ಕೋಟ್ಯಂತರ ರೂಪಾಯಿ ಹಣ ಖರ್ಚು; ಅನೈತಿಕ ದಾರಿಯಲ್ಲಿ ಬಿಜೆಪಿ ಅಧಿಕಾರಕ್ಕೆ: ಸಿದ್ದರಾಮಯ್ಯ ಹೇಳಿದ್ದೇನು.?
ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೂರು ಪಕ್ಷಗಳ ರಾಜಕೀಯ ಕೆಸರೆರಚಾಟ ಹೆಚ್ಚಾಗಿದ್ದು, ಸರ್ಕಾರದ ವಿರುದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿ,ಫೆಬ್ರವರಿ7: 2023 ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೂರು ಪಕ್ಷಗಳ ರಾಜಕೀಯ ಕೆಸರೆರಚಾಟ ಹೆಚ್ಚಾಗಿದ್ದು, ಸರ್ಕಾರದ ವಿರುದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಕಲಬುರಗಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಯಾವತ್ತೂ ಕೂಡ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದವರಲ್ಲ. ಎರಡು ಬಾರಿ ಕೂಡ ಆಪರೇಷನ್ ಕಮಲದ ಅನೈತಿಕ ದಾರಿಯಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದ್ದಾರೆ. ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ಆಪರೇಷನ್ ಕಮಲ ಎಂಬ ಹೆಸರು ಕೇಳಿರಲಿಲ್ಲ, ರಾಜ್ಯದಲ್ಲಿ ಈ ಆಪರೇಷನ್ ಕಮಲ ಆರಂಭವಾದುದ್ದು ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರರಿಂದ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ 104 ಸ್ಥಾನಗಳಲ್ಲಿ, ನಾವು 80 ಸ್ಥಾನಗಳಲ್ಲಿ ಗೆದ್ದಿದ್ದೆವು. ಆದರೆ ಶೇಕಡಾವಾರು ಮತದಲ್ಲಿ ನಾವು ಬಿಜೆಪಿ ಪಕ್ಷಕ್ಕಿಂತ 2% ಹೆಚ್ಚು ಮತ ಗಳಿಸಿದ್ದೆವು. 2018ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಬಹುಮತ ಸಾಬೀತು ಮಾಡಲಾಗದೆ ಮೂರೇ ದಿನಕ್ಕೆ ರಾಜೀನಾಮೆ ನೀಡಿದ್ರು. ಆ ನಂತರ ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡುವ ಏಕೈಕ ಕಾರಣಕ್ಕೆ ಬರೀ 38 ಸ್ಥಾನಗಳನ್ನು ಗಳಿಸಿದ್ದ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಆದರೆ ವೆಸ್ಟೆಂಡ್ ಹೋಟೆಲ್ ನಲ್ಲಿ ಉಳಿದುಕೊಂಡು ಸಚಿವರು, ಶಾಸಕರನ್ನು ಭೇಟಿ ಮಾಡದ ಕಾರಣಕ್ಕೆ ಕೇವಲ 14 ತಿಂಗಳಿಗೆ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರು. ಕೊಟ್ಟ ಕುದುರೆ ಏರಲಾರದವನು ವೀರನೂ ಅಲ್ಲ, ಶೂರನೂ ಅಲ್ಲ. ಈ ಮಾತು ಕುಮಾರಸ್ವಾಮಿ ಅವರಿಗೆ ಸರಿಯಾಗಿ ಅನ್ವಯಿಸುತ್ತದೆ ಎಂದು ಟೀಕಿಸಿದ್ದಾರೆ.

ಪೆಟ್ರೋಲ್, ಡೀಸೆಲ್, ಗ್ಯಾಸ್, ಗೊಬ್ಬರ, ಸಿಮೆಂಟ್, ಕಬ್ಬಿಣ, ಹಾಲು, ಮೊಸರು, ಔಷಧಿ ಇವುಗಳ ಬೆಲೆ ಮಿತಿಮೀರಿದೆ. ಇದನ್ನೇ ಅಚ್ಚೇದಿನ್ ಎಂದು ಕರೆಯಬೇಕಾ ಮೋದಿಜೀ? ಅಗತ್ಯವಸ್ತುಗಳ ಮೇಲೆ ಜಿಎಸ್‌ಟಿ ಹಾಕಿ ಬಡವರ ರಕ್ತ ಹೀರುತ್ತಿದ್ದಾರೆ ಇಂಥವರಿಗೆ ಮತ ಹಾಕ್ತೀರ? ಈ ಬೆಲೆಯೇರಿಕೆಯಿಂದ ನೊಂದಿರುವ ಬಡ ಜನರಿಗೆ ನೆರವಾಗಲು ನಮ್ಮ ಪಕ್ಷವು ಮುಂದೆ ಅಧಿಕಾರಕ್ಕೆ ಬಂದಾಗ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಿದೆ, ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ನಂತೆ ವರ್ಷಕ್ಕೆ 24,000 ರೂ. ಸಹಾಯಧನ ನೀಡುತ್ತದೆ. ಇದಕ್ಕೆ ನಾನು ಡಿ.ಕೆ ಶಿವಕುಮಾರ್ ಅವರು ಸಹಿ ಮಾಡಿದ್ದೇವೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಈ ಬಗ್ಗೆ ಅನುಮಾನವೇ ಬೇಡ.
ನಾವು ಬಡವರಿಗೆ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆವು, ಅದನ್ನು 5 ಕೆ.ಜಿ ಗೆ ಇಳಿಸಿದ್ದಾರೆ. ಬಡವರಿಗೆ ಅಕ್ಕಿ ನೀಡಿದ್ರೆ ಇವರ ಅಪ್ಪನ ಮನೆಯ ಗಂಟೇನು ಹೋಗುತ್ತಿತ್ತಾ? ನಾವು ಮತ್ತೆ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ಬಡಜನರಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಅಕ್ಕಿಯನ್ನು 5 ಕೆ.ಜಿ ಗೆ ಇಳಿಸಿದವರನ್ನು ಅಧಿಕಾರದಿಂದ ಇಳಿಸಬೇಕಲ್ವಾ? ಎಂದು ಪ್ರಶ್ನಿಸಿದ್ದಾರೆ.
ಇಂದು ಬೆಲೆಯೇರಿಕೆ ಗಗನ ಮುಟ್ಟಿದೆ. ಹಿಂದೆ 450 ರೂ ಇದ್ದ 50 ಕೆ.ಜಿ ಡಿಎಪಿ ಬೆಲೆ ಇಂದು 1450 ರೂ. ಆಗಿದೆ. ನರೇಂದ್ರ ಮೋದಿ ಅವರು ರೈತರ ಆದಾಯವನ್ನು ದುಪ್ಪಟ್ಟು ಮಾಡಿದ್ರಾ? ಮೋದಿಜಿ ಕ್ಯೂ ಜೂಟ್ ಬೋಲ್ ಲಿಯಾ ಆಪ್? ಎಂದು ಕೇಳಿದೆ. ಈ ಭಾಗದಲ್ಲಿ ಬೆಳೆದ ತೊಗರಿಬೇಳೆಗೆ ನೆಟೆರೋಗ ಬಂದು ಬೆಳೆನಷ್ಟವಾಗಿದೆ.

ಈ ಬಗ್ಗೆ ಸದನದಲ್ಲಿ ಕೃಷಿ ಸಚಿವರನ್ನು ರೈತರ ಕಷ್ಟ ಕೇಳಲು ಅವರ ಜಮೀನುಗಳಿಗೆ ಭೇಟಿನೀಡಿದ್ರಾ? ಎಂದು ಕೇಳಿದ್ರೆ ನನಗೆ ಹುಷಾರಿಲ್ಲ, ಅದಕ್ಕೆ ಹೋಗಲಿಲ್ಲ ಎಂದರು. ಆರೋಗ್ಯ ಚನ್ನಾಗಿಲ್ಲ, ಜನರ ಕೆಲಸ ಮಾಡಲು ಆಗಲ್ಲ ಎಂದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಅಲ್ವಾ? ಇವತ್ತಿನವರೆಗೆ ಒಂದು ರೂಪಾಯಿ ಬೆಳೆ ನಷ್ಟ ಪರಿಹಾರ ಕೊಟ್ಟಿಲ್ಲ ಎಂದು ಹೇಳಿದ್ದಾರೆ.











Click it and Unblock the Notifications