ಕರ್ನಾಟಕ ಚುನಾವಣೆಗೆ ರಜೆ; ಕೆಎಸ್ಆರ್‌ಟಿಸಿ ಸಿಬ್ಬಂದಿಗೆ ವೇತನ ಸಹಿತ ರಜೆ
ಬೆಂಗಳೂರು, ಮೇ 03; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ಮೇ 10ರಂದು ನಡೆಯಲಿದೆ. ಆದರೆ ಅದಕ್ಕೂ ಮೊದಲು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು/ ಸಿಬ್ಬಂದಿಗಳು ಅಂಚೆ ಮತದಾನ ಮಾಡುತ್ತಿದ್ದಾರೆ. ಇದಕ್ಕಾಗಿ ಅವರಿಗೆ ವೇತನ ಸಹಿತ ರಜೆಯನ್ನು ಸಹ ನೀಡಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಬೆಂಗಳೂರು ಕೇಂದ್ರ ಕಚೇರಿ ಎಲ್ಲಾ ಹಿರಿಯ/ ವಿಭಾಗ ನಿಯಂತ್ರಣಾಧಿಕಾರಿಗಳು, ಕಾರ್ಯವ್ಯವಸ್ಥಾಪಕರು, ಪ್ರಾಂಶುಪಾಲರು, ಕಾರ್ಯನಿರ್ವಾಹಕ ಅಭಿಯಂತರರು, ವೈದ್ಯಾಧಿಕಾರಿಗಳು ಇವರಿಗೆ ಸುತ್ತೋಲೆಯೊಂದನ್ನು ಹೊರಡಿಸಿದೆ.

ಕರ್ನಾಟಕ ಸಾರ್ವತ್ರಿಕ ಚುನಾವಣೆ 2023ರಡಿ ಭಾರತ ಚುನಾವಣಾ ಆಯೋಗವು ಅಗತ್ಯ ಸೇವೆಗಳ ಇಲಾಖೆ ಎಂದು ಗುರುತಿಸಲಾದ ಇಲಾಖೆಗಳ ಅಧಿಕಾರಿ/ ಸಿಬ್ಬಂದಿಗಳಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಸಲಾಗಿರುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಿದೆ.
ವೇತನ ಸಹಿತ ರಜೆ; ಅಗತ್ಯ ಸೇವೆಗಳ ಇಲಾಖೆಗಳಡಿ ಬರುವ ಗೈರು ಹಾಜರಿ ಮತದಾರರಿಗೆ (AVES) ಪೋಸ್ಟಲ್ ವೋಟಿಂಗ್ ಸೆಂಟರ್ (PVC)ಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕ ಮಾದರಿಯಾಗಿ ಅಂದರೆ ದಿನಾಂಕ 2/5/2023 ರಿಂದ 4/5/2023ರ ವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತೆರೆಯಲು ಅಗತ್ಯ ಸೇವೆಗಳ ಇಲಾಖೆಗಳಡಿ ಬರುವ ಅಧಿಕಾರಿ/ ಸಿಬ್ಬಂದಿಗಳು ಮತದಾನ ಮಾಡಲು ಅನುಕೂಲವಾಗುವಂತೆ ಮತದಾನ ಮಾಡಿದ ದಿನದಂದು ವೇತನ ಸಹಿತ ರಜೆ ನೀಡಲು ಸರ್ಕಾರವು ಆದೇಶ ಹೊರಡಿಸಿರುತ್ತದೆ ಎಂದು ತಿಳಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಅಗತ್ಯ ಸೇವೆಗಳ ಇಲಾಖೆಗಳಡಿ ಬರುವುದರಿಂದ, ಅಂಚೆ ಮತದಾನಕ್ಕೆ 12ಡಿ ಫಾರಂ ಸಲ್ಲಿಸಿರುವ ನಿಗಮದ ಅರ್ಹ ಅಧಿಕಾರಿ/ ಸಿಬ್ಬಂದಿಗಳಿಗೆ ದಿನಾಂಕ 2/5/2023 ರಿಂದ 4/05/2023 ರವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಂಚೆ ಮತದಾನ ಮಾಡಲು ಅನುಕೂಲವಾಗುವಂತೆ ಅವಕಾಶ ಕಲ್ಪಸಲಾಗಿದೆ. ಆದ್ದರಿಂದ ಮತದಾನ ಮಾಡಿದ ದಿನದಂದು ವೇತನ ಸಹಿತ ರಜೆ ನೀಡಲು ಸಕ್ಷಮ ಪ್ರಾಧಿಕಾರಿಗಳು