ಮಹಿಳೆಯರ ಖಾತೆಗೆ 1 ಲಕ್ಷ ಟಕಾ ಟಕ್ ಹಣ ಜಮಾ ಎಂದ ರಾಹುಲ್; ಆರ್.ಅಶೋಕ್ ಏನಂದ್ರು?
ಬೆಂಗಳೂರು, ಮೇ 30: ಇಂಡಿಯಾ ಅಧಿಕಾರಕ್ಕೆ ಬಂದರೇ ವರ್ಷಕ್ಕೆ ಮಹಿಳೆಯರ ಬ್ಯಾಂಕ್ ಖಾತೆಗೆ ಒಂದು ಟಕಾ ಟಕ್ ಟಕಾ ಟಕ್ ಹಣ ಹಾಕುವುದಾಗಿ ಹೇಳಿದ್ದಾರೆ. ಅದನ್ನು ಅನುಸರಿಸಿದ ಕಾಂಗ್ರೆಸ್ ಪಕ್ಷದ ಎಲ್ಲ ಸಚಿವರು, ಟಕ್ ಟಕಾ ಟಕ್ ಎಂಬಂತೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆರೋಪಿಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಆರ್ ಅಶೋಕ್ ಅವರು ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣದಲ್ಲಿ ಇಡೀ ಸಚಿವಸಂಪುಟದವರೇ ಭಾಗಿಯಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆರೋಪಿಸಿದರು.

4 ರಂದು 25 ಕೋಟಿ ಟಕಾ ಟಕ್ ವರ್ಗಾವಣೆ, 6 ರಂದು 25 ಕೋಟಿ ಟಕಾ ಟಕ್ ವರ್ಗಾವಣೆ, 21ರಂದು 44 ಕೋಟಿ ಟಕಾ ಟಕ್ ವರ್ಗಾವಣೆ, ರಾಜ್ಯ ಖಜಾನೆಯಿಂದ 43 ಕೋಟಿ ವರ್ಗಾವಣೆ ಟಕಾ ಟಕ್ ಎಂಬಂತೆ ನಡೆದಿದೆ. ಮತ್ತೆ 21ರಂದು 50 ಕೋಟಿ ರೂ. ಟಕಾ ಟಕ್ ಟ್ರಾನ್ಸ್‍ಫರ್ ಆಗಿದೆ. ಕಾಂಗ್ರೆಸ್ಸಿನವರು ಇಷ್ಟು ಮೊತ್ತವನ್ನು ಅವರ ಲೂಟಿ ಖಾತೆಗೆ ಹಾಕಿದ್ದಾರೆ ಎಂದು ಆಕ್ಷೇಪಿಸಿದರು. ಇದೊಂದು ಬ್ರಹ್ಮಾಂಡ ಭ್ರಷ್ಟಾಚಾರ ಎಂದು ಟೀಕಿಸಿದರು.
187 ಕೋಟಿ ನುಂಗಲು ಒಬ್ಬ ಮಂತ್ರಿಯಿಂದ ಸಾಧ್ಯವಿಲ್ಲ. ಇದು ಸಣ್ಣ ಮೊತ್ತವೇನಲ್ಲ. ಅವರ ಜೀವನ, ಅವರು, ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು ಸಂತೃಪ್ತಿಯಿಂದ ಬದುಕುವಷ್ಟು ದುಡ್ಡು ಇದು ಎಂದು ಹೇಳಿದರು.
ರಾಹುಲ್ ಗಾಂಧಿಯವರು ಹೇಳಿದಂತೆ 25 ಸಾವಿರ ಕೋಟಿ ದಲಿತರ ಹಣ ಮಾಯವಾಗಿದೆ. ಎಲ್ಲಿಗೆ ಹೋಯಿತು? ಯಾರಿಗೆ ಹೋಯಿತೆಂದು ಗೊತ್ತಿಲ್ಲ. ಯಾವುದಕ್ಕೆ ಬಳಸಿದರೆಂದೂ ಗೊತ್ತಿಲ್ಲ. ಇವತ್ತು ಅಧಿಕಾರಿಗಳು ಟಕಾ ಟಕ್ ಎಂದು ಸತ್ತು ಹೋಗುತ್ತಿದ್ದಾರೆ. ಬಿತ್ತನೆ ಬೀಜದ ಬೆಲೆ ಇವತ್ತು ಟಕಾ ಟಕ್ ಎಂದು ಶೇ 70 ರಷ್ಟು ಏರಿಕೆ ಕಂಡಿದೆ. ಕಾಂಗ್ರೆಸ್ಸಿನವರಿಗೆ ರಾಮ ಕಂಡರೆ ಆಗುವುದಿಲ್ಲ. ವಾಲ್ಮೀಕಿ ಮಹರ್ಷಿಯನ್ನು ಕಂಡರೆ ಆಗೋಲ್ಲ ಎಂದು ಈಗ ಗೊತ್ತಾಗಿದೆ. ಆ ನಿಗಮದ ಹೆಸರಿನಲ್ಲಿ ಇದ್ದ 187 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಕಾಂಗ್ರೆಸ್ಸಿನ ಒಂದು ವರ್ಷದ ಸಾಧನೆ ಎಂದು ಟೀಕಿಸಿದರು.
