ನಾನು ಹಿಂದೂ, ನಮ್ಮಪ್ಪ-ಅವ್ವನೂ ಹಿಂದೂ; ಸಿ ಟಿ ರವಿ ಹೇಳಿದಾರೆ ನಾನು ಮುಸ್ಲಿಂ ಆಗ್ತಿನಾ? ಸಿದ್ದರಾಮಯ್ಯ ಗರಂ
ಸಿ.ಟಿ. ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವಿಜಯಪುರ,ಫೆಬ್ರವರಿ11: ನಾನು ಹಿಂದೂ, ನಮ್ಮಪ್ಪ-ಅವ್ವನೂ ಹಿಂದೂ. ಸಿ.ಟಿ. ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಕುರಿತು ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಹಿಂದು ಅಲ್ಲವಾ, ನಮ್ಮವ್ವ-ನಮ್ಮಪ್ಪ ಹಿಂದುಗಳಲ್ಲವಾ? ಸಿ.ಟಿ. ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ? ಹಿಂದುತ್ವದ ಬಗ್ಗೆ ಗೊತ್ತಿದ್ದರೆ ತಿಳಿಸಿ, ಗೊತ್ತಿಲ್ಲದಿದ್ದರೆ ಕೇಳುವುದು ಬೇಡ ಎಂದು ಸಿ ಟಿ ರವಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಮ್ಮ ಸರ್ಕಾರದಲ್ಲಿ 15 ಲಕ್ಷ ಮನೆಗಳನ್ನು ಕೊಟ್ಟಿದ್ದೆವು. ಎಲ್ಲವೂ ಮುಸ್ಲಿಂರಿಗೆ ಕೊಟ್ಟಿದ್ದೆವಾ? ಕೇವಲ 5 ರಷ್ಟು ಮುಸ್ಲಿಂರಿಗೆ ಕೊಟ್ಟಿತ್ತು. ಶೇ. 95 ರಷ್ಟು ಹಿಂದುಗಳಿಗೆ ಕೊಡಲಾಗಿತ್ತು. ಬಿಜೆಪಿಗೆ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಬದಲಾವಣೆ ಮಾಡಲು ಆಗಿಲ್ಲ ಎಂದು ಕಿಡಿಕಾರಿದ್ದಾರೆ.

ರೈತರ ಬಿಕ್ಕಟ್ಟಿಗೆ ಪರಿಹಾರ ಒದಗಿಸಲಾಗಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ 2017ರಲ್ಲಿ ಹೇಳಿದ್ದರು. ಆದರೆ, ರೈತರ ಸಾಲ ದುಪ್ಪಟ್ಟಾಯಿತೇ ಹೊರತು ಆದಾಯ ದುಪ್ಪಟ್ಟು ಆಗಲಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಆರೋಪಗಳೆಲ್ಲ ಸುಳ್ಳು ಎನ್ನುವ ವಿಚಾರವಾಗಿ ಮಾತನಾಡಿ, ಈಗ ಏಳು ಕೆಜಿ ಇದ್ದ ಅಕ್ಕಿ 5 ಕೆಜಿಗೆ ಇಳಿಸಿದ್ದು ಸುಳ್ಳಾ? ಅಕ್ಕಿ ಕೇಂದ್ರ ಸರ್ಕಾರದ್ದು, ಚೀಲ ಮಾತ್ರ ಕಾಂಗ್ರೆಸ್‌ನದ್ದು ಎನ್ನುವ ಬಿಜೆಪಿಗರು ತಮ್ಮದೇ ಪಕ್ಷದ ಆಡಳಿತವಿರುವ ಉತ್ತರ ಪ್ರದೇಶ, ಗುಜರಾತ, ಅಸ್ಸಾಂನಲ್ಲಿ ಏಕೆ ಕೊಡುತ್ತಿಲ್ಲ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದೇವೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರರ ಮೇಲೆ ರೌಡಿ ಶೀಟರ್ ಪ್ರಕರಣ ವಿಚಾರವಾಗಿ ಮಾತನಾಡಿ, ರೌಡಿ ಶೀಟರ್ ಪ್ರಕರಣ ದಾಖಲಿಸಬಾರದು. ನೆಲ, ಜಲ, ಭಾಷೆಯ ಉಳಿಯುವ ಎಲ್ಲರ ಮೂಲಭೂತ ಹಕ್ಕು. ರಾಜ್ಯಗಳ ಸ್ವಾಯತ್ತ ಹಕ್ಕು ಯಾರೂ ಕಸಿದುಕೊಳ್ಳುವಂತಿಲ್ಲ. ಮಹಾಜನ ವರದಿಯಲ್ಲಿ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಹೇಳಲಾಗಿದೆ. ಆದರೂ ಕಾಲು ಕೆರೆದುಕೊಂಡು ಜಗಳಕ್ಕೆ ಬರುವುದು ಸರಿಯಲ್ಲ ಎಂದು ಹೇಳಿದರು.












Click it and Unblock the Notifications