ತಂದೆ-ತಾಯಿಯನ್ನು ಭೇಟಿಯಾದ ಪರುಶರಾಮ್ ವಾಘ್ಮೋರೆ
ಬೆಂಗಳೂರು, ಜೂನ್ 24 : ಎಸ್‌ಐಟಿ ವಶದಲ್ಲಿರುವ ಪರುಶರಾಮ್ ವಾಘ್ಮೋರೆ ಭಾನುವಾರ ಪೋಷಕರನ್ನು ಭೇಟಿ ಮಾಡಿದರು. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪರುಶರಾಮ್ ವಾಘ್ಮೋರೆ ವಿಚಾರಣೆಯನ್ನು ಎಸ್‌ಐಟಿ ನಡೆಸುತ್ತಿದೆ.
ಭಾನುವಾರ ಎಸ್‌ಐಟಿ ಕಚೇರಿಯಲ್ಲಿ ಪರುಶರಾಮ್ ವಾಘ್ಮೋರೆ ತಂದೆ ಅಶೋಕ್ ವಾಘ್ಮೋರೆ ಮತ್ತು ತಾಯಿ ಜಾನಕಿಬಾಯಿ ಅವರನ್ನು ಭೇಟಿ ಮಾಡಿದರು. ತಂದೆ ತಾಯಿಯನ್ನು ನೋಡಿದ ಅಶೋಕ್ ಕಣ್ಣೀರು ಸುರಿಸಿದರು. ತಾಯಿ ಕಚೇರಿಯಲ್ಲಿ ಗೋಳಾಡಿದರು.
ಕಳೆದ 10 ದಿನಗಳಿಂದ ಪರುಶರಾಮ್ ವಾಘ್ಮೋರೆ ಪೋಷಕರನ್ನು ನೋಡಬೇಕು ಎಂದು ಹಠ ಹಿಡಿದಿದ್ದರು. ಎಸ್‌ಐಟಿ ಅಧಿಕಾರಿಗಳು ಕಳೆದ ವಾರ ಪೋಷಕರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದರು.

ಪರುಶರಾಮ್ ವಾಘ್ಮೋರೆ ಬಂಧನದ ಬಳಿಕ ತಾಯಿ ಜಾನಕಿಬಾಯಿ ಅಸ್ವಸ್ಥಗೊಂಡಿದ್ದರು. ಅವರ ಆರೋಗ್ಯ ಸ್ವಲ್ಪ ಸುಧಾರಿಸಿದ ಬಳಿಕ ಇಂದು ಎಸ್‌ಐಟಿ ಕಚೇರಿಯಲ್ಲಿ ಅವರು ಮಗನನ್ನು ನೋಡಿ ಕಣ್ಣೀರಿಟ್ಟರು.
26 ವರ್ಷದ ಪರುಶರಾಮ್ ವಾಘ್ಮೋರೆ ಮೂಲತಃ ಸಿಂಧಗಿಯವನು. ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ್ದು ತಾನೇ ಎಂದು ಈಗಾಗಲೇ ಆತ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಈಗ ಆತ ಎಸ್‌ಐಟಿ ವಶದಲ್ಲಿದ್ದು, ಎಸ್‌ಐಟಿ ತಂಡ ಆತನ ವಿಚಾರಣೆ ನಡೆಸುತ್ತಿದೆ.












Click it and Unblock the Notifications