ವಕ್ಫ್ ಆದೇಶ ಕೊಟ್ಟಿದ್ರೆ ಒಪ್ಕೊಳ್ಳಿ, ಸುಳ್ಳಾದ್ರೆ ಜಮೀರ್ ವಜಾ ಮಾಡಿ
ರಾಜ್ಯ ರಾಜಕಾರಣದಲ್ಲಿ ವಕ್ಫ್ ವಿವಾದ ಭುಗಿಲೆದ್ದಿದೆ. ಮೊದಲಿಗೆ ಸರ್ಕಾರದಿಂದಲೇ ರೈತರಿಗೆ ನೋಟಿಸ್ ಕೊಡಲಾಗಿದೆ ಎಂದು ಆರೋಪವಿತ್ತು. ಈಗ ಸರ್ಕಾರ ನೋಟಿಸ್ ಕೊಟ್ಟಿದ್ರೆ ಹಿಂಪಡೆಯುವುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿರುವುದು ಎಲ್ಲರ ಅನುಮಾನಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರೈತರ ಕೃಷಿ ಭೂಮಿ, ದೇವಸ್ಥಾನಗಳ ಆಸ್ತಿ, ಹಿಂದೂಗಳ ರುದ್ರ ಭೂಮಿ ಸೇರಿದಂತೆ ಸಿಕ್ಕಸಿಕ್ಕ ಜಾಗವೆಲ್ಲಾ ವಕ್ಫ್ ಮಂಡಳಿಗೆ ಸೇರಿದ್ದು ಎಂದು ನೋಟೀಸು ಕಳುಹಿಸುತ್ತಿರುವ ಕಾಂಗ್ರೆಸ್ ಸರ್ಕಾರ, ವಿಪಕ್ಷಗಳು ಈ ಬಗ್ಗೆ ಪ್ರಶ್ನೆ ಮಾಡಿದರೆ, ಚುನಾವಣೆಗಾಗಿ ವಿವಾದ ಸೃಷ್ಟಿ ಮಾಡುತ್ತಿದ್ದಾರೆ, ರೈತರಿಗೆ ನೋಟಿಸು ಬಂದಿದ್ದರೆ ವಾಪಸ್ಸು ಪಡೆಯುತ್ತೇವೆ ಎಂದು ತಿಪ್ಪೆ ಸಾರಿಸುವ ಮಾತಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ ವಕ್ಫ್ ಆಸ್ತಿ ಹೆಸರಿನಲ್ಲಿ ನಡೆಯುತ್ತಿರುವ ಈ ಷಡ್ಯಂತ್ರವೆಲ್ಲ ತಮ್ಮ ಸೂಚನೆಯಂತೆ ನಡೆಯುತ್ತಿದೆ ಎಂದು ಸ್ವತಃ ಸಚಿವ ಜಮೀರ್ ಅಹ್ಮದ್ ಖಾನ್ ಅವರೇ ಹೇಳಿದ್ದಾರೆ. "ತೊಟ್ಟಿಲು ತೂಗುವುದು ಇವರೇ, ಮಗು ಚಿವುಟುವುದು ಇವರೇ" ಎಂಬಂತೆ ಈ ನಾಟಕ ಯಾಕೆ ಸ್ವಾಮಿ? ಎಂದು ಪ್ರಶ್ನಿಸಿದ್ದಾರೆ.
ತಾವು ಆದೇಶ ಕೊಟ್ಟಿದ್ದರೆ ಕೊಟ್ಟಿದ್ದೀನಿ ಎಂದು ಒಪ್ಪಿಕೊಳ್ಳಿ ಅಥವಾ ಸಚಿವ ಜಮೀರ್ ಅಹಮದ್ ಖಾನ್ ಅವರು ಸುಳ್ಳು ಹೇಳುತ್ತಿದ್ದಾರೆ ಎನ್ನುವುದಾದರೆ ಅವರನ್ನ ಸಂಪುಟದಿಂದ ವಜಾ ಮಾಡಿ. ಅದು ಬಿಟ್ಟು ಈ ನವರಂಗಿ ನಾಟಕ ಯಾಕೆ ಆಡುತ್ತೀರಿ ಸಿದ್ದರಾಮಯ್ಯನವರೇ ಎಂದು ಅಶೋಕ್ ವ್ಯಂಗ್ಯ ಮಾಡಿದ್ದಾರೆ.
