮಾಹಿತಿ
ಕೊರೊನಾವೈರಸ್ ಸೋಂಕು ಪರೀಕ್ಷೆಗೆ ಒಳಪಟ್ಟ ವ್ಯಕ್ತಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಕೊವಿಡ್-19 ಸೋಂಕು ತಗಲಿದ್ದರೂ, ಸೋಂಕು ಇಲ್ಲದಿದ್ದರೂ ಈ ಬಗ್ಗೆ ಸ್ಥಳೀಯ ಭಾಷೆ ಮತ್ತು ಇಂಗ್ಲೀಷ್ ನಲ್ಲಿ ಸಂಬಂಧಪಟ್ಟವರ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಕಳುಹಿಸುವಂತೆ ಆರೋಗ್ಯ ಇಲಾಖೆಯು ಸುತ್ತೋಲೆ ಹೊರಡಿಸಿದೆ.

ಜನರನ್ನು ಚಿಂತೆಗೀಡು ಮಾಡಿತ್ತು ಇದೊಂದು ಪದ್ಧತಿ
ಕೊರೊನಾವೈರಸ್ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಕೊವಿಡ್-19 ಪರೀಕ್ಷೆ ಮಾಡಿಸಿಕೊಂಡ ವ್ಯಕ್ತಿಗೆ ಪಾಸಿಟಿವ್ ವರದಿ ಬಂದಾಕ್ಷಣಕ್ಕೆ ಆತನ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತಿತ್ತು. ಆದರೆ ತಪಾಸಣಾ ವರದಿಯು ನೆಗೆಟಿವ್ ಬಂದರೆ ಯಾವುದೇ ಮಾಹಿತಿ ನೀಡಲಾಗುತ್ತಿರಲಿಲ್ಲ. ಇದರಿಂದ ತಮ್ಮ ವೈದ್ಯಕೀಯ ತಪಾಸಣಾ ವರದಿ ಬಗ್ಗೆ ಜನರು ಆತಂಕದಲ್ಲೇ ಕಾಲ ಕಳೆಯುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕೊವಿಡ್-19 ತಪಾಸಣೆ ನಡೆಸಿದ ಎಲ್ಲರಿಗೂ ಎಸ್ಎಂಎಸ್
ಒಮ್ಮೆ ಕೊವಿಡ್-19 ತಪಾಸಣೆ ಮಾಡಿಸಿಕೊಂಡ ವ್ಯಕ್ತಿಯು ತನ್ನ ವೈದ್ಯಕೀಯ ವರದಿ ಮಾಹಿತಿ ಬಗ್ಗೆ ಸಹಜವಾಗಿಯೇ ಆತಂಕದಲ್ಲಿ ಇರುತ್ತಾನೆ. ಇಂಥ ವ್ಯಕ್ತಿಗೆ ಸೋಂಕು ನೆಗೆಟಿವ್ ಬಂದಿದೆ ಎಂಬ ಮಾಹಿತಿ ನೀಡಿದರೆ ಆತ ನಿರಾಳನಾಗುತ್ತಾನೆ. ಇಲ್ಲದಿದ್ದರೆ ಏನಾಗುತ್ತೋ ಏನೋ ಎಂಬ ಭಯದಲ್ಲೇ ಬದುಕುವಂತಾಗುತ್ತದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿಯೂ ಸಾಕಷ್ಟು ಆಕ್ಷೇಪಗಳು ಕೇಳಿ ಬಂದಿದ್ದವು. ನೆಗೆಟಿವ್ ವರದಿ ಬಂದಾಗ ಏಕೆ ಮಾಹಿತಿ ನೀಡುವುದಿಲ್ಲ ಎಂದು ಪ್ರಶ್ನೆ ಮಾಡಲಾಗುತ್ತಿತ್ತು. ಇದನ್ನು ಮನಗಂಡ ಆರೋಗ್ಯ ಇಲಾಖೆಯು ಇದೀಗ ನೆಗೆಟಿವ್ ವರದಿ ಬಂದಾಗಲೂ ಕೂಡಾ ಮಾಹಿತಿ ನೀಡುವಂತೆ ಸುತ್ತೋಲೆ ಹೊರಡಿಸಿದೆ.












Click it and Unblock the Notifications