Gram Panchayat; ತೆರಿಗೆ ಕಟ್ಟಿ ಶೇ5ರಷ್ಟು ರಿಯಾಯಿತಿ ಪಡೆಯಿರಿ
ಬೆಂಗಳೂರು, ಮೇ 14: ಮಹಾನಗರ ಪಾಲಿಕೆಗಳಲ್ಲಿ ಆಸ್ತಿ ತೆರಿಗೆಯನ್ನು ಸಕಾಲಕ್ಕೆ ಕಟ್ಟುವವರಿಗೆ ಸರ್ಕಾರ ರಿಯಾಯಿತಿ ನೀಡುತ್ತದೆ. ಈ ಮೂಲಕ ಎಲ್ಲರೂ ಸಕಾಲಕ್ಕೆ ತೆರಿಗೆ ಕಟ್ಟುವಂತೆ ಪ್ರೋತ್ಸಾಹಿಸುತ್ತದೆ. ಈಗ ಗ್ರಾಮ ಪಂಚಾಯಿತಿಗಳಿಗೂ ಈ ರಿಯಾಯಿತಿ ಘೋಷಣೆ ಮಾಡಲಾಗಿದೆ.
ಹೌದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ಈ ಘೋಷಣೆ ಮಾಡಿದೆ. ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆಯನ್ನು ಏಕ ಕಾಲಕ್ಕೆ ಪಾವತಿಸಿ ಶೇ 5ರಷ್ಟು ರಿಯಾಯಿತಿ ಪಡೆಯಿರಿ ಎಂದು ಹೇಳಿದೆ.

ಪಂಚಾಯತ್ ರಾಜ್ ಇಲಾಖೆ ಆಸ್ತಿ ತೆರಿಗೆ ಸಂಗ್ರಹಕ್ಕೆ ಹೆಚ್ಚು ಆದ್ಯತೆ ನೀಡಿದೆ. ಆದ್ದರಿಂದ ಎಲ್ಲಾ ಜನರು ತೆರಿಗೆ ಪಾವತಿ ಮಾಡಲು ಅನುಕೂಲವಾಗುವಂತೆ ರಿಯಾಯಿತಿ ಘೋಷಣೆ ಮಾಡಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದೆ.
ಅಂತಿಮ ದಿನಾಂಕ: ಆರ್ಥಿಕ ವರ್ಷದ ಪ್ರಾರಂಭದ ಮೂರು ತಿಂಗಳ (ಏಪ್ರಿಲ್‌ನಿಂದ ಜೂನ್ ಅಂತ್ಯ) ಅಂದರೆ ದಿನಾಂಕ 30/6/2024ರ ಒಳಗೆ ತೆರಿಗೆ ಪಾವತಿಸಿ ಶೇ 5ರಷ್ಟು ರಿಯಾಯಿತಿ ಪಡೆಯಿರಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಿಳಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮ ಪಂಚಾಯಿತಿಗಳಲ್ಲಿ ವೈಜ್ಞಾನಿಕ ಮತ್ತು ಏಕರೂಪ ಆಸ್ತಿ ತೆರಿಗೆ ಸಂಗ್ರಹಕ್ಕೆ ಬಿಗಿಯಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೃಷಿ ಜಮೀನು ಹೊರತುಪಡಿಸಿದ ಆಸ್ತಿಗಳಿಗೆ ಗ್ರಾಮ ಪಂಚಾಯಿತಿಗಳು ಆಸ್ತಿ ತೆರಿಗೆಯನ್ನು ವಿಧಿಸುತ್ತವೆ.
ಗ್ರಾಮ ಪಂಚಾಯಿತಿಗಳಲ್ಲಿ ವೈಜ್ಞಾನಿಕವಾಗಿ ಆಸ್ತಿ ತೆರಿಗೆ ಸಂಗ್ರಹ ಮಾಡಲು ಪಂಚತಂತ್ರ 2.0 ತಂತ್ರಾಶವನ್ನು ಅನುಷ್ಠಾನಕ್ಕೆ ತರಲು 2023ರಲ್ಲಿ ಇಲಾಖೆ ಅಧಿಕಾರಿಗಳು ಸರಣಿ ಸಭೆಗಳನ್ನು ನಡೆಸಿದ್ದರು.
2022ರಲ್ಲಿಯೇ ಗ್ರಾಮ ಪಂಚಾಯಿತಿಗಳ ಆಸ್ತಿ ತೆರಿಗೆಯನ್ನು ಸರಿಯಾಗಿ ಸಂಗ್ರಹ ಮಾಡುವ ಮೂಲಕ ಪಂಚಾಯಿತಿಗಳ ವರಮಾನವನ್ನು ಹೆಚ್ಚಳ ಮಾಡುವ ಚರ್ಚೆ ನಡೆದಿತ್ತು. ಆಗ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಆಸ್ತಿಗಳನ್ನು ವ್ಯಾಪ್ತಿಗೆ ತರಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.
