ಲೋಕಾಯುಕ್ತ ಸಿಬ್ಬಂದಿಗೆ ಪಾಸಿಟಿವ್: ಮೌಕಿಕ ಕಲಾಪಗಳು ರದ್ದು
ಬೆಂಗಳೂರು, ಜ.22: ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ 52 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಎರಡು ವಾರಗಳ ಕಾಲ ಲೋಕಾಯುಕ್ತ ಸಂಸ್ಥೆಯನ್ನು ಬಂದ್ ಮಾಡಲು ಸೂಚಿಸಲಾಗಿದೆ.
ಬೆಂಗಳೂರು ಸಹಿತ ಹಲವೆಡೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಿಬ್ಬಂದಿಗೂ ಸಹ ಪರೀಕ್ಷೆ ನಡೆಸಲಾಗಿತ್ತು. ಲೋಕಾಯುಕ್ತ ಸಂಸ್ಥೆಯಲ್ಲಿರುವ 300 ಸಿಬ್ಬಂದಿಗೆ ಈ ವಾರ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 52 ಸಿಬ್ಬಂದಿಗೆ ಪಾಸಿಟಿವ್ ಕಂಡುಬಂದಿದೆ.
ಲೋಕಾಯುಕ್ತದಲ್ಲಿ ಹೆಚ್ಚಿನ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದ ಕಾರಣದಿಂದಾಗಿ ಎರಡು ವಾರಗಳ ಕಾಲ ಮೌಕಿಕ ಕಲಾಪಗಳನ್ನು ನಿರ್ಬಂಧಿಸಿ ಲೋಕಾಯುಕ್ತ ರಿಜಿಸ್ಟ್ರಾರ್ ಆದೇಶ ಹೊರಡಿಸಿದ್ದಾರೆ.
ಲೋಕಾಯುಕ್ತರ ಪತ್ರಿಕಾಗೋಷ್ಠಿ ಏನಾಗುತ್ತೆ?
ಸದ್ಯ ಲೋಕಾಯುಕ್ತರಾಗಿರುವ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರ ಅಧಿಕಾರಾವಧಿ ಇದೇ ಜ.27ಕ್ಕೆ ಕೊನೆಗೊಳ್ಳುತ್ತದೆ.
2017ರ ಜ.28ರಂದು ನ್ಯಾ.ವಿಶ್ವನಾಥ ಶೆಟ್ಟಿ ಅಧಿಕಾರ ಸ್ವೀಕರಿಸಿದ್ದರು. ಐದು ವರ್ಷಗಳ ಸಾಧನೆ ಕುರಿತು ತಿಳಿಸುವುದಕ್ಕಾಗಿ ಜ.24ರಂದು ಲೋಕಾಯುಕ್ತ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ಕರೆದಿದ್ದಾರೆ.
ಈಗ ಲೋಕಾಯುಕ್ತ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗಿ ಕಾರ್ಯಕಲಾಪಗಳನ್ನೇ ಬಂದ್ ಮಾಡಿರುವುದರಿಂದ ಲೋಕಾಯುಕ್ತರ ಮಾಧ್ಯಮಗೋಷ್ಠಿ ನಡೆಸುತ್ತಾರಾ? ಎಂಬ ಪ್ರಶ್ನೆ ಎದುರಾಗಿದೆ.