ಶೀಘ್ರದಲ್ಲೇ ಪಂಚಾಯತ್ ಚುನಾವಣೆ: ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
ಬೆಂಗಳೂರು: ಪಂಚಾಯತಿ ಚುನಾವಣೆಯನ್ನು ಆದಷ್ಟು ಶೀಘ್ರವಾಗಿ ನಡೆಸಲು ತೀರ್ಮಾನಿಸಿದೆ. ಹಲವಾರು ಪಂಚಾಯ್ತಿಗಳು ಸುಪ್ರೀಂ ಕೋರ್ಟಿಗೆ ಹೋಗುವಂತೆ ರಾಜ್ಯ ಸರ್ಕಾರವನ್ನು ಕೋರಿವೆ. ಒಂದೆರಡು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಮಾಡಲಿದೆ ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದರು.
ಸಚಿವ ಸಂಪುಟ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಹೆಚ್ ಕೆ ಪಾಟೀಲ್ ಅವರು, ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿರುವ ಬಗ್ಗೆ ಸಚಿವ ಸಂಪುಟ ಸಭೆ ಚರ್ಚೆ ನಡೆಸಿದ್ದು, ಇದರ ಬದಲಿಗೆ ತಂದಿರುವ , ವಿಬಿಜಿ, ರಾಮ್ ಜಿ" ಯೋಜನೆಯ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದರು.

ಜನರ ನ್ಯಾಯಾಲಯಕ್ಕೂ ವಿಬಿಜಿ, ರಾಮ್ ಜಿ" ಯೋಜನೆಯ ತೆಗೆದುಕೊಂಡು ಹೋಗಲು ನಿರ್ಣಯಿಸಲಾಗಿದೆ ಎಂದ ಅವರು ಸಂವಿಧಾನದ 73 ನೇ ತಿದ್ದುಪಡಿಯಾದ ನಂತರ ದೇಶದಲ್ಲಿ ವಿಕೇಂದ್ರೀಕರಣವಾಗಿದೆ. ಈ ಯೋಜನೆಯಿಂದ ವಿಕೇಂದ್ರೀಕರಣಕ್ಕೆ ಕೊಡಲಿ ಏಟು ಬಿದ್ದಿದೆ. ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳುವ ಕೆಲಸವನ್ನು MNREGA ವಾಪಸ್ಸು ಪಡೆಯುವ ಮೂಲಕ ಮಾಡಲಾಗಿದೆ ಎಂದರು. MNREGA ಮೂಲಕ ಪಂಚಾಯಿತಿಗಳಲ್ಲಿ ಆಸ್ತಿ ನಿರ್ಮಾಣವಾಗುತ್ತಿತ್ತು. ಈಗ ಕರಾಳ ಕಾನೂನು ತಂದು ಕಾರ್ಮಿಕರು ಗುತ್ತಿಗೆದಾರರು ಮಾಡಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ಕೆಲಸ ಮಾಡಬೇಕಿದೆ.
ಕೂಲಿಕಾರರ ಹಿತ ಕಾಪಾಡುವ ಆಸಕ್ತಿಯನ್ನು ಕೇಂದ್ರ ಸರ್ಕಾರ ತೋರಿಸಿಲ್ಲ . ಬದಲಿಗೆ ಉದ್ಯೋಗದ ಹಕ್ಕನ್ನು ಕಿತ್ತುಕೊಂಡಿದೆ. ಗ್ರಾಮಗಳಲ್ಲಿ ಯಾವ ಕೆಲಸವಾಗಬೇಕೆಂದು ತೀರ್ಮಾನಿಸುವ ಅಧಿಕಾರ ಪಂಚಾಯಿತಿಗಳಿಗಿತ್ತು. ಈಗ ಅದನ್ನು ಸಂಪೂರ್ಣವಾಗಿ ಕಿತ್ತುಕೊಂಡು ಕೆಲಸ ಎಲ್ಲಿ ಆಗಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡುತ್ತದೆ. ಈ ಕರಾಳ ಶಾಸನವನ್ನು ಕರ್ನಾಟಕ ಸರ್ಕಾರ ತೀವ್ರವಾಗಿ ವಿರೋಧಿಸುತ್ತದೆ. ರಾಜಕೀಯವಾಗಿ, ಕಾನೂನಾತ್ಮಕವಾಗಿ ಹಾಗೂ ಜನರ ನ್ಯಾಯಾಲಯದಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು.
