ಕೊನೆಗೂ, ಜ್ಯೋತಿಷ್ಯ, ಭವಿಷ್ಯದ ಮೊರೆ ಹೋದ ಸಿದ್ದರಾಮಯ್ಯ?
ಹಾಲಿ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ನಡುವೆ ಕಾವೇರಿ ವಿಚಾರದಲ್ಲಿ ಜಟಾಪಟಿ ಮುಂದುವರಿದಿದೆ. ಇದು ನಾಡಿನ ಜೀವನದಿ ಕಾವೇರಿ ವಿಚಾರದಲ್ಲಿ ಅಲ್ಲ, ಕಾವೇರಿ ಸರಕಾರೀ ಬಂಗ್ಲೆಗಾಗಿ.
ತಾವು ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ಒಳಹೊಕ್ಕಿದ್ದ ಸಿದ್ದರಾಮಯ್ಯ, ಸಮ್ಮಿಶ್ರ ಸರಕಾರದ ಅವಧಿಯಲ್ಲೂ ಅಲ್ಲೇ ಮುಂದುವರಿದಿದ್ದರು. ಈಗ, ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದು ನೂರು ದಿನಗಳಾಗುತ್ತಾ ಬಂದರು ಕಾವೇರಿ ಬಿಡಲು ಸಿದ್ದರಾಮಯ್ಯ ಒಪ್ಪುತ್ತಿಲ್ಲ ಎನ್ನುವ ಮಾತಿದೆ.
ಲೋಕೋಪಯೋಗಿ ಇಲಾಖೆಯಿಂದ, ಸಿದ್ದರಾಮಯ್ಯನವರಿಗೆ ಇನ್ನೊಂದು ಬಂಗಲೆ ಮಂಜೂರಾಗಿದ್ದರೂ, ಕಾವೇರಿ ಬಿಡಲು ಅವರು ಒಪ್ಪದಿರುವುದಕ್ಕೆ ಕಾರಣ ಏನಂದರೆ, ಅದಕ್ಕೆ ಕಾರಣ, ಜ್ಯೋತಿಷ್ಯ.
ಅರರೇ.. ಸಿದ್ದರಾಮಯ್ಯನವರಿಗೂ ಜ್ಯೋತಿಷ್ಯಕ್ಕೂ ಏನು ಸಂಬಂಧವೆಂದರೆ, ಅವರ ಪತ್ನಿಗೆ ಕಾವೇರಿ ಬಂಗ್ಲೆಯ ಮೇಲೆ ಇನ್ನಿಲ್ಲದ ನಂಬಿಕೆ. ಹಾಗಾಗಿಯೇ, ಆ ಬಂಗಲೆ ಖಾಲಿ ಮಾಡಲು ಸಿದ್ದರಾಮಯ್ಯ ಮುಂದಾಗುತ್ತಿಲ್ಲ ಎನ್ನುವ ಮಾತಿದೆ.

ಸಿದ್ದರಾಮಯ್ಯನವರ ಸಿಎಂ ಅವಧಿಯಲ್ಲಿ ಜಾರ್ಜ್ ಗೆ ಮಂಜೂರು
ಕುಮಾರಕೃಪ ರಸ್ತೆಯಲ್ಲಿರುವ ಕಾವೇರಿ ವಸತಿಗೃಹ ಸಿದ್ದರಾಮಯ್ಯನವರ ಸಿಎಂ ಅವಧಿಯಲ್ಲಿ ಕೆ.ಜೆ.ಜಾರ್ಜ್ ಅವರಿಗೆ ಮಂಜೂರಾಗಿತ್ತು. ಆದರೆ, ಇದು ಅದೃಷ್ಟದ ಮನೆಯೆಂದು ಸಿದ್ದರಾಮಯ್ಯ, ಇದನ್ನೇ ತಮ್ಮ ಅಧಿಕೃತ ನಿವಾಸ ಮಾಡಿಕೊಂಡಿದ್ದರು.

