ಬೆಂಗಳೂರಿನ ಕಾರ್ಮಿಕರಿಗೆ ಗುಡ್‌ನ್ಯೂಸ್: ಮತದಾನದ ದಿನ ವೇತನ ಸಹಿತ ರಜೆ, ನಿಯಮ ಅನ್ವಯ
ಬೆಂಗಳೂರು, ಏಪ್ರಿಲ್ 18: ಮತದಾನ ದೇಶದ ಪ್ರತಿಯೊಬ್ಬರ ಹಕ್ಕು. ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ತಮ್ಮ ನಾಯಕರನ್ನು ಆರಿಸುವ ಹಕ್ಕು ಅರ್ಹತೆ ಹೊಂದಿದ ಪ್ರತಿಯೊಬ್ಬ ಪ್ರಜೆಗಿದೆ. ದೇಶದಲ್ಲಿ ನಡೆಯುವ ಪ್ರತಿ ಚುನಾವಣೆಯಲ್ಲೂ ಜನರು ತಮ್ಮ ಹಕ್ಕು ಚಲಾಯಿಸಬೇಕು. ತಮಗೆ ಬೇಕಾದ ಸರ್ಕಾರ ಅಥವಾ ನಾಯಕನನ್ನು ತಾವೇ ಆರಿಸಬೇಕು.
ಹೀಗಾಗಿ ಮತದಾನದ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬ ಪ್ರಜೆಯೂ ಅರಿಯಬೇಕು. ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಹಬ್ಬ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ. ಈಗಾಗಲೇ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಕರ್ನಾಟಕದಲ್ಲಿ ಹದಿನೆಂಟು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಕೂಡ ರಾಜ್ಯಕ್ಕೆ ಸೂಕ್ತ ಸರ್ಕಾರ ಆರಿಸಲು ಮತದಾನ ಮಾಡಬೇಕಿದೆ.

ಆದರೆ ಹಲವು ಕಾರಣಗಳಿಂದ ಅನೇಕರು ಮತದಾನದಿಂದ ವಂಚಿತರಾಗುತ್ತಾರೆ. ಮುಖ್ಯವಾಗಿ ದಿನಗೂಲಿ ಕಾರ್ಮಿಕರು. ಮೇ 10ಯ ಬುಧವಾರ ಬಂದಿದ್ದು, ವಾರದ ಮಧ್ಯೆ ಚುನಾವಣಾ ದಿನಾಂಕ ಬಂದಿದೆ. ಹೀಗಾಗಿ ಅನೇಕರು ಮತದಾನ ಮಾಡದೇ ತಮ್ಮ ದಿನನಿತ್ಯದ ಕೆಲಸಕ್ಕೆ ತೆರಳುತ್ತಾರೆ. ಅದು ಅನಿವಾರ್ಯ ಕೂಡ. ಯಾಕಂದರೆ ಒಂದು ದಿನದ ವೇತನ ಆ ಕುಟುಂಬಕ್ಕೆ ಅನಿವಾರ್ಯವಾಗಿರುತ್ತದೆ. ಹೀಗಾಗಿ ಸಾಮಾನ್ಯವಾಗಿ ಕಾರ್ಮಿಕರು ದಿನವೂ ಕೆಲಸಗಳಿಗೆ ತೆರಳುತ್ತಾರೆ. ಇದರಿಂದ ಲಕ್ಷಾಂತರ ಜನ ಮತದಾನದಿಂದ ವಂಚಿತರಾಗುತ್ತಾರೆ. ಇಂತವರಿಗೆ ಸದ್ಯ ಸಿಹಿ ಸುದ್ದಿ ಸಿಕ್ಕಿದೆ.
ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆಯ ದಿನ ಬೆಂಗಳೂರಿನ ಕಾರ್ಮಿಕರಿಗೆ ವೇತನ ಸಮೇತ ರಜೆ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣ ಬೆಂಗಳೂರಿನ ಚುನಾವಣಾ ಅಧಿಕಾರಿಗಳು ಈ ನಿರ್ಧಾರಕ್ಕೆ ಬಂದಿದ್ದು, ಮತದಾನದ ದಿನ ಬೆಂಗಳೂರಿನ ಎಲ್ಲಾ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹಾಗೂ ಗಾರ್ಮೆಂಟ್ಸ್ ನೌಕರರಿಗೆ ಸಂಬಳ ಸಹಿತ ರಜೆ ಘೋಷಿಸಲಾಗಿದೆ. ಆದರೆ ಈ ರಜೆಯನ್ನು ದುರುಪಯೋಗ ಪಡಿಸಿಕೊಂಡು ಮತದಾನ ಮಾಡದವರಿಗೆ ಸಂಬಳ ಸಹಿತ ರಜೆ ಪಡೆಯುವ ಹಕ್ಕು ಇಲ್ಲ ಎನ್ನಲಾಗಿದೆ.












Click it and Unblock the Notifications