ಸಾಮಾನ್ಯ ಕಾರ್ಯಕರ್ತನಿಗೆ ಬೆಳಗಾವಿ ಟಿಕೆಟ್: ಸತೀಶ್ ಜಾರಕಿಹೊಳಿ
ಬೆಳಗಾವಿ, ಫೆಬ್ರವರಿ 24: ಲೋಕಸಭೆ ಚುನಾವಣೆಗೆ ಕೇವಲ ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ. ಇತ್ತ ಮೈತ್ರಿಯಾಗಿರುವ ಬಿಜೆಪಿ-ಜೆಡಿಎಸ್ ಹಾಗೂ ಆಡಳಿತರೂಢ ಕಾಂಗ್ರೆಸ್ ಲೋಕ ಸಮರಕ್ಕೆ ಸಿದ್ದತೆ ನಡೆಸಿದ್ದು, ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ಕಾಂಗ್ರೆಸ್ ಇದೆ.
ಇತ್ತ ಕುಂದ ನಗರಿ ಬೆಳಗಾವಿಯನ್ನ ಈ ಬಾರೀ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್, ಸಚಿವ ಸತೀಶ್ ಜಾರಕಿಹೊಳಿ ಅವರನ್ನ ಕಣಕ್ಕಿಳಿಸಲು ಚಿಂತನೆ ನಡೆಸಿದ್ದು, ಲೋಕಸಭಾ ಚುಣಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಾನಾಗಲಿ ಅಥವಾ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನನ್ನ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಯಾಗಲಿ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ , ಜಾರಕಿಹೊಳಿ ಕುಟುಂಬದ ಯಾರನ್ನೂ ಕಣಕ್ಕಿಳಿಸುವ ಯೋಚನೆ ಇಲ್ಲ. ನಾವು ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸಿ ಚುನಾವಣೆ ಎದುರಿಸುತ್ತೇವೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನನ್ನನ್ನು ಕಣಕ್ಕಿಳಿಸಲು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆದಿರುವುದು ನಿಜ. ಆದರೆ ನನಗೆ ಆಸಕ್ತಿಯಿಲ್ಲ ಎಂದು ಹೇಳಿದರು.
ಇನ್ನೂ ನಮ್ಮ ಪಕ್ಷದಿಂದ ಬೆಳಗಾವಿ ಮತ್ತು ಚಿಕ್ಕೋಡಿ ಎರಡು ಸ್ಥಾನಗಳಲ್ಲಿ ಹಲವಾರು ಆಕಾಂಕ್ಷಿಗಳಿದ್ದು, ಹೆಚ್ಚು ಜನಪ್ರಿಯತೆ ಗಳಿಸಿರುವ ಇಬ್ಬರು ಉತ್ತಮ ಅಭ್ಯರ್ಥಿಗಳನ್ನು ಪಕ್ಷದ ಸ್ಥಳೀಯ ಘಟಕ ಆಯ್ಕೆ ಮಾಡುತ್ತದೆ. ಖಂಡಿತವಾಗಿಯೂ ಅಭ್ಯರ್ಥಿಗಳ ನಾಮನಿರ್ದೇಶನವು ಜಾತಿ ಲೆಕ್ಕಾಚಾರಗಳನ್ನು ಆಧರಿಸಿರುತ್ತದೆ. ಆದರೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಸಮುದಾಯದಲ್ಲಿ ಮಾತ್ರವಲ್ಲದೆ ಇತರ ಸಮುದಾಯಗಳಲ್ಲಿಯೂ ಜನಪ್ರಿಯರಾಗಬೇಕು ಎಂದು ತಿಳಿಸಿದರು.
ಸಚಿವ ಸತೀಶ್ ಜಾರಕಿಹೊಳಿ ಸ್ಪರ್ಧೆಯಿಂದ ಬಿಜೆಪಿ ಭದ್ರ ಕೋಟೆ ಛಿದ್ರ ಮಾಡಬಹುದು ಎನ್ನುವ ಲೆಕ್ಕಾಚಾರವನ್ನ ಕಾಂಗ್ರೆಸ್ ನಾಯಕರು ಹಾಕಿಕೊಂಡಿದ್ದು, ಬೆಳಗಾವಿಯಿಂದ ಕಣಕ್ಕಿಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ತಂತ್ರಗಾರಿಕೆಯನ್ನ ನಡೆಸಿದ್ದಾರೆ. ಇನ್ನೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ರು. ಪ್ರಿಯಾಂಕಾ ಅವರಿಗೆ ಟಿಕೆಟ್ ಕೊಟ್ಟರೆ ಸತೀಶ್ ಜಾರಕಿಹೊಳಿ ವರ್ಚಸ್ಸಿನ ಮೇಲೆ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರವಿತ್ತು. ಇನ್ನೊಂದೆಡೆ, ಪ್ರಿಯಾಂಕಾ ಸ್ಪರ್ಧೆ ಮಾಡಿದರೆ ಪಕ್ಷಾತೀತವಾಗಿ ಜಾರಕಿಹೊಳಿ ಸಹೋದರರು ಬೆಂಬಲಿಸಿ ಗೆಲ್ಲಿಸುತ್ತಾರೆ ಎನ್ನುವ ಲೆಕ್ಕಾಚಾರವೂ ಇತ್ತು. ಆದರೆ, ಈ ಬಾರೀ ಸತೀಶ್ ಜಾರಕಿಹೊಳಿ ಅವರನ್ನ ಕಣಕ್ಕಿಳಿಸುವ ಮೂಲಕ ಬೆಳಗಾವಿಯನ್ನ ಗೆಲ್ಲುವ ಲೆಕ್ಕಾಚಾರವನ್ನ ಕೈ ಪಾಳಯ ಹಾಕಿಕೊಂಡಿದೆ.












Click it and Unblock the Notifications