ಸಿದ್ದರಾಮಯ್ಯ ಈಗ ವಿರೋಧ ಪಕ್ಷದ ನಾಯಕ
ಸಿದ್ದರಾಮಯ್ಯ ಈಗ ವಿರೋಧ ಪಕ್ಷದ ನಾಯಕರಾಗಿರುವುದರಿಂದ, ಸರಕಾರ ಅವರಿಗೂ ವಸತಿಗೃಹವನ್ನು ನೀಡಬೇಕಾಗುತ್ತದೆ. ಹಾಗಾಗಿ, ರೇಸ್ ಕೋರ್ಸ್ ರಸ್ತೆಯಲ್ಲಿರುವ ಬಂಗಲೆಯನ್ನು ಮಂಜೂರು ಮಾಡಿದೆ. ಆದರೆ, ಕಾವೇರಿ ನಿವಾಸದಲ್ಲೇ ಮುಂದುವರಿಯಲು ಸಿದ್ದರಾಮಯ್ಯ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಪತ್ನಿಯ ನಂಬಿಕೆಯೇ ಕಾರಣ ಎನ್ನಲಾಗುತ್ತಿದೆ.

ಸಿದ್ದರಾಮಯ್ಯನವರ ಪತ್ನಿಗೆ ಕಾವೇರಿ ಬಂಗಲೆಯ ಮೇಲೆ ಭಾರೀ ನಂಬಿಕೆ
ಸಿದ್ದರಾಮಯ್ಯನವರ ಪತ್ನಿಗೆ ಕಾವೇರಿ ಬಂಗಲೆಯ ಮೇಲೆ ಭಾರೀ ನಂಬಿಕೆ. ಇಲ್ಲಿಗೆ ಬಂದ ಮೇಲೆ ರಾಜಕೀಯವಾಗಿ ತಮ್ಮ ಪತಿ ಏಳಿಗೆಯನ್ನು ಕಂಡರು. ಇಲ್ಲೇ ಮುಂದುವರಿದರೆ, ಇನ್ನಷ್ಟು ಉನ್ನತಿಗೇರಬಹುದು ಎನ್ನುವುದು ಸಿದ್ದರಾಮಯ್ಯನವರ ಪತ್ನಿಯ ನಂಬಿಕೆ ಎಂದು ಹೇಳಲಾಗುತ್ತಿದೆ.

ಸಿಎಂ ಯಡಿಯೂರಪ್ಪ
ಸಿದ್ದರಾಮಯ್ಯನವರು ಈ ಬಂಗಲೆ ಉಳಿಸಿಕೊಳ್ಳಲು ಭಾರೀ ಪ್ರಯತ್ನವನ್ನು ನಡೆಸಿದ್ದರು. ಪತ್ರ ವ್ಯವಹಾರವನ್ನೂ ನಡೆಸಿದ್ದರು. ಮೊದಲು, ಆಯಿತು ನೋಡೋಣ ಎನ್ನುವ ಮೌಕಿಕ ಭರವಸೆ ಸಿಎಂ ಯಡಿಯೂರಪ್ಪನವರ ಕಡೆಯಿಂದ ಬಂದಿತ್ತು. ಆದರೆ, ಏಕಾಏಕಿ ಬೇರೆ ಮನೆ ಮಂಜೂರು ಮಾಡಿ, ಲೋಕೋಪಯೋಗಿ ಇಲಾಖೆಯಿಂದ ಮಾಹಿತಿ ಬಂದಿದೆ ಎಂದು ಹೇಳಲಾಗುತ್ತಿದೆ.

ಕಾವೇರಿ ನಿವಾಸ, ವಿಧಾನಸೌಧಕ್ಕೆ ಹತ್ತಿರ
ಕಾವೇರಿ ನಿವಾಸ, ವಿಧಾನಸೌಧಕ್ಕೆ ಹತ್ತಿರವಾಗಿರುವುದರಿಂದ ಅನುಕೂಲವಾಗಲಿದೆ. ಝೀರೋ ಟ್ರಾಫಿಕ್ ಇರುವುದರಿಂದ, ಸಾರ್ವಜನಿಕರಿಗೂ ಹೆಚ್ಚಿನ ತೊಂದರೆಯಾಗುವುದಿಲ್ಲ. ಗೃಹ ಕಚೇರಿ ಕೃಷ್ಣಾ ಕೂಡಾ ಪಕ್ಕದಲ್ಲೇ ಇದೆ. ಹಾಗಾಗಿ, ಸಿಎಂ ಯಡಿಯೂರಪ್ಪ ಈ ನಿವಾಸಕ್ಕೆ ಬರಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications