2023ರಲ್ಲಿ ನಮ್ಮ ಗುರಿ 123 ಸೀಟುಗಳು; ಕುಮಾರಸ್ವಾಮಿ
ಬೆಂಗಳೂರು, ಏಪ್ರಿಲ್ 17; "ನಮ್ಮ ಗುರಿ ಏನಿದ್ದರೂ 123 ಸೀಟು. ಪಕ್ಷದ ನಾಯಕರು ಚಳಿ ಬಿಟ್ಟು ಜನರ ಬಳಿ ಹೋಗಿ ಕೆಲಸ ಮಾಡಬೇಕು. ಆಗ ಪಕ್ಷದ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ಭಾನುವಾರ ಬೆಂಗಳೂರಿನ ಜೆಡಿಎಸ್ ಕಚೇರಿ ಜೆ. ಪಿ. ಭವನದಲ್ಲಿ ನಡೆದ ಸಮಾರಂಭದಲ್ಲಿ ಸಿ. ಎಂ. ಇಬ್ರಾಹಿಂ ಜೆಡಿಎಸ್ ಪಕ್ಷ ಸೇರಿದರು. ಎಚ್. ಡಿ. ಕುಮಾರಸ್ವಾಮಿ ಪಕ್ಷದ ಬಾವುಟ ನೀಡುವ ಮೂಲಕ ಅವರನ್ನು ಬರಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಸಿ. ಎಂ. ಇಬ್ರಾಹಿಂಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಟ್ಟ ಎಚ್. ಕೆ. ಕುಮಾರಸ್ವಾಮಿ ಜೆಡಿಎಸ್ ರಾಷ್ಟ್ರೀಯ ಸಂಸದೀಯ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಎಚ್. ಡಿ. ದೇವೇಗೌಡ, ಎಚ್. ಡಿ. ಕುಮಾರಸ್ವಾಮಿ ಉಭಯ ನಾಯಕರನ್ನು ಅಭಿನಂದಿಸಿದರು.
ಸಿ. ಎಂ. ಇಬ್ರಾಹಿಂ ಪದಗ್ರಹಣದ ಬಳಿಕ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ, "ಎಲ್ಲಾ ಸಮಾಜವನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಸಿ. ಎಂ. ಇಬ್ರಾಹಿಂ ಅವರ ಮೇಲಿದೆ" ಎಂದು ಹೇಳಿದರು.

30-40 ಸ್ಥಾನ ಗೆಲ್ಲುವುದು ದೊಡ್ಡದಲ್ಲ
ಎಚ್. ಡಿ. ಕುಮಾರಸ್ವಾಮಿ ಮಾತನಾಡಿ, "30-40 ಸ್ಥಾನ ಗೆಲ್ಲುವುದು ದೊಡ್ಡದೇನೂ ಅಲ್ಲ. ನಾವು ಸುಮ್ಮನೆ ಇದ್ದರೂ ಜನರು ನಮಗೆ ಮತ ಹಾಕಿ ಗೆಲ್ಲಿಸುತ್ತಾರೆ. ನಮ್ಮ ಗುರಿ ಏನಿದ್ದರೂ 123 ಮಿಷನ್ ಪಕ್ಷದ ನಾಯಕರು ಚಳಿ ಬಿಟ್ಟು ಜನರ ಬಳಿ ಹೋಗಿ ಕೆಲಸ ಮಾಡಬೇಕಿದೆ. ಆಗ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ" ಎಂದರು.

ಕಾಂಗ್ರೆಸ್ ಪಕ್ಷ ಬೀದಿಗೆ ಇಳಿದಿದೆ
"ಜನತಾ ಜಲಧಾರೆ ಹೆಸರಿನಲ್ಲಿ ಯಶಸ್ವಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ಧೇವೆ. ಮೇ 8ರ ತನಕ ಜನತಾ ಜಲಧಾರೆ ಯಾತ್ರೆ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ನಡೆಸಲಿದೆ. ಬಿಜೆಪಿ ಕಾರ್ಯಕಾರಣಿ ಹಮ್ಮಿಕೊಂಡಿದೆ. ಕಾಂಗ್ರೆಸ್ ಪಕ್ಷ ಪರ್ಸೆಂಟೇಜ್ ಪ್ರಕರಣದೊಂದಿಗೆ ಬೀದಿಗೆ ಇಳಿದಿದೆ. ಜೆಡಿಎಸ್ ರಾಜ್ಯದಲ್ಲಿ ಶಾಂತಿಯ ತೋಟವನ್ನು ಬಯಸುತ್ತದೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಜನರ ಕಷ್ಟ ಬಗೆಹರಿಸುವುದು ಬೇಕಿಲ್ಲ" ಎಂದು ಕುಮಾರಸ್ವಾಮಿ ಟೀಕಿಸಿದರು.