ಸಚಿವ ನಾಗೇಂದ್ರ ರಾಜೀನಾಮೆಗೆ ವಿಜಯೇಂದ್ರ ಆಗ್ರಹ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ಇಬ್ಬರೋ ಮೂವರೋ ಅಧಿಕಾರಿಗಳ ಅಮಾನತು ಮಾಡಿದರೆ ಸಾಲದು; ಸಮಯ ವ್ಯರ್ಥ ಮಾಡದೇ ಸಚಿವರ ರಾಜೀನಾಮೆ ಪಡೆಯಬೇಕು. ಇದರ ತನಿಖೆಯನ್ನು ಸಿಬಿಐಗೆ ಕೊಡಲೇಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ನಿಜವಾಗಲೂ ನೀವು ಪ್ರಾಮಾಣಿಕರಿದ್ದರೆ ಇದನ್ನು ಸಿಬಿಐ ತನಿಖೆಗೆ ಕೊಡಿ ಎಂದು ಒತ್ತಾಯಿಸಿದರು. ಮೃತರ ಪತ್ನಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಗಂಡುಮಕ್ಕಳಿದ್ದು, ಸಂಸಾರ ನಡೆಸಲು ಕಷ್ಟ. ಇಂಥ ಸಂದರ್ಭದಲ್ಲಿ ರಾಜ್ಯ ಸರಕಾರ ಕನಿಷ್ಠ 25 ಲಕ್ಷ ಪರಿಹಾರವನ್ನು ಘೋಷಿಸಬೇಕು ಎಂದರು. ಮಾನವೀಯತೆ ದೃಷ್ಟಿಯಿಂದ ಕುಟುಂಬಕ್ಕೆ ಈ ಮೊತ್ತ ಕೊಡಬೇಕೆಂದು ತಿಳಿಸಿದರು.
ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ಮಾಡಲು ಸಿಐಡಿ ಅಥವಾ ಸ್ಥಳೀಯ ಅಧಿಕಾರಿಗಳಿಂದ ಅಸಾಧ್ಯ. ಅಧಿಕಾರಿಗಳು ಮನೆಯಿಂದ ಪೆನ್ ಡ್ರೈವ್, ಲ್ಯಾಪ್ ಟಾಪ್ ತೆಗೆದುಕೊಂಡು ಹೋಗಿದ್ದಾರೆ. ಇದು ಯಾವ ರೀತಿ ದುರುಪಯೋಗ ಆಗಲಿದೆ ಎಂಬುದು ನನಗಂತೂ ಗೊತ್ತಿಲ್ಲ ಎಂದು ಆರೋಪಿಸಿದರು.
ನಿನ್ನೆ ದಿನ ಮತ್ತೊಂದು ಎಫ್‍ಐಆರ್ ಮಾಡಿ ಬ್ಯಾಂಕ್ ಅಧಿಕಾರಿಗಳ ಹೆಸರನ್ನೂ ಉಲ್ಲೇಖಿಸಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲೇ ನೂರಾರು ಕೋಟಿ ಮೊತ್ತವನ್ನು ಮತ್ತೊಂದು ನಕಲಿ ಬ್ಯಾಂಕ್ ಖಾತೆ ಮೂಲಕ ತೆಲಂಗಾಣ ರಾಜ್ಯಕ್ಕೆ ವರ್ಗಾವಣೆ ಮಾಡಿದ್ದಾರೆ. ಇದರ ಹಿಂದೆ ದೊಡ್ಡ ಪಿತೂರಿ ಅಡಗಿದೆ ಎಂದು ನುಡಿದರು.
ಮುಖ್ಯಮಂತ್ರಿಗಳು ಈ ಪ್ರಕರಣದಲ್ಲಿ ಭಂಡತನ ತೋರಿಸುವ ಅಗತ್ಯವಿಲ್ಲ. ಈ ಸರಕಾರ ತನ್ನ ಭಂಡತನ ಬಿಟ್ಟು, ನೀವು ಪ್ರಾಮಾಣಿಕರಿದ್ದರೆ ರಾಜೀನಾಮೆ ಪಡೆಯಿರಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ಸಿಎಂ ಮತ್ತು ರಾಜ್ಯ ಸರಕಾರಕ್ಕೆ ಒಂದು ವಾರದ ಗಡುವು ಕೊಡುತ್ತಿದ್ದೇವೆ. ಅದರ ಒಳಗಡೆ ರಾಜೀನಾಮೆ ಪಡೆದು ಸಿಬಿಐ ತನಿಖೆಗೊಪ್ಪಿಸುವ ವಿಶ್ವಾಸವಿದೆ. ಇಲ್ಲದಿದ್ದರೆ, ರಾಜ್ಯಾದ್ಯಂತ ಇದರ ವಿರುದ್ಧ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಬಿ.ವೈ. ವಿಜಯೇಂದ್ರ ಅವರು ಎಚ್ಚರಿಕೆ ನೀಡಿದರು.












Click it and Unblock the Notifications