ಪ್ರತಿಪಕ್ಷದ ಮೊದಲ ಸಾಲು ನೋಡಿ ಮುಗುಳ್ನಕ್ಕ ಕಾಂಗ್ರೆಸ್ ನಾಯಕರು!
ಬೆಂಗಳೂರು, ಜೂನ್ 20: ಲೋಕಸಭೆ ಚುನಾವಣೆ ಫಲಿತಾಂಶ 2024 ಘೋಷಣೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಸಹ ಪಕ್ಷ 9 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದೆ. ಆದರೆ ಬಿಜೆಪಿ ಬಿಜೆಪಿ 17 ಮತ್ತು ಜೆಡಿಎಸ್ 2 ಸೀಟುಗಳಲ್ಲಿ ಜಯಗಳಿಸಿದೆ. ಆದರೆ ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರ ಸಾಲು ನೋಡಿ ಕಾಂಗ್ರೆಸ್ ಮುಗುಳ್ನಕ್ಕು ಸುಮ್ಮನಾಗಿದೆ.
ಲೋಕಸಭೆ ಚುನಾವಣೆಗೆ ಕರ್ನಾಟಕ ವಿಧಾನಸಭೆಯ ಶಾಸಕರು, ವಿಧಾನ ಪರಿಷತ್‌ನ ಸದಸ್ಯರು ಸ್ಪರ್ಧೆ ಮಾಡಿದ್ದರು. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಶಾಸಕರನ್ನು ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಮೂವರು ಶಾಸಕರು, ಒಬ್ಬರು ವಿಧಾನ ಪರಿಷತ್ ಸದಸ್ಯರು ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ.

ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ (ಹಾವೇರಿ-ಗದಗ), ಜೆಡಿಎಸ್‌ನ ಎಚ್. ಡಿ. ಕುಮಾರಸ್ವಾಮಿ (ಮಂಡ್ಯ), ಇ. ತುಕಾರಾಮ್ (ಬಳ್ಳಾರಿ), ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ (ಉಡುಪಿ-ಚಿಕ್ಕಮಗಳೂರು) ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಎಲ್ಲರೂ ಗೆದ್ದಿದ್ದು, ಶಾಸಕ ಮತ್ತು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಪ್ರತಿಪಕ್ಷದ ಸಾಲು ಖಾಳಿ: ಕರ್ನಾಟಕದ ವಿಧಾನಸಭೆಯ ಮುಂಗಾರು ಅಧಿವೇಶನ ಜುಲೈನಲ್ಲಿ ನಡೆಯಲಿದೆ. ಆದರೆ ಪ್ರತಿಪಕ್ಷವಾದ ಬಿಜೆಪಿ, ಜೆಡಿಎಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಮರ್ಥ ನಾಯಕರ ಕೊರತೆ ಎದುರಿಸುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಸವರಾಜ ಬೊಮ್ಮಾಯಿ, ಎಚ್. ಡಿ. ಕುಮಾರಸ್ವಾಮಿ ಪ್ರತಿಪಕ್ಷದ ಮೊದಲ ಸಾಲಿನಿಂದ ನಿರ್ಗಮಿಸಿದ್ದಾರೆ. ಪ್ರತಿಪಕ್ಷ ನಾಯಕರಾದ ಆರ್. ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಮೇಲೆ ಈಗ ಹೆಚ್ಚಿನ ಜವಾಬ್ದಾರಿ ಬಂದಿದೆ.
ಆಡಳಿತ ಪಕ್ಷದಲ್ಲಿ ಕಾಂಗ್ರೆಸ್ ಸಮರ್ಥನೆ ಮಾಡಿಕೊಳ್ಳಲು ಡಜನ್‌ಗಟ್ಟಲೇ ನಾಯಕರು ಇದ್ದಾರೆ. ಆದರೆ ಬಿಜೆಪಿ ಮೊದಲ ಸಾಲು ನೋಡಿದರೆ ಪ್ರತಿಪಕ್ಷದ ಮಾತಿನ ಪವರ್ ಹೆಚ್ಚಿಸುವ ನಾಯಕರ ಕೊರತೆಯಂತೂ ಕಾಡುತ್ತಿದೆ. ಬಿ. ಎಸ್. ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಿಸಿದಾಗಲೇ ವಿಧಾನಸಭೆ ಅಧಿವೇಶನದ ಕಳೆ ಮಂಕಾಗಿತ್ತು.
