'ಸಿಎಂ ಕುರ್ಚಿಗಿರುವ ಕಂಟಕವನ್ನು ವಿಘ್ನ ವಿನಾಯಕನೂ ತಪ್ಪಿಸಲಾರ..' ಹೀಗಂದಿದ್ಯಾರು?
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆ ಹಾಗೂ ಮುಂದಿನ ಸಿಎಂ ಎನ್ನುವ ಮಾತುಗಳದ್ದೇ ಸದ್ಯ ಅಬ್ಬರ ಕೇಳಿಬರುತ್ತಿದೆ. ಇತ್ತೀಚೆಗಂತೂ ನಾನು ಸಿಎಂ ಆಗ್ತೀನಿ, ನಾನೇ ಮುಂದಿನ ಸಿಎಂ ಅನ್ನೋರ ಸಂಖ್ಯೆಯಂತೂ ಹೆಚ್ಚಾಗುತ್ತಲೇ ಇದೆ. ಇಂದು ಕೂಡ ಮತ್ತೊಬ್ಬರು ತಮ್ಮ ಸಿಎಂ ಕುರ್ಚಿಯ ಕನಸನ್ನು ಬಿಚ್ಚಿಟ್ಟಿದ್ದಾರೆ.
ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಕೂಡ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಾನು ಒಂದಲ್ಲ ಒಂದು ದಿನ ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ. ನಾನು ಕೂಡಾ ಪಕ್ಷದಲ್ಲಿ ಹಿರಿಯನಿದ್ದೇನೆ. ಹೀಗಾಗಿ ಮುಂದೆ ಒಂದಲ್ಲ ಒಂದು ದಿನ ಸಿಎಂ ಆಗುತ್ತೇನೆʼ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ಇನ್ನೂ ಅಂತಹ ಸನ್ನಿವೇಶ ಬಂದಿಲ್ಲ. ನಮ್ಮ ಸಿದ್ದರಾಮಯ್ಯ ಅವರೇ ಈಗ ಸಿಎಂ ಆಗಿದ್ದಾರೆ, ಮುಂದೆಯೂ ಅವರೇ ಇರುತ್ತಾರೆ. ಶಿವಾನಂದ ಪಾಟೀಲ್ ಹೇಳಿದಂತೆ ನಾನು ಕೂಡ ಸಿಎಂ ಆಗುತ್ತೇನೆ. ವಿಜಯಪುರದಿಂದ ಸಿಎಂ ಆಗೋದು ನಾನೇ ಎಂದಿದ್ದಾರೆ.
ಇತ್ತೀಚೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣದಲ್ಲಿ ಸಿದ್ದರಾಮಯ್ಯ ತಪ್ಪೇ ಮಾಡಿಲ್ಲ ಎನ್ನುತ್ತಿರುವ ಆರ್.ವಿ ದೇಶಪಾಂಡೆ, ಅವಕಾಶ ಸಿಕ್ಕರೆ ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನೇ ಸಿಎಂ ಆಗುವೆ ಎನ್ನುವ ಹೇಳಿಕೆ ನೀಡಿದ್ದರು. ಇತ್ತೀಚಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸಚಿವ ಆಗಿ ದಣಿದಿದ್ದೇನೆ. ಇನ್ನೇನಿದ್ದರು ಮುಖ್ಯಮಂತ್ರಿ ಆಗಬೇಕು ಅಷ್ಟೆ. ನನಗೆ ಆಸೆ ಇದೆ, ನಿಮ್ಮಂತ ಜನರಿಗೂ ಆಸೆ ಇದೆ ಎಂದಿದ್ದರು.

ಈ ಬಗ್ಗೆ ವ್ಯಂಗ್ಯವಾಡಿರುವ ವಿಪಕ್ಷ ನಾಯಕ ಆರ್.ಅಶೋಕ್, ಕಾಂಗ್ರೆಸ್ ಪಕ್ಷದಲ್ಲಿ ದಿನ ಬೆಳಗಾದರೆ ಒಬ್ಬರಲ್ಲ ಒಬ್ಬ ನಾಯಕರು ಮುಖ್ಯಮಂತ್ರಿ ಕುರ್ಚಿ ಮೇಲೆ ಟವಲ್ ಹಾಕುತ್ತಿದ್ದು, ಈ ರಾಜಕೀಯ ಮೇಲಾಟಕ್ಕೆ ಹಬ್ಬದ ದಿವಸವೂ ವಿರಾಮವಿಲ್ಲದಂತಾಗಿದೆ ಎಂದು ಹಾಸ್ಯ ಮಾಡಿದ್ದಾರೆ. ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿಗೆ ಬಂದಿರುವ ಕಂಟಕವನ್ನ ಸ್ವತಃ ಆ ವಿಘ್ನ ವಿನಾಯಕನೂ ತಪ್ಪಿಸಲಾರ ಅನ್ನಿಸುತ್ತಿದೆ ಎಂದು ಕಾಂಗ್ರೆಸ್ಸಿಗರ ಕಾಲೆಳೆದಿದ್ದಾರೆ.
ಸಿಎಂ ರಾಜೀನಾಮೆ ನೀಡುವುದು ಖಚಿತ ಎಂಬ ಬಿ.ವೈ.ವಿಜಯೇಂದ್ರ ಅವರ ಹೇಳಿಕೆಗೆ ಎಂ.ಬಿಪಾಟೀಲ್ ತಿರುಗೇಟು ನೀಡಿದ್ದಾರೆ. ವಿಜಯೇಂದ್ರ ಅವರಿಗೆ ಹೇಳಿ ಅವರ ತಂದೆ ಸಿಲುಕಿಸಿದ್ದು ಹೇಗೆ ಅಂತ. ಅವರ ಬಗ್ಗೆ ಪಾಪ ವಿಜಯೇಂದ್ರ ತಿಳಿದುಕೊಳ್ಳಬೇಕು. ಏನೇನೋ ಮಾಡಿ ಅವರ ರಾಜೀನಾಮೆ ಕೊಡಿಸಿದರಲ್ಲ? ಬಿಜೆಪಿಯವರೇ ಅವರನ್ನ ಕೆಳಗೆ ಇಳಿಸಿದ್ದು. ಇದನ್ನು ಮೊದಲು ವಿಜಯೇಂದ್ರ ತಿಳಿದುಕೊಳ್ಳಲಿʼ ತಿರುಗೇಟು ನೀಡಿದ್ದಾರೆ.
ಇನ್ನು ದರ್ಶನ್ ಫೋಟೋ ರಿಲೀಸ್ ಮಾಡಿದ್ದೇ ಕಾಂಗ್ರೆಸ್ ಸರ್ಕಾರ ಎನ್ನುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಎಂಬಿ ಪಾಟೀಲ್, ಕೊಲೆ ಆರೋಪಿ ದರ್ಶನ್ ರಾಜಾತಿಥ್ಯ ಗಂಭೀರವಾದ ವಿಷಯ. ಅದಕ್ಕಾಗಿಯೇ ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಮುಡಾ ಕೇಸ್ ಡೈವರ್ಟ್ ಮಾಡುವುದಕ್ಕೆ ಅದರಲ್ಲಿ ಏನಿದೆ. ದರ್ಶನ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಮ್ಮನೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.












Click it and Unblock the Notifications