'ಶಕ್ತಿ' ಯೋಜನೆ; ಪ್ರಯಾಣಿಕರ ಸುರಕ್ಷತೆಗೆ ಮಾರ್ಗಸೂಚಿಗಳು
ಬೆಂಗಳೂರು, ಜೂನ್ 14; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ 5 ಗ್ಯಾರಂಟಿಗಳಲ್ಲಿ 'ಶಕ್ತಿ' ಸಹ ಒಂದು. ರಾಜ್ಯದ ಮಹಿಳೆಯರು ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಯೋಜನೆ ಇದಾಗಿದೆ. ಭಾನುವಾರ ಈ ಯೋಜನೆಗೆ ಚಾಲನೆ ಸಿಕ್ಕಿದ್ದು, ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿದೆ.
ಸರ್ಕಾರವೇ ನೀಡಿದ ಮಾಹಿತಿಯಂತೆ 'ಶಕ್ತಿ' ಯೋಜನೆಯಡಿ 12/6/2023ರಂದು 41,34,726 ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಸಂಚಾರ ನಡೆಸಿದ್ದಾರೆ. ಇದರಲ್ಲಿ ಕೆಎಸ್ಆರ್‌ಟಿಸಿ ಬಸ್‌ನಲ್ಲಿ 11,40,057 ಪ್ರಯಾಣಿಕರು ಮತ್ತು ಬಿಎಂಟಿಸಿ ಬಸ್‌ನಲ್ಲಿ 17,57,887 ಮಹಿಳೆಯರು ಸಂಚರಿಸಿದ್ದಾರೆ.

'ಶಕ್ತಿ' ಯೋಜನೆ ಜಾರಿಗೆ ಬಂದ ಬಳಿಕ ಸರ್ಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಆದ್ದರಿಂದ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ.
ಏಕೆ ಬಂತು ಮಾರ್ಗಸೂಚಿ?; ಕೆಎಸ್ಆರ್‌ಟಿಸಿಯ ಈ ಟಿಪ್ಪಣಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ಈ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಚಾಲಕ, ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ.
ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆಯು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ. ದಿನಾಂಕ 12/06/2023ರಂದು ವಾ.ಕ.ರ.ಸಾ ಸಂಸ್ಥೆಯ ಹಾವೇರಿ ವಿಭಾಗದ ಹಾನಗಲ್ ಘಟಕದ ವಾಹನವು ಕಾರ್ಯಾಚರಣೆಯಲ್ಲಿರುವಾಗ ಓರ್ವ ವಿದ್ಯಾರ್ಥಿನಿಯು ವಾಹನದಿಂದ ಕೆಳಗೆ ಬಿದ್ದು, ತಲೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿರುವಂತಹ ದುರಾದೃಷ್ಟಕರ ಘಟನೆಯು ವರದಿಯಾಗಿರುತ್ತದೆ ಎಂದು ತಿಳಿಸಿದೆ.
ಈ ಬಗ್ಗೆ ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು ತೀವ್ರ ವಿಷಾದವನ್ನು ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಈ ರೀತಿಯ ಅವಘಡಗಳು ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ನಡೆಯದಂತೆ ಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಅದರ ಅನ್ವಯ ಕರ್ತವ್ಯ ನಿರ್ವಹಿಸುತ್ತಿರುವ ಚಾಲನಾ ಸಿಬ್ಬಂದಿಗಳಿಗೆ ಈ ಕೆಳಕಂಡಂತೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಸೂಚನೆ ಕೊಡಲಾಗಿದೆ.
ಸೂಚನೆಗಳು
* ಚಾಲನಾ ಸಿಬ್ಬಂದಿಗಳು ವಾಹನವನ್ನು ಘಟಕದಿಂದ ಕಾರ್ಯಾಚರಣೆಗೆ ತೆಗೆದುಕೊಂಡು ಹೋಗುವ ಮೊದಲು ವಾಹನದ ಬಾಗಿಲುಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು
* ಪ್ರತಿಯೊಂದು ಬಸ್ ನಿಲ್ದಾಣಗಳಲ್ಲಿ ವಾಹನದ ನಿರ್ವಾಹಕರು ವಾಹನದ ಹಿಂದಿನ ಬಾಗಿಲನ್ನು ಮುಚ್ಚಿರುವ ಬಗ್ಗೆ ಖಾತ್ರಿಪಡಿಸಿಕೊಂಡು ಚಾಲಕರಿಗೆ ಸೂಚನೆ ನೀಡಿದ ನಂತರವೇ ಚಾಲಕರು ವಾಹನವನ್ನು ಚಾಲನೆ ಮಾಡುವುದು
* ವಾಹನದ ಫುಟ್‌ಬೋರ್ಡ್‌ನಲ್ಲಿ ಪ್ರಯಾಣಿಕರು ನಿಂತು ಪ್ರಯಾಣಿಸಲು ಅವಕಾಶ ನೀಡದಂತೆ ಕ್ರಮ ಕೈಗೊಳ್ಳುವುದು
* ಚಾಲಕರು ವಾಹನದ ಮುಂದಿನ/ ಹಿಂದಿನ ಬಾಗಿಲನ್ನು ಮುಚ್ಚಿರುವ ಬಗ್ಗೆ ಖಾತ್ರಿಪಡಿಸಿಕೊಂಡು ವಾಹನ ಚಾಲನೆ ಮಾಡುವುದು
* ಬಸ್ ನಿಲ್ದಾಣ ತಲುಪುವ ಮುಂಚೆ ವಾಹನದ ಬಾಗಿಲನ್ನು ತೆರೆಯದೇ, ಬಸ್ ನಿಲ್ದಾಣ/ ನಿಲುಗಡೆ ಸ್ಥಳದಲ್ಲಿ ಬಸ್ ನಿಲ್ಲಿಸಿದ ನಂತರ ಬಾಗಿಲನ್ನು ತೆರೆದು ಪ್ರಯಾಣಿಕರನ್ನು ಇಳಿಸುವುದು.
ಶಕ್ತಿ ಯೋಜನೆಯಡಿ ಉಚಿತವಾಗಿ ಮಹಿಳೆಯರು ಪ್ರಯಾಣ ಮಾಡಬಹುದು. ಆದರೆ ಶೂನ್ಯ ದರದ ಟಿಕೆಟ್ ಪಡೆಯಬೇಕಿದೆ. ಉಚಿತ ಪ್ರಯಾಣಕ್ಕೆ ಗುರುತಿನ ಚೀಟಿ ಪ್ರದರ್ಶನ ಕಡ್ಡಾಯವಾಗಿದೆ. ಸಾರಿಗೆ ಸಂಸ್ಥೆಗಳು ಸ್ಮಾರ್ಟ್ ಕಾರ್ಡ್ ವಿತರಿಸುವವರೆಗೆ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸನ್ಸ್, ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರ ನೀಡಿರುವ ವಾಸಸ್ಥಳದ ಗುರುತಿನ ಚೀಟಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯ ನೀಡಿರುವ ಗುರುತಿನ ಚೀಟಿ ಇವುಗಳಲ್ಲಿ ಒಂದು ದಾಖಲೆ ಅಥವ ಮೊಬೈಲ್‌ನಲ್ಲಿರುವ ದಾಖಲೆ ತೋರಿಸಿ ಶೂನ್ಯ ಮೊತ್ತದ ಟಿಕೆಟ್ ಪಡೆದು ಪ್ರಯಾಣ ಮಾಡಬಹುದಾಗಿದೆ.












Click it and Unblock the Notifications