ಡಿವಿಎಸ್ ಬರ್ತ್ ಡೇ ಪಾರ್ಟಿ ಹೇಳಿಕೆಗೆ ಸಿದ್ದು, ಪರಂ ಖಂಡನೆ
ಬೆಂಗಳೂರು, ಆ.5 : "ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಬರ್ತ್ ಡೇ ಪಾರ್ಟಿ ರಾಜ್ಯ ಸರ್ಕಾರದ ಡೆತ್ ಡೇ ಪಾರ್ಟಿಯಾಗಿದೆ" ಎಂಬ ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿಕೆಗೆ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದಾನಂದ ಗೌಡರು ಮೊದಲು ಸಂಸ್ಕೃತಿ ಕಲಿತುಕೊಳ್ಳಲಿ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹುಟ್ಟುಹಬ್ಬ ಆಚರಿಸುವ ಸಂದರ್ಭದಲ್ಲಿ ಈ ರೀತಿ ಮಾತನಾಡುವುದು ಸರಿಯಲ್ಲ. ಸದಾನಂದ ಗೌಡರು ಸಂಸ್ಕೃತಿ ಕಲಿತುಕೊಳ್ಳಲಿ ಎಂದು ಸಲಹೆ ನೀಡಿದರು. ನಾನು ಪರಮೇಶ್ವರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಪರಮೇಶ್ವರ್ ಹೇಳಿದ್ದೇನು : ಡಿ.ವಿ.ಸದಾನಂದ ಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ "ಸದಾನಂದ ಗೌಡರನ್ನು ಸುಸಂಸ್ಕೃತರೆಂದು ಭಾವಿಸಿದ್ದೇ. ಆದರೆ, ಈ ಹೇಳಿಕೆ ನಂತರ ಅವರ ಮೇಲಿಟ್ಟಿದ್ದ ಗೌರವ ಹೋಗಿದೆ". ಎಂದು ಹೇಳಿದ್ದಾರೆ.
ಸದಾನಂದ ಗೌಡರು ಹೇಳಿದ್ದೇನು? : ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಅವರು, " ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕ್ಕಾಗಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ನಡುವೆ ಆಂತರಿಕ ಕಚ್ಚಾಟವಾಗುತ್ತಿದೆ. ಪರಮೇಶ್ವರ್ ಅವರ ಬರ್ತ್ ಡೇ ಪಾರ್ಟಿ ರಾಜ್ಯ ಸರ್ಕಾರದ ಡೆತ್ ಡೇ ಪಾರ್ಟಿಯಾಗಿದೆ" ಎಂದು ಹೇಳಿದ್ದರು.
ಅಂದಹಾಗೆ ಆ.6ರ ಬುಧುವಾರ ಕೆಪಿಸಿಸಿ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಡಾ.ಜಿ.ಪರಮೇಶ್ವರ್ ಅವರ 55ನೇ ಹುಟ್ಟುಹಬ್ಬ. ಹುಟ್ಟು ಹಬ್ಬದ ಸಂದರ್ಭದಲ್ಲಿ ಸದಾನಂದ ಗೌಡರು ನೀಡಿದ ಹೇಳಿಕೆ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.


Click it and Unblock the Notifications
