ಕಲಬುರಗಿ, ವಿಜಯಾಪುರ ಹೆಸರಿನಲ್ಲಿ ಹಲವು ಗೊಂದಲ
ಕಲಬುರಗಿ, ನ.5 : ಕರ್ನಾಟಕ ಸರ್ಕಾರ ನ.1ರಿಂದ ಜಾರಿಗೆ ಬರುವಂತೆ ರಾಜ್ಯದ 12 ನಗರಗಳ ಹೆಸರುಗಳನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಆದರೆ, ಗುಲ್ಬರ್ಗ ಮತ್ತು ಬಿಜಾಪುರದ ಹೆಸರು ಬದಲಾವಣೆ ಮಾಡಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ.
ಮರು ನಾಮಕರಣದ ವೇಳೆ ಗುಲ್ಬರ್ಗದ ಹೆಸರನ್ನು ಕಲಬುರಗಿ ಎಂದು ಮತ್ತು ಬಿಜಾಪುರದ ಹೆಸರನ್ನು ವಿಜಯಾಪುರ ಎಂದು ಮರು ನಾಮಕರಣ ಮಾಡಿದ ಆದೇಶ ಜಿಲ್ಲೆಗಳಿಗೆ ತಲುಪಿದೆ. ಆದರೆ, ಈ ಆದೇಶದ ಬಗ್ಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. [12 ನಗರಗಳಿಗೆ ಇಂದಿನಿಂದ ಹೊಸ ಹೆಸರು]

ಕನ್ನಡಪರ ಸಂಘಟನೆಗಳು ಹೆಸರು ಬದಲಾವಣೆಯನ್ನು ಸ್ವಾಗತಿಸಿದರೆ, ಈ ನಿರ್ಧಾರ ಮುಸ್ಲಿಂ ವಿರೋಧಿ ಎಂದು ಆರೋಪಿಸಿರುವ ವಿವಿಧ ಮುಸ್ಲಿಂ ಸಂಘಟನೆಗಳು ಈ ಕುರಿತು ಪ್ರತಿಭಟನೆ ನಡೆಸಿವೆ. ಉಳಿದ 10 ನಗರಗಳ ಹೆಸರಿಗೂ ಯಾವುದೇ ವಿರೋಧ ವ್ಯಕ್ತವಾಗದಿದ್ದರೂ, ಕಲಬುರಗಿ ಮತ್ತು ವಿಜಯಾಪುರದ ಹೆಸರು ಗೊಂದಲ ಉಂಟು ಮಾಡಿದೆ. [ಗುಲ್ಬರ್ಗಾ ಹೆಸರು ಬದಲಾವಣೆಗೆ ಮುಸ್ಲಿಂ ವಿರೋಧ]
ವಿಜಯಪುರ, ವಿಜಯಾಪುರ : ಮರುನಾಮಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ 'ವಿಜಯಪುರ' ಎಂದು ಮುದ್ರಿತವಾಗಿದೆ. ಆದರೆ, ಕರ್ನಾಟಕ ಸರ್ಕಾರ ನ.1ರಂದು ಹೊರಡಿಸಿರುವ ಆದೇಶದಲ್ಲಿ 'ವಿಜಯಪುರ'ದ ಬದಲು 'ವಿಜಯಾಪುರ' ಎಂದಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್, ವಿಜಯಪುರ ಎಂದು ಮರು ನಾಮಕರಣಕ್ಕೆ ಕೇಂದ್ರ ಸರ್ಕಾರಕ್ಕೆ ಕೋರಲಾಗಿತ್ತು. ಆದರೆ, ಈಗ ವಿಜಯಾಪುರ ಎಂದಾಗಿದೆ. ಈ ಕುರಿತು ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ 'ವಿಜಯಪುರ' ಎಂದು ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕಲಬುರಗಿ ಗೊಂದಲವೇನು : ಗುಲ್ಬರ್ಗದ ಹೆಸರನ್ನು ಕಲಬುರಗಿ ಎಂದು ಮರು ನಾಮಕರಣ ಮಾಡಲಾಗಿದೆ. ಇದು ಕನ್ನಡ ಮತ್ತು ಉರ್ದು ಭಾಷೆಗಳ ಮಧ್ಯೆ ಕಂದಕ ಉಂಟು ಮಾಡುವ ಪ್ರಯತ್ನ ಎಂದು ಹಲವು ಸಂಘಟನೆಗಳು ಆರೋಪಿಸಿವೆ. ಕಲಬುರಗಿ, ಕಲ್ಬುರ್ಗಿ ಇವುಗಳಲ್ಲಿ ಯಾವುದನ್ನು ಬರೆಯಬೇಕು ಎಂಬುದು ಗೊಂದಲ ಉಂಟುಮಾಡಿದೆ.












Click it and Unblock the Notifications