ಮೇಲ್ನೋಟಕ್ಕೆ 125 ದಿನ ಕೆಲಸ ನೀಡುವುದು ಎಂದಿದ್ದರೂ , ನಿರ್ದಿಷ್ಟವಾಗಿ ಆಗುವಂತಿಲ್ಲ. ಇದಕ್ಕೆ ಹಣವೆಲ್ಲಿದೆ. ಶೇ.40% ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಭರಿಸಬೇಕಿದೆ. ಭಾರಿ ಪ್ರಮಾಣದ ಆರ್ಥಿಕ ಹೊರೆ ಬೀಳುವಂತಿದ್ದರೆ ಸಂಬಂಧಪಟ್ಟ ರಾಜ್ಯಗಳೊಂದಿಗೆ ಚರ್ಚೆ ಮಾಡಬೇಕು. ಆದರೆ ಹಾಗೆ ಆಗಿಲ್ಲ. 15ನೇ ಹಣಕಾಸು ಆಯೋಗದ ಶಿಫಾರಸುಗಳು ಅನುಷ್ಠಾನಕ್ಕೆ ಬಂದ ನಂತರ ಇದನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ ಎಂದರು.
ಎರಡು ದಿನ ವಿಶೇಷ ಅಧಿವೇಶನ: ಸಿಎಂ
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತೆ ಜಾರಿಗೆ ತರುವಂತೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಲು ಶೀಘ್ರವೇ ವಿದಾನ ಮಂಡಲದ ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಇದು ಬಿಜೆಪಿಯವರ ಹುನ್ನಾರ. ಮನಮೋಹನ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ ಬಂತು.
ಇದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆ. ದಲಿತರು, ಮಹಿಳೆಯರು, ರೈತರಿಗೆ ಉದ್ಯೋಗ ಒದಗಿಸುವುದು ಯೋಜನೆ ಉದ್ದೇಶ. ವರ್ಷದಲ್ಲಿ ನೂರು ದಿನ ಉದ್ಯೋಗ ಅವಕಾಶ ಈ ಯೋಜನೆಯಲ್ಲಿ ಸಿಗುತ್ತಿತ್ತು. ಈ ಉದ್ಯೋಗವನ್ನೇ ಕಸಿಯುವ ಕೆಲಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ. ಉದ್ಯೋಗದ ಹಕ್ಕು ಇಲ್ಲವಾಗಿಸಿದೆ. ಮಹಾತ್ಮ ಗಾಂಧಿಯವರ ಹೆಸರು ತೆಗೆದು ಗೊಂದಲ ಸೃಷ್ಟಿ ಮಾಡುವ ಹುನ್ನಾರ ಇದಾಗಿದೆ. ಈ ಮೂಲಜ ಮತ್ತೆ ಗಾಂಧಿಯವರನ್ನು ಕೊಲೆ ಮಾಡಲಾಗಿದೆ. ಇದು ಸಂಘ ಪರಿವಾರದವರು ಹೇಳಿ ಕೊಟ್ಟಿರುವ ಪಾಠ.
28 ಕೋಟಿ ದಲಿತರಿಗೆ ಇದರಿಂದ ಅನ್ಯಾಯವಾಗಿದೆ. ನಮ್ಮ ಹೋರಾಟ ತೀವ್ರವಾಗಿ ಇರಬೇಕು. ಬಡವರ ಉದ್ಯೋಗದ ಹಕ್ಕು ಕಸಿದುಕೊಂಡವರಿಗೆ ಪಾಠ ಕಲಿಸಬೇಕು. ಬಡವರು ಆರ್ಥಿಕವಾಗಿ ಸಬಲರಾಗುವುದನ್ನು ಸಂಘ ಪರಿವಾರ ಸಹಿಸುವುದಿಲ್ಲ. ಮನ್ರೆಗಾ ಕಾಯಿದೆ ಮತ್ತೆ ಜಾರಿ ಅಗುವ ರೀತಿ ಜನಾಂದೋಲನ ನಡೆಯಬೇಕು. ಪ್ರತಿ ಗ್ರಾಮ ಪಂಚಾಯಿತಿ ಸದಸ್ಯ ನರೇಗಾದಲ್ಲಿ ಕೆಲಸ ಮಾಡುತ್ತಿರುವವರನ್ನ ತಲುಪಬೇಕು.
ಈ ವಿಷಯದ ಬಗ್ಗೆ ಜನರನ್ನೂ ಜಾಗೃತಗೊಳಿಸುವ ಕೆಲಸವನ್ನು ಶಾಸಕರು ಮಾಡಬೇಕು. ನಮ್ಮ ಹೋರಾಟ ಜನಾಂದೋಲನವಾಗಿ ರೂಪುಗೊಳ್ಳುವಂತಹ ವಾತಾವರಣ ನಿರ್ಮಾಣ ಆಗಬೇಕಿದೆ. ಕಾಂಗ್ರೆಸ್ ಜಾರಿಗೆ ತಂದ ಕಾರ್ಯಕ್ರಮವನ್ನು ರದ್ಧು ಮಾಡಿ ಉದ್ಯೋಗದ ಹಕ್ಕು ಕಸಿದುಕೊಂಡಿರುವುದು ಸಂವಿಧಾನ ಬಾಹಿರ ಕೆಲಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.












Click it and Unblock the Notifications