2023ರ ಚುನಾವಣೆಯಲ್ಲಿ ಸಿ. ಟಿ. ರವಿ, ಜೆ. ಸಿ. ಮಾಧುಸ್ವಾಮಿ ಮುಂತಾದ ನಾಯಕರು ಸೋತಾಗ ಪ್ರತಿಪಕ್ಷದ ಸಾಲು ಕೊಂಚ ಕಳೆಗುಂದಿತ್ತು. ಆಗ ಬಸವರಾಜ ಬೊಮ್ಮಾಯಿ, ಜೆಡಿಎಸ್‌ನ ಎಚ್. ಡಿ. ಕುಮಾರಸ್ವಾಮಿ ಅಂಕಿ-ಸಂಖ್ಯೆಗಳ ಸಮೇತ ಮಾತನಾಡಿ ಸರ್ಕಾರವನ್ನು ಟೀಕಿಸುತ್ತಿದ್ದರು.
ಈಗ ಸಿ. ಟಿ. ರವಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಆದರೆ ವಿಧಾನಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬಲ್ಲ. ಸವಿವರವಾಗಿ ಮಾತನಾಡಬಲ್ಲ ನಾಯಕರ ಕೊರತೆ ಇದೆ ಎಂಬುದುನ್ನು ಬಿಜೆಪಿ ನಾಯಕರೇ ಒಪ್ಪುತ್ತಾರೆ.
ಆರ್. ಅಶೋಕ, ಬಿ. ವೈ. ವಿಜಯೇಂದ್ರ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಿಸಬೇಕಾದರೆ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು. ಅನುಭವಿಯಾದ ಆರ್. ಅಶೋಕ, ಸುರೇಶ್ ಕುಮಾರ್, ಡಾ. ಸಿ. ಎನ್. ಅಶ್ವತ್ಥ ನಾರಾಯಣ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದರೆ ಕಲಾಪ ಕಾವೇರುವುದರಲ್ಲಿ ಸಂಶಯವಿಲ್ಲ.
ಜೆಡಿಎಸ್ ಪಾಳಯದಲ್ಲಂತೂ ನಾಯಕರೇ ಇಲ್ಲದಂತೆ ಆಗಿದೆ. ಇದ್ದ 19 ಶಾಸಕರ ಬಲ ಎಚ್. ಡಿ. ಕುಮಾರಸ್ವಾಮಿ ರಾಜೀನಾಮೆ ಬಳಿಕ 18ಕ್ಕೆ ಕುಸಿದಿದೆ. ಎಚ್. ಡಿ. ರೇವಣ್ಣ ಸದನಕ್ಕೆ ಬಂದರೂ ಅವರನ್ನು ಸುಮ್ಮನಾಗಿಸುವುದು ಹೇಗೆ? ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಎಲ್ಲರಿಗೂ ಚೆನ್ನಾಗಿ ತಿಳಿದಿದೆ.
ವಿಧಾನಸಭೆಯಲ್ಲಿ ವಿವಿಧ ವಿಚಾರಗಳ ಕುರಿತು ಗಂಭೀರವಾದ ಚರ್ಚೆ ನಡೆಯುತ್ತದೆ. ಆಗ ಹಿಂದಿನ ಎಲ್ಲಾ ಮಾಹಿತಿ, ಅಂಕಿ ಸಂಖ್ಯೆ ಮುಂತಾದವುಗಳನ್ನು ವಿವರವಾಗಿ ತಿಳಿದು, ಅವುಗಳನ್ನು ಕ್ರೋಢಿಕರಿಸಿ ಮಾತನಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಅಪಾರವಾದ ಜ್ಞಾನ, ಓದು ಬೇಕಾಗುತ್ತದೆ. ಆರ್. ಅಶೋಕ, ಬಿ. ವೈ. ವಿಜಯೇಂದ್ರ ಹೇಗೆ ಕಲಾಪದಲ್ಲಿ ಪಾಲ್ಗೊಳ್ಳುತ್ತಾರೆ, ಸರ್ಕಾರವನ್ನು ಹೇಗೆ ಇಕ್ಕಟ್ಟಿಗೆ ಸಿಲುಕಿಸಲಿದ್ದಾರೆ? ಎಂದು ಕಾದು ನೋಡಬೇಕಿದೆ.












Click it and Unblock the Notifications