ರೈತರ ಭೂಮಿಗೆ ಕನ್ನ ಹಾಕಿದ್ದಾಯ್ತು, ದೇವಾಲಯಗಳ ಆಸ್ತಿ ಮೇಲೆ ದಬ್ಬಾಳಿಕೆ ಮಾಡಿದ್ದಾಯ್ತು, ಈಗ ವಕ್ಫ್ ಬೋರ್ಡ್ ಹೆಸರಿನಲ್ಲಿ ಹಿಂದೂಗಳ ಸ್ಮಶಾನವನ್ನೂ ಕಬಳಿಸಲು ಹೊರಟಿದೆ ಈ ಲಜ್ಜೆಗೆಟ್ಟ ಸರ್ಕಾರ. ಸಿದ್ದರಾಮಯ್ಯ ಅವರಿಗೆ ಹಿಂದೂಗಳೆಂದರೆ ನಿಮ್ಮ ಸರ್ಕಾರಕ್ಕೆ ಯಾಕಿಷ್ಟು ದ್ವೇಷ? ವಕ್ಫ್ ಬೋರ್ಡ್‌ಗೆ ಬೇಕಾದರೆ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಸ್ತಿ ಬರೆಸಿಕೊಡಿ, ನಿಮ್ಮದೂ ಕೊಡಿ, ನಿಮ್ಮ ಸಚಿವರು, ಶಾಸಕರದ್ದೂ ಕೊಡಿಸಿ ಎಂದು ತಿರುಗೇಟು ನೀಡಿದ್ದಾರೆ.

ಜನ ಸಾಮಾನ್ಯರ ಮೇಲೆ ಯಾಕಿಷ್ಟು ದಬ್ಬಾಳಿಕೆ ಮಾಡುತ್ತಿದ್ದೀರಿ. ಬ್ರದರ್ಸ್ ಮೇಲಿರುವ ಪ್ರೀತಿಗೆ ಹಿಂದೂಗಳಿಗೆ ಯಾಕೆ ತೊಂದರೆ ಕೊಡುತ್ತೀರಿ? ವಕ್ಫ್ ಮಂಡಳಿ ನೆಪದಲ್ಲಿ ಲ್ಯಾಂಡ್ ಜಿಹಾದ್‌ಗೆ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ಸಹಕಾರ ಇರಲಿದೆ ಎಂದು ಮುಸ್ಲಿಮರಿಗೆ ಪ್ರತ್ಯೇಕವಾಗಿ ಆರನೇ ಗ್ಯಾರೆಂಟಿ ಏನಾದರೂ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ನಾಡಿನ ಜನರಿಗೆ ಅನ್ನ ಕೊಡುವ ರೈತರ ಜಮೀನು ಕಬಳಿಸುವುದಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ವಕ್ಫ್ ಬೋರ್ಡ್ ಸಂಚು ರೂಪಿಸಿದೆ. ಸಿಎಂ ಸಿದ್ದರಾಮಯ್ಯನವರಿಗೆ ಮುಸಲ್ಮಾನರ ಭೂತ ಹಿಡಿದಿದೆ. ಅನ್ನದಾತರ ಜಮೀನು ಕಸಿಯುತ್ತಿರುವ ಕಾಂಗ್ರೆಸ್ ಸರ್ಕಾರದ ಅನ್ಯಾಯದ ವಿರುದ್ಧ ನವೆಂಬರ್ 4ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications