ಬಾರದ ಮಳೆ 100ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ಎಂದು ಘೋಷಣೆ: ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿ
ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದು, ಡ್ಯಾಂಗಳು, ಕೆರೆಗಳು ನೀರಿಲ್ಲದೆ ಬಣಗುಡುತ್ತಿವೆ. ರಾಜ್ಯದ ಹಲವು ಜಿಲ್ಲೆಗಳು ತೀವ್ರ ಮಳೆ ಕೊರತೆ ಅನುಭವಿಸುತ್ತಿದ್ದು, 100ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಕಾವೇರಿ ಕಣಿವೆ ಭಾಗದ ರೈತರಿಗೆ ಬಿತ್ತನೆ ಮಾಡದಂತೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ. ಮೋಡಬಿತ್ತನೆ ಬಗ್ಗೆ ಯಾವುದೇ ಚಿಂತನೆ ಮಾಡಿಲ್ಲ, ಈ ಮೊದಲು ಮೋಡ ಬಿತ್ತನೆ ಮಾಡಿದಾಗ ಉತ್ತಮ ಫಲಿತಾಂಶ ಬಂದಿಲ್ಲ ಎಂದು ಹೇಳಿದರು. ಬರಗಾಲ ಎಂದು ಘೋಷಣೆ ಮಾಡಲು ಹಲವು ಮಾರ್ಗಸೂಚಿ ಪಾಲಿಸಬೇಕು, ಕೆಲವು ಮಾರ್ಗಸೂಚಿ ಅಡ್ಡಿಯಾಗುತ್ತಿರುವ ಕಾರಣ ಘೋಷಿಸಲು ಸಾಧ್ಯವಾಗುತ್ತಿಲ್ಲ ಎಂದರು.

ರಾಜ್ಯದಲ್ಲಿನ ಬರ ಪರಿಸ್ಥಿತಿ ಬಗ್ಗೆ ಮಾಹಿತಿ ಇದೆ. ಬಿಪಿಎಲ್ ಕಾರ್ಡ್‌ದಾರರಿಗೆ 5 ಕೆ.ಜಿ. ಅಕ್ಕಿ ಜೊತೆಯಲ್ಲಿ 5 ಕೆ.ಜಿ. ಅಕ್ಕಿಯ ಬದಲಾಗಿ ಹಣ ನೀಡುತ್ತಿದ್ದೇವೆ. ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿ ಹಣ ಹಾಕಲಾಗುವುದು, ಇದರಿಂದ ರೈತರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಕಾವೇರಿ ವಿವಾದದ ಬಗ್ಗೆ ಪ್ರತಿಕ್ರಿಯೆ
ಕಾವೇರಿ ನದಿ ನೀರು ಹಂಚಿಕೆ ಪ್ರಕರಣ ಸುಪ್ರಿಂಕೋರ್ಟ್‌ನಲ್ಲು ವಿಚಾರಣೆ ಬಗ್ಗೆ ಮಾತನಾಡಿದ ಚಲಯವರಾಯ ಸ್ವಾಮಿ, ಈ ಕುರಿತು ಎಲ್ಲರೂ ಗಮನ ನೀಡುತ್ತಿದ್ದಾರೆ, ಎಲ್ಲಾ ವಿಚಾರಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲು ಆಗದು, ಅದಕ್ಕೆ ಸುಮ್ಮನೆ ಇದ್ದೀವಿ. ಕಾವೇರಿ ವಿಚಾರದಲ್ಲಿ ಈಗಾಗಲೇ ಹೆಜ್ಜೆ ಇಟ್ಟಾಗಿದೆ, ರೈತರ ರಕ್ಷಣೆ ಮಾಡುವ ಕೆಲಸ ಆಗಿದೆ. ಸುಪ್ರಿಂಕೋರ್ಟ್‌ನಲ್ಲಿ ಅಷ್ಟು ಸುಲಭವಾಗಿ ತೀರ್ಮಾನ ಆಗಲ್ಲ ಎಂದರು.
ನೀರಾವರಿ ಪ್ರಾಧಿಕಾರ 15 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ವಾದ ಮಾಡಿದ್ದರೆ, ನಾವು ಕೂಡ ಸಮರ್ಥವಾಗಿ ವಾದ ಮಾಡಿದ್ದಕ್ಕೆ 10 ಸಾವಿರ ಕ್ಯೂಸೆಕ್ ನೀರು ಬಿಡಲು ಅನುಮತಿ ಕೊಟ್ಟಿತ್ತು, ಈಗ ತಮಿಳುನಾಡಿನವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದಾರೆ ಎಂದು ಹೇಳಿದರು.
ಕಳಪೆ ಬಿತ್ತನೆ ಬೀತ ವಿತರಿಸಿದರೆ ಕ್ರಮ
ಕಳಪೆ ಬಿತ್ತನೆ ಬೀಜ ವಿತರಣೆ ತಡೆಯಲು ಕ್ರಮ ವಹಿಸುವುದಾಗಿ ಹೇಳಿದ್ದರು. ಎರಡು ಮೂರು ಕಡೆಯಿಂದ ಕಳಪೆ ಬಿತ್ತನೆ ಬೀಜ ವಿತರಣೆ ಮಾಡಿರುವುದಾಗಿ ದೂರು ಬಂದಿದೆ. ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಪೈಪೋಟಿ ಇದೆ ಎನ್ನುವ ವಿಚಾರಕ್ಕೆ ಸಂಬಂಧಪಟ್ಟಂತೆ, ಹೀಗೆ ಹೇಳಿಕೊಂಡು ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬರುತ್ತದೆ ಎಂದುಕೊಂಡಿದ್ದರು. ಒಟ್ಟಾಗಿ ಚುನಾವಣೆಗೆ ಹೋದ ಪರಿಣಾಮ 136 ಸ್ಥಾನ ಗೆದ್ದಿದ್ದೇವೆ. ಈಗಲೂ ಅವರು ಮಾತನಾಡುತ್ತಿರಲಿ, ನಾವು ಒಟ್ಟಿಗೆ ಇರುತ್ತೇವೆ ಎಂದು ಹೇಳಿದರು.












Click it and Unblock the Notifications