ಮೇ 4ರ ಬಳಿಕ ಕೆಲಸ ಆರಂಭವಾಗಲಿದೆ
ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಸಿ. ಎಂ. ಇಬ್ರಾಹಿಂ, "ಜೆಡಿಎಸ್ ಒಂದು ಪಕ್ಷವಲ್ಲ ಕುಟುಂಬವಿದ್ದಂತೆ. ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ. ಮೇ 4ರ ಬಳಿಕ ನಮ್ಮ ಕೆಲಸ ಆರಂಭವಾದರೆ ವಿಧಾನಸಭೆ ಚುನಾವಣೆ ಬಳಿಕ ನಿಲ್ಲಲಿದೆ. ಬಸವನಬಾಗೇವಾಡಿಯಲ್ಲಿ ಮೊದಲ ಸಭೆ ನಡೆಸುತ್ತೇನೆ. ನಾನು ಇದುವರೆಗೂ ಹೇಳಿರುವುದು ಯಾವುದೂ ಸುಳ್ಳಾಗಿಲ್ಲ" ಎಂದರು.
"ದೇವೇಗೌಡರು ಎಲ್ಲಾ ಜನಾಂಗವನ್ನು ಸಮಾನವಾಗಿ ನೋಡಿದ್ದರು. ಹುಬ್ಬಳ್ಳಿ ವಿವಾದವನ್ನು ಬಗೆಹರಿಸಿ ಶಾಂತಿ ಮೂಡಿಸಿದ್ದರು. ಪಕ್ಷದಿಂದ ಒಬ್ಬರನ್ನು ಕರೆದುಕೊಂಡು ಹೋದರೆ ಹತ್ತು ಜನ ಬರುತ್ತಾರೆ. ಶಕ್ತಿಯುತವಾಗಿ ಓಡಾಡುವವರು ಪಕ್ಷಕ್ಕೆ ಬೇಕಿದೆ" ಎಂದು ಸಿ. ಎಂ. ಇಬ್ರಾಹಿಂ ಹೇಳಿದರು.

ನೂತನ ಪರ್ವ ಆರಂಭವಾಗಿದೆ
ಜೆಡಿಎಸ್ ರಾಷ್ಟ್ರೀಯ ಸಂಸದೀಯ ಮಂಡಳಿ ಅಧ್ಯಕ್ಷರಾದ ಎಚ್. ಕೆ. ಕುಮಾರಸ್ವಾಮಿ ಮಾತನಾಡಿ, "ನಮ್ಮ ಪಕ್ಷದಲ್ಲಿ ನೂತನ ಪರ್ವ ಆರಂಭವಾಗಿದೆ. ಪ್ರಜಾಪ್ರಭುತ್ವದಲ್ಲಿ ಬದಲಾವಣೆ ಸಾಮಾನ್ಯ. ಅದೇ ರೀತಿ ನಮ್ಮ ಪಕ್ಷದಲ್ಲೂ ಬದಲಾಣೆಯಾಗಿದೆ. ಯಾರಿಗೆ ಕೃತಜ್ಞತೆ ಇದೆಯೋ ಅವರು ಭಾವುಕರಾಗುತ್ತಾರೆ. ನಾನು, ಕುಮಾರಣ್ಣ ಭಾವನಾ ಜೀವಿಗಳು. ಮಾಧ್ಯಮಗಳು ಇದನ್ನು ತಪ್ಪಾಗಿ ಅರ್ಥೈಸಬಾರದು. ಅತ್ಯಂತ ಸಂತೋಷದಿಂದ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದೇನೆ" ಎಂದರು.












Click it and Unblock the Notifications