ಗ್ರಾಮ ಪಂಚಾಯಿತಿಗಳ ಕೃಷಿಯೇತರ ಆಸ್ತಿಗಳಲ್ಲಿ ಹೆಚ್ಚಿನ ಸ್ವತ್ತುಗಳು ತೆರಿಗೆ ಪಟ್ಟಿಗೆ ಸೇರಿರಲಿಲ್ಲ. ಆದ್ದರಿಂದ ಪಂಚತಂತ್ರ 2.0 ತಂತ್ರಾಶದ ಮೂಲಕ ಆಸ್ತಿ ಸಂಗ್ರದ ಪ್ರಾಯೋಗಿಕ ಅನುಷ್ಠಾನಕ್ಕೆ ತೊಂದರೆ ಉಂಟಾಗಿತ್ತು. ಆಸ್ತಿಗಳನ್ನು ಸೇರಿಸಿ ಆಸ್ತಿ ತೆರಿಗೆ ಸಂಗ್ರಹ ಮಾಡಿದ ಬಳಿಕ ಪಂಚಾಯಿತಿಗಳ ಆದಾಯದಲ್ಲಿ ಎರಡು, ಮೂರು ಪಟ್ಟು ಹೆಚ್ಚಳ ಕಂಡುಬಂದಿತ್ತು.
ರಾಜ್ಯದಲ್ಲಿ ಸುಮಾರು 5,983 ಗ್ರಾಮ ಪಂಚಾಯಿತಿಗಳಿವೆ. 1.25 ಕೋಟಿ ಸ್ವತ್ತುಗಳು ಆಸ್ತಿ ತೆರಿಗೆ ಪಟ್ಟಿಯಲ್ಲಿವೆ ಎಂದು ಅಂದಾಜಿಸಲಾಗಿತ್ತು. 1 ಕೋಟಿ ಸ್ವತ್ತುಗಳು ಆಸ್ತಿ ತೆರಿಗೆಯಿಂದ ಹೊರಗುಳಿದಿವೆ. ಅವುಗಳನ್ನು ಪಟ್ಟಿಗೆ ಸೇರಿಸಿ ಆಸ್ತಿ ತೆರಿಗೆ ಸಂಗ್ರಹ ಪ್ರಾರಂಭಿಸಿ, ಆದಾಯ ಹೆಚ್ಚಳಕ್ಕೆ ಸರ್ಕಾರ ಮುಂದಾಗಿತ್ತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಸಹ ಗ್ರಾಮ ಪಂಚಾಯಿತಿಗಳ ಆಸ್ತಿ ತೆರಿಗೆ ಸಂಗ್ರಹದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದ್ದರು. ಅಲ್ಲದೇ ಆಸ್ತಿ ತೆರಿಗೆ ಸಂಗ್ರಹ, ಆಸ್ತಿಗಳ ರಕ್ಷಣೆ ಮತ್ತು ನಿರ್ವಹಣೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತದೆ ಎಂದು ಹೇಳಿದ್ದರು.
2019ರಲ್ಲಿಯೇ ಎಲ್ಲಾ ಆಸ್ತಿಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ತರಬೇಕು ಎಂದು ಆದೇಶಿಸಲಾಗಿತ್ತು. ಆದರೆ ಆಸ್ತಿ ಗುರುತಿಸುವಿಕೆ, ಅದನ್ನು ಪಂಚಾಯಿತಿ ತೆರಿಗೆ ಪಾವತಿ ವ್ಯಾಪ್ತಿಗೆ ತರುವುದು ವಿಳಂಬವಾಗಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆಗೆ ಹೆಚ್ಚು ಗಮನವನ್ನು ನೀಡಿದೆ.
ಆಸ್ತಿ ತೆರಿಗೆ ಸಂಗ್ರಹ ವೈಜ್ಞಾನಿಕವಾಗಿ ನಡೆದರೆ ಗ್ರಾಮ ಪಂಚಾಯಿತಿಗಳ ವರಮಾನ ಹೆಚ್ಚಾಗಲಿದೆ. ಆಗ ಬಹುತೇಕ ಪಂಚಾಯಿತಿಗಳ ನಿರ್ವಹಣೆ ವೆಚ್ಚ ಸ್ವಂತ ಮೂಲದಿಂದಲೇ ಸಂಗ್ರಹವಾಗಲಿದೆ ಎಂದು ಚರ್ಚೆಗಳು ನಡೆದಿತ್ತು.












Click it and Unblock the Notifications