ಗೆದ್ದಿರೋದು ಉಪಚುನಾವಣೆ, ಮೂರು ಲೋಕವನ್ನೇ ಗೆದ್ದ ಭ್ರಮೆಯಲ್ಲಿದ್ದೀರಿ: ಅಶೋಕ್
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯ ಮಾಡಿದ್ದಾರೆ. ಹಣದ ಹೊಳೆ ಹರಿಸಿ, ಓಲೈಕೆ ರಾಜಕಾರಣದ ಮೂಲಕ ಒಂದು ಸಮುದಾಯದ ಮತ ಗಳಿಸಿ ಉಪಚುನಾವಣೆ ಗೆದ್ದ ಮಾತ್ರಕ್ಕೆ ಮೂರು ಲೋಕವನ್ನೇ ಗೆದ್ದು ಬಿಟ್ಟೆವು ಎಂಬ ಭ್ರಮೆಯಲ್ಲಿದೆ ಕಾಂಗ್ರೆಸ್ ಪಕ್ಷ ಎಂದು ಕಾಲೆಳೆದಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ ಯಾವುದು ಸುಳ್ಳು, ಯಾವುದು ಅಪಪ್ರಚಾರ? ವಾಲ್ಮೀಕಿ ನಿಗಮದಲ್ಲಿ ಕೋಟಿ ಕೋಟಿ ಹಣ ಅವ್ಯವಹಾರ ಆಗಿದೆ ಎಂದು ಸ್ವತಃ ತಾವೇ ಸದನದಲ್ಲಿ ಒಪ್ಪಿಕೊಂಡರಲ್ಲ, ಅದು ಸುಳ್ಳಾ? ಮೂಡಾ ಹಗರಣದಲ್ಲಿ ತಮ್ಮ ಪತ್ನಿಯವರ ಹೆಸರಿನಲ್ಲಿರುವ 14 ಸೈಟು ವಾಪಸ್ಸು ಕೊಡುವ ಮೂಲಕ ಪರೋಕ್ಷವಾಗಿ ತಮ್ಮ ತಪ್ಪನ್ನ ಒಪ್ಪಿಕೊಂಡಿದ್ದೀರಲ್ಲ ಅದು ಸುಳ್ಳಾ? ಮೂಡಾ ಹಗರಣದಲ್ಲಿ ತಮ್ಮ ವಿರುದ್ಧ ತನಿಖೆ ಅಗತ್ಯ ಇದೆ ಮಾನ್ಯ ಹೈಕೋರ್ಟ್ ಘಂಟಾಘೋಷವಾಗಿ ಹೇಳಿದ್ದು ಸುಳ್ಳಾ? ಎಂದು ಪ್ರಶ್ನೆ ಕೇಳಿದ್ದಾರೆ.

ಮದ್ಯ ಮಾರಾಟಗಾರರ ಸಂಘ ತಮಗೆ ಬರೆದಿರುವ ಪತ್ರದಲ್ಲಿ ಅಬಕಾರಿ ಇಲಾಖೆಯಲ್ಲಿ ತಿಂಗಳ ಮನಿ ಹೆಸರಿನಲ್ಲಿ, ವರ್ಗಾವಣೆ ದಂಧೆಯಲ್ಲಿ, ಲೈಸೆನ್ಸ್ ನವೀಕರಣದಲ್ಲಿ 700 ಕೋಟಿ ರೂಪಾಯಿ ಲಂಚದ ವ್ಯವಹಾರ ನಡೆದಿದೆ ಎಂದು ಹೇಳಿರುವುದು ಸುಳ್ಳಾ? ವಕ್ಫ್ ಮಂಡಳಿ ಹೆಸರಿನಲ್ಲಿ ಸರ್ಕಾರಿ ಆಸ್ತಿ ಪಾಸ್ತಿ, ಮಠ ಮಂದಿರಗಳ ಜಾಗ, ರೈತರ ಕೃಷಿ ಜಮೀನುಗಳಿಗೆ ಕಳಿಸಿ, ರಾತ್ರೋರಾತ್ರಿ ದಾಖಲೆಗಳನ್ನು ತಿದ್ದುತ್ತಿರುವುದು ಸುಳ್ಳಾ? ಎಂದು ಗುಡುಗಿದ್ದಾರೆ.
ತಮ್ಮ ಸರ್ಕಾರದ ಭ್ರಷ್ಟಾಚಾರಕ್ಕೆ, ಕಿರುಕುಳಕ್ಕೆ ಈವರೆಗೂ ನಾಲ್ಕು ಜನ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು, ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳು ಸುಳ್ಳಾ? ನಿಮ್ಮ ಈ ಕುತಂತ್ರ, ಷಡ್ಯಂತ್ರ, ನಾಟಕ ಜಾಸ್ತಿ ದಿನ ನಡೆಯುವುದಿಲ್ಲ. ತಡವಾದರೂ ಸತ್ಯಕ್ಕೆ ಎಂದಿಗೂ ಜಯ. ಸತ್ಯಮೇವ ಜಯತೇ ಎಂದು ಸಿದ್ದರಾಮಯ್ಯ ವಿರುದ್ಧ ಅಶೋಕ್ ಹೇಳಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?: ಬಿಜೆಪಿ ಹಾಗೂ ಜೆಡಿಎಸ್ ಇಬ್ಬರೂ ಸೇರಿ ಅಪಪ್ರಚಾರ ಮಾಡಿದರು. ಇಬ್ಬರೂ ಒಟ್ಟಾಗಿ ಪಾದಯಾತ್ರೆ ಮಾಡಿದ್ದೇನು, ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡಿ ನಿರಂತರವಾಗಿ ಫಲಾನುಭವಿಗಳನ್ನು ಅವಮಾನಿಸಿದ್ದೇನು, ಸರ್ಕಾರ ಬೀಳಿಸುತ್ತೇವೆ ಎಂದು ಬೆದರಿಕೆ ಒಡ್ಡಿದ್ದೇನು, ಜೊತೆಜೊತೆಗೆ ಚುನಾವಣಾ ಪ್ರಚಾರ ಮಾಡಿದ್ದೇನು, ಇವೆಲ್ಲವನ್ನೂ ಜನರು ಬಹಳ ತಾಳ್ಮೆಯಿಂದ ನೋಡಿ, ಪ್ರಜ್ಞಾಪೂರ್ವಕವಾಗಿ ಯೋಚಿಸಿ ಮತ ನೀಡಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೂ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡಿದ್ದರು. ಮಹಾರಾಷ್ಟ್ರ ಸರ್ಕಾರ ಕರ್ನಾಟಕದಲ್ಲಿ ಗ್ಯಾರಂಟಿಗಳೇ ಜಾರಿ ಆಗಿಲ್ಲ ಎಂದು ಸುಳ್ಳು ಜಾಹಿರಾತನ್ನೇ ನೀಡಿತ್ತು. ನಿರಂತರ ಸುಳ್ಳು, ಅಪಪ್ರಚಾರದಲ್ಲೇ ಈ ಉಪಚುನಾವಣೆ ನಡೆಸಿದ್ದರು. ಎಲ್ಲಾ ಸುಳ್ಳು, ಅಪಪ್ರಚಾರಗಳಿಗೂ ರಾಜ್ಯದ ಜನತೆ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದ್ದರು.
ಮಹಾರಾಷ್ಟ್ರ ಗೆಲುವಿಗೆ ಅಭಿನಂದನೆ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲೆ ಆರ್.ಅಶೋಕ್ ಟ್ವೀಟ್ ಮೂಲಕ ಅಭಿನಂದನೆ ತಿಳಿಸಿದ್ದಾರೆ. ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯಲ್ಲಿ ಅದ್ಭುತ ಗೆಲುವು ಸಾಧಿಸಿದ ಮಹಾರಾಷ್ಟ್ರ ಬಿಜೆಪಿಗೆ ಅಭಿನಂದನೆಗಳು.
ಈ ಮಹತ್ವಪೂರ್ಣ ಗೆಲುವು ಪ್ರಧಾನಿಯವರ ಮೇಲಿನ ಜನರ ನಂಬಿಕೆ ಮತ್ತು ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಸಮೃದ್ಧ ಮಹಾರಾಷ್ಟ್ರಕ್ಕಾಗಿ ನರೇಂದ್ರ ಮೋದಿ ಅವರ ದೃಷ್ಟಿ, ಎಲ್ಲಾ ಮಹಾಯುತಿ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಶುಭಾಶಯಗಳು ಎಂದಿದ್ದಾರೆ. ಇನ್ನು ಜಾರ್ಖಂಡ್‌ನಲ್ಲಿ ಜೆಎಂಎಂ ಬಹುಮತ ಪಡೆದಿದ್ದು, ಸರ್ಕಾರದ ರಚನೆಗೆ ಸಜ್ಜಾಗಿದೆ.












Click it and Unblock the Notifications