ಗ್ರಾಮಗಳಲ್ಲಿ ಮನೆ ಆರೈಕೆ ವ್ಯವಸ್ಥೆ ಇಲ್ಲದಿದ್ದರೆ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲು: ಸುಧಾಕರ್
ಬೆಂಗಳೂರು, ಮೇ 19: ಗ್ರಾಮೀಣ ಪ್ರದೇಶಗಳಲ್ಲಿ ಮನೆ ಆರೈಕೆ ವ್ಯವಸ್ಥೆ ಇಲ್ಲದಿದ್ದರೆ, ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗುತ್ತದೆ. ಸ್ಥಳೀಯ ಮಟ್ಟದ ಟಾಸ್ಕ್ ಫೋರ್ಸ್ ಈ ಕಾರ್ಯನಿರ್ವಹಿಸಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಬೂತ್ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಸ್ಥಳೀಯರು, ಸಂಘಟನೆಗಳ ಮುಖಂಡರಿದ್ದು, ಅವರು ಕೋವಿಡ್ ನಿರ್ವಹಣೆ ಮಾಡುತ್ತಾರೆ. ರೋಗಿಗೆ ಮನೆ ಆರೈಕೆ ಸೌಲಭ್ಯಗಳಿಲ್ಲದಿದ್ದರೆ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಿಸಲಾಗುತ್ತದೆ ಎಂದರು.
ಕೊರೊನಾ ಲಸಿಕೆ ಕುರಿತು ಮಾಹಿತಿ ಹಂಚಿಕೊಂಡ ಅವರು, 2 ಕೋಟಿ ಕೋವಿಶೀಲ್ಡ್ ಲಸಿಕೆ ಖರೀದಿಸಲು ಸೆರಂ ಸಂಸ್ಥೆಗೆ ಆರ್ಡರ್ ನೀಡಲಾಗಿದೆ. ಈ ಪೈಕಿ 2 ಲಕ್ಷ ಡೋಸ್ ರಾಜ್ಯಕ್ಕೆ ಬಂದಿದೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಹಾಗೂ ಮೊದಲ ಡೋಸ್ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಈವರೆಗೆ 1,11,26,340 ಡೋಸ್ ಲಸಿಕೆ ನೀಡಿದೆ. ರಾಜ್ಯ ಸರ್ಕಾರದಿಂದ ನೇರವಾಗಿ 9.50 ಲಕ್ಷ ಡೋಸ್ ಕೋವಿಶೀಲ್ಡ್, 1,44,170 ಕೋವ್ಯಾಕ್ಸಿನ್ ಖರೀದಿ ಸೇರಿ ಒಟ್ಟು 1,22,20,510 ಡೋಸ್ ಲಸಿಕೆ ರಾಜ್ಯಕ್ಕೆ ದೊರೆತಿದೆ. ಈವರೆಗೆ 1,13,61,234 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಅಕ್ಟೋಬರ್, ನವೆಂಬರ್ ಒಳಗೆ ರಾಜ್ಯದ ಎಲ್ಲರಿಗೂ ಲಸಿಕೆ ನೀಡಲು ಪ್ರಯತ್ನಿಸಲಾಗುತ್ತಿದೆ. ಭಾರತ್ ಬಯೋಟೆಕ್ ಘಟಕ ನಮ್ಮ ರಾಜ್ಯದಲ್ಲೇ ಇದ್ದು, ಅಲ್ಲಿಂದಲೂ ಲಸಿಕೆ ಸಿಗುವ ಭರವಸೆ ದೊರೆತಿದೆ. ಸ್ಪುಟ್ನಿಕ್ ಲಸಿಕೆ ಕೂಡ ನಮ್ಮ ರಾಜ್ಯದಲ್ಲೇ ಉತ್ಪಾದನೆಯಾಗಲಿದ್ದು, ಬೇಗ ಲಸಿಕೆ ಸಿಗುವ ವಿಶ್ವಾಸವಿದೆ ಎಂದರು.
ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ 1,050 ವೈಲ್ ಗಳನ್ನು ಕೇಂದ್ರ ಸರ್ಕಾರ ನೀಡಿದೆ. ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದು, ಬೇಗ 500 ವೈಲ್ ನೀಡಲು ಮನವಿ ಮಾಡಲಾಗಿದೆ. ಈ ಸೋಂಕು ತಡೆಯಲು ಟಾಸ್ಕ್ ಫೋರ್ಸ್ ಸಮಿತಿ ರಚಿಸಿ ಕ್ರಮ ವಹಿಸಲಾಗಿದೆ ಎಂದು ಹೇಳಿದರು.












Click it and Unblock the Notifications