ಅನುಮೋದಿಸಿದ್ದು, ಅದರಂತೆ ಯಾವುದೇ ನ್ಯೂನ್ಯತೆಗಳಗೆ ಆಸ್ಪದವಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಹಿಂದೆ ಅಗತ್ಯ ಸೇವೆಗಳ ಇಲಾಖೆಗಳಡಿ ಬರುವ ಗೈರು ಹಾಜರಿ ಮತದಾರರಿಗೆ (AVES) ಫ್ರೀಸ್ಟೈಲ್ ವೋಟಿಂಗ್ ಸೆಂಟರ್ (PVC)ನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕ ಮಾದರಿಯಾಗಿ ತೆರೆಯಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವಂತೆ ಹಾಗೂ ಅಗತ್ಯ ಸೇವೆಗಳ ಇಲಾಖೆಗಳಡಿ ಬರುವ ಅಧಿಕಾರಿ/ ಸಿಬ್ಬಂದಿಗಳು ಮತದಾನ ಮಾಡಲು ಅನುವಾಗುವಂತ ಮೇಲೆ ಮತದಾನ ಮಾಡಲು ತೆರಳಿದ ದಿನದಂದು ವೇತನ ಸಹಿತ ರಜೆ ನೀಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿತ್ತು.
ಪತ್ರದ ಹಿನ್ನಲೆಯಲ್ಲಿ ಕೆಎಸ್ಆರ್‌ಟಿಸಿಯು ಅಗತ್ಯ ಸೇವೆಗಳ ಇಲಾಖೆಗಳಡಿ ಬರುವುದರಿಂದ ಅಧಿಕಾರಿ/ ಸಿಬ್ಬಂದಿಗಳಿಗೆ ಅಂಚೆ ಮತದಾನಕ್ಕಾಗಿ ಆಯ್ಕೆಮಾಡಿಕೊಂಡ ಅರ್ಹ ಮತದಾರರಿಗೆ (Eligible Voters) ಮತದಾನ ಮಾಡಲು ಅನುವಾಗುವಂತ ಮತದಾನ ಮಾಡಲು ತೆರಳಿದ ದಿನಾಂಕದಂದು ಮಾತ್ರ ವೇತನ ಸಹಿತ ರಜೆಗೆ ಅರ್ಹರಿರುತ್ತಾರೆಂದು ಸ್ಪಷ್ಟಪಡಿಸಲಾಗಿದೆ.
ಸಾರ್ವತ್ರಿಕ ರಜೆ ಘೋಷಣೆ; ಕರ್ನಾಟಕ ಸರ್ಕಾರ ಮೇ 10ರ ಬುಧವಾರ ಮತದಾನಕ್ಕೆ ಅನುಕೂಲವಾಗುವಂತೆ ಸಾರ್ವತ್ರಿಕ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಮತದಾರರಿಗೆ ಅನುಕೂಲವಾಗುವಂತೆ ಆಯಾ ಮತ ಕ್ಷೇತ್ರಗಳ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಛೇರಿಗಳಿಗೆ, ಶಾಲಾ ಕಾಲೇಜುಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಸಾರ್ವತ್ರಿಕ ರಜೆಯನ್ನು ಘೋಷಿಸಿದೆ. ಆದರೆ ಈ ರಜೆ ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ.
ಈ ಹಿನ್ನಲೆಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಕಾರ್ಯಗಳಿಗೆ ನಿಯೋಜಿಸಲ್ಪಟ್ಟ ಎಲ್ಲಾ ಸರ್ಕಾರಿ ನೌಕರರುಗಳು ಚುನಾವಣಾ ಕಾರ್ಯಕ್ಕೆ ಹಾಜರಾಗತಕ್ಕದ್ದು ಎಂದು ಸರ್ಕಾರದ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಕಾರ್ಯಕ್ಕೆ ನಿಯೋಜನೆಗೊಳ್ಳುವ ಅಧಿಕಾರಿಗಳು/ ಸಿಬ್ಬಂದಿ ಮತ್ತು ಸೇವಾ ಮತದಾರರು ಮೇ 2 ರಿಂದ 4ರ ತನಕ ಅಂಚೆ ಮತದಾನ ಮಾಡಲು ಅವಕಾಶವಿದೆ.












Click it and Unblock the Notifications