Pahalgam Terrorist Attack: ಬೆಂಗಳೂರಿಗೆ ಬಂದ ಕನ್ನಡಿಗರ ಪಾರ್ಥಿವ ಶರೀರ

ಬೆಂಗಳೂರು, ಏಪ್ರಿಲ್ 24: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ ಶಿವಮೊಗ್ಗ ಮೂಲದ ಮಂಜುನಾಥ್ ರಾವ್, ಬೆಂಗಳೂರಿನ ಭರತ್ ಭೂಷಣ್ ಪಾರ್ಥಿವ ಶರೀರ ಬೆಂಗಳೂರು ನಗರಕ್ಕೆ ಗುರುವಾರ ಮುಂಜಾನೆ ಆಗಮಿಸಿದೆ. ಕರ್ನಾಟಕ ಸರ್ಕಾರದ ವತಿಯಿಂದ ಅಂತಿಮ ನಮನವನ್ನು ಸಲ್ಲಿಕೆ ಮಾಡಿ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭರತ್ ಭೂಷಣ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಗುರುವಾರ ಮುಂಜಾನೆ ವಿಶೇಷ ವಿಮಾನದ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ ಮಂಜುನಾಥ್ ರಾವ್, ಭರತ್ ಭೂಷಣ್ ಪಾರ್ಥಿವ ಶರೀರವನ್ನು ತರಲಾಯಿತು. ಸರ್ಕಾರದ ವತಿಯಿಂದ ಅಂತಿಮ ನಮನ ಸಲ್ಲಿಸಿದ ಬಳಿಕ ಮಂಜುನಾಥ್ ರಾವ್ ಪಾರ್ಥಿವ ಶರೀರವನ್ನು ಶಿವಮೊಗ್ಗಕ್ಕೆ, ಭರತ್ ಭೂಷಣ್ ಪಾರ್ಥಿವ ಶರೀರವನ್ನು ಬೆಂಗಳೂರಿನ ಮತ್ತಿಕೆರೆಗೆ ಹಾಗೂ ಮಧುಸೂದನ್ ಪಾರ್ಥಿವ ಶರೀರವನ್ನು ಚೆನ್ನೈ ಮೂಲಕ ನೆಲ್ಲೂರಿಗೆ ಕಳುಹಿಸಿ ಕೊಡಲಾಗಿದೆ.

Pahalgam Terror Attack Body Of Victims Killed In Deadly Attack Arrive At Bengaluru

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪಾರ್ಥಿವ ಶರೀರಗಳಿಗೆ ಅಂತಿಮ ನಮನಗಳನ್ನು ಸಲ್ಲಿಸಿದರು. ಸಂತ್ರಸ್ತ ಕುಟುಂಬ ಸದಸ್ಯರಿಗೆ ಸಾಂತ್ವವನ್ನು ಹೇಳಿದರು. ಸಂಸದ ತೇಜಸ್ವಿ ಸೂರ್ಯ ಶ್ರೀನಗರದಿಂದ ಪಾರ್ಥಿವ ಶರೀರ ಮತ್ತು ಕುಟುಂಬ ಸದಸ್ಯರ ಜೊತೆಗೆ ಬೆಂಗಳೂರು ನಗರಕ್ಕೆ ಆಗಮಿಸಿದರು.

ಕೇಂದ್ರದ ಜೊತೆ ನಾವಿದ್ದೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಗಣ್ಯರು ಭರತ್ ಭೂಷಣ್ ಪಾರ್ಥಿವ ಶರೀರಕ್ಕೆ ಅಂತಿಮ ನಮನವನ್ನು ಸಲ್ಲಿಕೆ ಮಾಡಿದರು. ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಮುಖ್ಯಮಂತ್ರಿಗಳ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿದೆ. ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತರಾದ ಭರತ್ ಭೂಷಣ್ ಅವರಿಗೆ ಕನ್ನಡ ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದೇನೆ. ಉತ್ತಮ ಶಿಕ್ಷಣ ಪಡೆದಿದ್ದ, ತರುಣರಾಗಿದ್ದ ಭರತ್ ಭೂಷಣ್ ಅವರು ಉಗ್ರರ ದಾಳಿಗೆ ಬಲಿಯಾಗಿರುವುದು ದುರದೃಷ್ಟಕರ. ಉಗ್ರರ ದಾಳಿ ಅಮಾನವೀಯವಾದ ಕೃತ್ಯವಾಗಿದ್ದು, ತೀವ್ರವಾಗಿ ಖಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಉಗ್ರರನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ನಮ್ಮ ಸರ್ಕಾರ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಗ್ರಹಿಸಿ, ಉಗ್ರರನ್ನು ಸದೆಬಡಿಯುವ ನಿಟ್ಟಿನಲ್ಲಿ ಕೇಂದ್ರಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ. ಅಮಾಯಕ ಜನರನ್ನು ಹಾಡುಹಗಲೇ, ತಮ್ಮ ಕುಟುಂಬದವರ ಎದುರು ಕೊಲ್ಲುವುದು ಹ್ಯೇಯಕೃತ್ಯ. ಕಾಶ್ಮೀರದಲ್ಲಿ ಈ ಹಿಂದೆಯೂ ಪುಲ್ವಾಮಾ, ಬಾಲಾಕೋಟ್ ಘಟನೆ ನಡೆದಿದ್ದು, ಪುನ: ಅಂತಹ ಘಟನೆ ಮರುಕಳಿಸಿದೆ. ಇಂತಹ ಘಟನೆ ನಡೆಯಲು ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯವೂ ಇರಬಹುದು ಎಂದು ತಿಳಿಸಿದ್ದಾರೆ.

ಕನ್ನಡಿಗರಾದ ಭರತ್ ಭೂಷಣ್, ಮಂಜುನಾಥ್ ರಾವ್ ಹಾಗೂ ಬೆಂಗಳೂರಿನಲ್ಲಿ ನೆಲಿಸಿದ್ದ ಮಧುಸೂದನ್ ಅವರು ಮೃತಪಟ್ಟಿದ್ದಾರೆ. ಬೆಂಗಳೂರಿನ ಭರತ್ ಭೂಷಣ್ ಕುಟುಂಬದೊಂದಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಹಾಗೂ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಕುಟುಂಬದವರನ್ನು ಸಚಿವ ಮಧುಬಂಗಾರಪ್ಪ ಅವರು ಭೇಟಿಯಾಗಿದ್ದು, ಕುಟುಂಬಕ್ಕೆ ಸಹಕಾರ ನೀಡುವಂತೆ ಸೂಚನೆ ನೀಡಲಾಗಿದೆ. ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ತಲಾ 10 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದು, ಕುಟುಂಬಕ್ಕೆ ಸರ್ಕಾರದ ಬೆಂಬಲವಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ಹಾಗೂ ಘಟನೆಯಲ್ಲಿ ಮೃತಪಟ್ಟವರ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ಕರೆತರುವ ವ್ಯವಸ್ಥೆಗಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಅಧಿಕಾರಿಗಳ ತಂಡವನ್ನು ಕೂಡಲೇ ಕಳುಹಿಸಿಕೊಡಲಾಗಿತ್ತು. 175 ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುತ್ತಿದೆ. ಸಂಕಷ್ಟದಲ್ಲಿರುವ ಕನ್ನಡಿಗರನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವು ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ಉಗ್ರರನ್ನು ಮಟ್ಟ ಹಾಕಲು ಇನ್ನೂ ಹೆಚ್ಚಿನ ಕ್ರಮಗಳಿಗೆ ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲವಿರಲಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+