ಲಾಠಿಚಾರ್ಜ್ ಬೆನ್ನಲ್ಲೇ ಸರ್ಕಾರವನ್ನೇ ಬದಲಿಸಲು ಸಜ್ಜಾದ ಪಂಚಮಸಾಲಿ ಸಮುದಾಯ
ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮುದಾಯವು ಬೆಳಗಾವಿಯಲ್ಲಿ ನಡೆಸುತ್ತಿದ್ದ ಹೋರಾಟ ಸದ್ಯ ಉದ್ವಿಗ್ನಗೊಂಡಿದೆ. ನಿನ್ನೆ ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಮಾಡಿರುವ ಲಾಠಿಚಾರ್ಜ್ ಸದ್ಯ ರಾಜ್ಯ ರಾಜಕೀಯದಲ್ಲಿ ಕಿಡಿ ಹಚ್ಚಿದೆ. ಮೀಸಲಾತಿ ಕೇಳಿದರೆ ಲಾಠಿ ಏಟು ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದು, ಸರ್ಕಾರವನ್ನೇ ಬದಲಿಸುವ ಎಚ್ಚರಿಕೆಯನ್ನೂ ಪಂಚಮಸಾಲಿ ಸಮುದಾಯ ನೀಡಿದೆ.
ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ ನಿನ್ನೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಪರಿಸ್ಥಿತಿ ತಿಳಿಗೊಳ್ಳದೆ ಹಿಂಸಾಚಾರದ ರೂಪ ಪಡೆದುಕೊಂಡಿತ್ತು. ಇನ್ನು ಲಾಠಿಚಾರ್ಜ್‌ನಲ್ಲಿ ಹಲವು ಗಂಭೀರ ಗಾಯಗೊಂಡಿದ್ದು, ಹಲವರ ಮೇಲೆ ಎಫ್‌ಐಆರ್ ಕೂಡ ದಾಖಲಾಗಿದೆ. ಸದ್ಯ ಇದೇ ವಿಚಾರ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಮೀಸಲಾತಿ ಹೋರಾಟದ ಮೇಲೆ ಲಾಠಿ ಚಾರ್ಜ್ ಆಗಿರುವ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಅವರು ತಿರುಗಿಬಿದ್ದಿದ್ದಾರೆ. ಮುಂದಿನ 2028ಕ್ಕೆ ನಮಗೆ ಬೇಕಾದ ಸರ್ಕಾರವನ್ನೇ ರಾಜ್ಯದಲ್ಲಿ ತಂದು, ನಮ್ಮ ಮೀಸಲಾತಿ ಪಡೆದುಕೊಳ್ಳುತ್ತೇವೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
ನಾವು ಶಾಂತಿಯುತವಾಗಿಯೇ ಹೋರಾಟ ನಡೆಸುತ್ತಿದ್ದೆವು. ಪ್ರತಿಭಟನಾ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬರಬೇಕು ಎಂದು ಆಗ್ರಹ ಮಾಡಿದ್ದೆವು. ಆದರೆ, ಅಲ್ಲಿಗೆ ಬಂದ ಸಚಿವರ ಮಾತುಗಳು ನಮಗೆ ಅಷ್ಟೇನೂ ಒಪ್ಪುವಂತದ್ದಲ್ಲ. ಇದರಿಂದ ನಾವೆಲ್ಲ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದೆವು. ಆಗ ಎಡಿಜಿಪಿ ಹಾಗೂ ಕಮೀಷನರ್ ಕುತಂತ್ರದಿಂದ ಲಾಠಿ ಚಾರ್ಜ್ ಮಾಡಿಸಿದ್ದಾರೆ. ನನಗಂತೂ ಮುಖ್ಯಮಂತ್ರಿಗಳೇ ಹೇಳಿ ಲಾಠಿ ಚಾರ್ಜ್ ಮಾಡಿಸಿದ್ದಾರಾ ಅನ್ನೋ ಅನುಮಾನವಿದೆ ಎಂದು ಸ್ವಾಮೀಜಿ ಸಂಶಯಪಟ್ಟಿದ್ದಾರೆ.
ಹೋರಾಟಗಾರರ ಕ್ಷಮೆಯಾಚಿಸಿ: ವಿಜಯೇಂದ್ರ
ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ ಅನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಖಂಡಿಸಿದ್ದಾರೆ. ಪಂಚಮಸಾಲಿ ಸಮುದಾಯದ 2ಎ ಪ್ರವರ್ಗದ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟದ ಸ್ವರೂಪದ ಕುರಿತು ಈ ಮುಂಚೆಯೇ ಸರ್ಕಾರದ ಅರಿವಿಗೆ ಬಂದಿದ್ದರೂ ಯಾವುದೇ ಮುಂಜಾಗ್ರತಾ ಕ್ರಮ ವಹಿಸದ ಕಾಂಗ್ರೆಸ್ ಸರ್ಕಾರ ದುರುದ್ದೇಶಪೂರ್ವಕವಾಗಿ ಚಳುವಳಿಯನ್ನು ಹತ್ತಿಕ್ಕುವ ಕೆಲಸ ಮಾಡಿದೆ. ಚಳುವಳಿ ನಿರತ ಅಮಾಯಕರ ಮೇಲೆ ಲಾಠಿಚಾರ್ಜ್ ಪ್ರಯೋಗಿಸಿ ಚಳುವಳಿಗಾರರು ಮಾರಣಾಂತಿಕ ಪೆಟ್ಟು ಅನುಭವಿಸಲು ಕಾರಣವಾಗಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಳೆದ ಒಂದು ವಾರದಿಂದಲೂ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಹೋರಾಟದ ಕುರಿತು ಮಾಹಿತಿಗಳನ್ನು ಒದಗಿಸುತ್ತಲೇ ಬಂದಿದ್ದಾರೆ. ಈ ಹಂತದಲ್ಲಿ ಪೂಜ್ಯರೊಂದಿಗೆ ಸಕಾರಾತ್ಮಕ ಮಾತುಕತೆ ನಡೆಸಿ, ಸಮಸ್ಯೆಗೆ ಪರಿಹಾರ ಹುಡುಕುವ ಮಾರ್ಗೋಪಾಯಗಳನ್ನು ಕಂಡುಹಿಡಿಯದೇ, ಚಳುವಳಿ ತೀವ್ರ ಸ್ವರೂಪ ಪಡೆಯಲು ಕಾರಣವಾಗಿರುವ ಕಾಂಗ್ರೆಸ್ ಸರ್ಕಾರದ ಅಸಮರ್ಥ ನಡೆ ಈ ಹಿಂದಿನ ರೈತ ಚಳುವಳಿಗಳನ್ನು ಬಗ್ಗುಬಡಿದ ಮಾದರಿಯನ್ನು ನೆನಪಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಕೂಡಲೇ ಸರ್ಕಾರ ಈ ಸಂಬಂಧವಾಗಿ ಬೇಜವಾಬ್ದಾರಿಯಿಂದ ವರ್ತಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಿ, ಅಮಾಯಕರ ಮೇಲೆ ಹಲ್ಲೆ ಆಗಿರುವ ಕುರಿತು ಕ್ಷಮೆಯಾಚಿಸಲಿ. ಮಾರಣಾಂತಿಕ ಪೆಟ್ಟು ತಿಂದವರಿಗೆ ಸೂಕ್ತ ಚಿಕಿತ್ಸೆ ಹಾಗೂ ಪರಿಹಾರವನ್ನು ಒದಗಿಸಲಿ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.












Click it and Unblock the Notifications